Kannada NewsKarnataka NewsNationalPolitics

*ಹುಬ್ಬಳ್ಳಿ ವಿಭಾಗದಲ್ಲಿ 19ನೇ ರೋಜ್ಗಾರ್ ಮೇಳ ಆಯೋಜನೆ: ಪ್ರಹ್ಲಾದ ಜೋಶಿ ಅವರಿಂದ ನೇಮಕಾತಿ ಪತ್ರ ವಿತರಣೆ*

ಪ್ರಗತಿವಾಹಿನಿ ಸುದ್ದಿ: ಇಂದು ದೇಶಾದ್ಯಂತ  ನಡೆದ  19ನೇ ರೋಜ್ಗಾರ್ ಮೇಳವನ್ನು  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ವತಿಯಿಂದ  ಹುಬ್ಬಳ್ಳಿಯ ರೈಲ್ವೆ ಆಫೀಸರ್ಸ್ ಕ್ಲಬ್‌ನಲ್ಲಿ  ರೋಜ್ಗಾರ್ ಮೇಳವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ , ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ  ಮಾನ್ಯ ಶ್ರೀ ಪ್ರಹ್ಲಾದ ಜೋಶಿ ಅವರು  ಉದ್ಘಾಟಿಸಿ, ನೂತನವಾಗಿ ನೇಮಕಗೊಂಡ ಅಭ್ಯರ್ಥಿಗಳಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶಾದ್ಯಂತ “ಉದ್ಯೋಗ ನೇಮಕಾತಿ  ಪರ್ವ”  ಆರಂಭಿಸಲಾಗಿದ್ದು, ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತಿದೆ ಈ ಅಭಿಯಾನದ ಅಂಗವಾಗಿ ಇಂದು ದೇಶದ ವಿವಿಧ ಭಾಗಗಳಲ್ಲಿ ಐವತ್ತೊಂದು ಸಾವಿರ (51,000) ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗುತ್ತಿದೆ ಎಂದರು.

ಭಾರತ ಸರ್ಕಾರವು ಪಾರದರ್ಶಕ ಹಾಗೂ ಭ್ರಷ್ಟಾಚಾರರಹಿತ ನೇಮಕಾತಿ ಪ್ರಕ್ರಿಯೆಗೆ ಆದ್ಯತೆ ನೀಡುತ್ತಿದೆ . “ವಿಕಸಿತ ಭಾರತ” ನಿರ್ಮಾಣದಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ವದ್ದಾಗಿದ್ದು, ಇಂದು ನೇಮಕಗೊಂಡ ಅಭ್ಯರ್ಥಿಗಳು ಸಾರ್ವಜನಿಕ ಸೇವೆಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು. 

Home add -Advt

ಪ್ರಸ್ತುತ ಜಾಗತಿಕ ಸವಾಲಿನ ಪರಿಸ್ಥಿತಿಯ ನಡುವೆಯೂ ಭಾರತವು ಆರ್ಥಿಕವಾಗಿ ಸ್ಥಿರತೆಯನ್ನು ಕಾಯ್ದುಕೊಂಡಿದೆ . ಭಾರತೀಯ ರೈಲ್ವೆ ವಿಶ್ವ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಶೇ.99 ರಷ್ಟು  ವಿದ್ಯುತೀಕರಣ ಸಾಧಿಸುವ ಮೂಲಕ  ಇಂಧನದ  ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ. ಜೊತೆಗೆ, ದೇಶದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿಯೂ ಪ್ರಗತಿ ಸಾಧಿಸಲಾಗಿದೆ ಎಂದರು.

ಈ  ರೋಜ್ಗಾರ್ ಮೇಳ ನೇಮಕಾತಿ ಪತ್ರ ಪಡೆದ ಅಭ್ಯರ್ಥಿಗಳು ಸಂತಸ ವ್ಯಕ್ತಪಡಿಸಿದರು. ಆಯ್ಕೆಯಾದ ಅಭ್ಯರ್ಥಿಗಳಲ್ಲೊಬ್ಬರಾದ ಅವನೀಶ  ಕುಮಾರ ಅವರು ಮಾತನಾಡಿ, ರೈಲ್ವೆಯಲ್ಲಿ ಉದ್ಯೋಗ ಪಡೆಯುವುದು ತಮ್ಮ  ಕನಸಾಗಿತ್ತು, ನಿರಂತರ ಪರಿಶ್ರಮ ಹಾಗೂ ಸಮರ್ಪಿತ  ಅಧ್ಯಯನದ ಫಲವಾಗಿ ರೈಲ್ವೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇದೀಗ ನೇಮಕಾತಿ ಪತ್ರ ದೊರೆತಿರುವುದು ಅತ್ಯಂತ ಸಂತೋಷ ತಂದಿದೆ ಎಂದರು. 

ಕಾರ್ಯಕ್ರಮದಲ್ಲಿ ರೈಲ್ವೆ, ಬ್ಯಾಂಕಿಂಗ್, ಅಂಚೆ ಇಲಾಖೆ, ಸಹಾಯಕ ಉಪನ್ಯಾಸಕ ಹುದ್ದೆಗಳು ಸೇರಿದಂತೆ ಸುಮಾರು ಏಳು ಇಲಾಖೆಗಳ 150 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಪಿ. ಅನಂತ್, ಪ್ರಧಾನ  ಹಿರಿಯ ಸಿಬ್ಬಂದಿ ಅಧಿಕಾರಿ ಸೂರ್ಯ  ಪ್ರಕಾಶ  ಸೇರಿದಂತೆ  ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು. ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಬೇಲಾ ಮೀನಾ ಅವರು ಸಮಾರಂಭದಲ್ಲಿ ಸ್ವಾಗತ ಕೋರಿದರು.

Related Articles

Back to top button