Kannada NewsKarnataka News

ಬಾಲಚಂದ್ರ ಜಾರಕಿಹೊಳಿ ಶಾಸಕರ ನಿಧಿಯಿಂದ 2 ರಕ್ಷಾ ಕವಚ ವಾಹನ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಕೊರೋನಾ ಸೋಂಕಿತರ ನೇರವಿನ ಹಸ್ತ ಹಾಗೂ ಅಮೂಲ್ಯ ಜೀವ ಉಳಿಸುವ ಸಂದರ್ಭದಲ್ಲಿ ಅವಶ್ಯಕವಾಗಿ ಅಂಬ್ಯುಲೆನ್ಸ್‌ಗಳ ಅಗತ್ಯವಿದೆ. ಅರಭಾಂವಿ ಕ್ಷೇತ್ರದ ಶಾಸಕರ ನಿಧಿಯಿಂದ ನೀಡಿರುವ ತುರ್ತು ಸೇವೆ ಸೋಂಕಿತರಿಗೆ ಸಹಕಾರಿಯಾಗುವದು. ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಕಾರಿಗಳಾದ ಶ್ರೀ ಅಭಿನವ ಶಿವಾನಂದ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಮೇಲ್ದರ್ಜೆಗೇರಿಸಿದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜರುಗಿದ ಶಾಸಕರ ಸ್ಥಳೀಯ ಪ್ರಾಧಿಕಾರ ಅಭಿವೃದ್ಧಿ ಯೋಜನೆಯಡಿಯಲ್ಲಿ ಕ್ಷೇತ್ರದ ಮೂಡಲಗಿ ಹಾಗೂ ಕುಲಗೋಡ ಆಸ್ಪತ್ರೆಗಳಿಗೆ ಅಂಬ್ಯುಲೆನ್ಸಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕೊರೋನಾ ೨ನೇ ಅಲೆಯು ಗ್ರಾಮೀಣ ಭಾಗಕ್ಕೆ ಹೆಚ್ಚು ಹಬ್ಬಿದೆ. ಸೋಂತಿತರಿಗೆ ಹಾಗೂ ಸೋಂಕಿನ ಸ್ವಭಾವವಿರುವರಿಗೆ ಸರಿಯಾದ ರೋಗದ ಲಕ್ಷಣ, ಆರೈಕೆ ಕ್ರಮಗಳು, ಮುನ್ನೆಚ್ಚರಿಕೆಯ ಕೊರತೆಯಿಂದಾಗಿ ರೋಗದ ಭೀತಿ ಹೆಚ್ಚಾದಾಗ ಅಗತ್ಯ ವೈದ್ಯಕೀಯ ಸೌಲಭ್ಯಗಳ ಕೊರತೆಯುಂಟಾಗುವದು. ಸೋಂಕಿತರಿಗೆ ತೊಂದರೆಯಾಗಬಾರದೆಂದು ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ಕೊಡಿಸಿರುವ ಅಂಬ್ಯುಲೆನ್ಸನ್ನು ತುರ್ತು ಸಂದರ್ಭಗಳಲ್ಲಿ ಉಪಯೋಗಿಸಿಕೊಂಡು ಅಮೂಲ್ಯ ಜೀವ ಉಳಿಸಿಕೊಳ್ಳಬೇಕು. ಕ್ಷೇತ್ರದ ಜನತೆ ಯಾವುದೇ ತೊಂದರೆಗೆ ಸಿಲುಕಬಾರದೆಂದು ಶಾಸಕರು ಹಾಗೂ ಎನ್.ಎಸ್.ಎಫ್ ಟೀಂವತಿಯಿಂದ ಹಗಲಿರುಳು ಶ್ರಮಿಸುತ್ತಿರುವದು ನಿಜಕ್ಕೂ ಮೆಚ್ಚುಗೆ ಪಡುವಂತಹದು ಎಂದು ನುಡಿದರು.
ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಬಲಿ ಮಾತನಾಡಿ, ವೈದ್ಯಕೀಯ ಸಿಬ್ಬಂದಿ ಹಾಗೂ ಸೇವಾ ವರ್ಗದವರು ಪ್ರತಿ ಕ್ಷಣವು ಸೋಂಕಿತರ, ಸ್ವಭಾವವಿರುವ ಹಾಗೂ ಅವಲಂಬಿತರ ಕಾಳಜಿಯಲ್ಲಿದ್ದೇವೆ. ರೋಗಿಗೆ ರೋಗದ ಬಗ್ಗೆ ಭಯ ತರಿಸದೆ, ಮನೋ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯ ಅತೀ ಮುಖ್ಯ. ಕೋವಿಡ್-೧೯ ಎರಡನೇ ಅಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದ ಜನತೆ ಹೈಟೇಕ ವೈದ್ಯೋಪಚಾರ ಸಿಗಲೆಂದು ಅಂಬ್ಯುಲೆನ್ಸ ತುರ್ತು ಸೇವೆ ಅಗತ್ಯವಾಗಿದೆ. ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ವೈಯಕ್ತಿಕ ಕಾಳಜಿ, ತಾಲೂಕಾಡಳಿತ, ವೈದ್ಯಕೀಯ ಸಿಬ್ಬಂದಿಗಳ ಪಾತ್ರ ಬಹುಮುಖ್ಯವಾಗಿದೆ. ಸಾರ್ವಜನಿಕರು ಸೋಂಕಿತರಿಗೆ ಹೆದರದೆ ಮುನ್ನಚ್ಚರಿಕೆ ಕ್ರಮಗಳು ಹಾಗೂ ನಮ್ಮಲ್ಲಿ ಆರೋಗ್ಯದ ಏರುಪೇರುಗಳ ಮೇಲೆ ಗಮನ ಹರಿಸಬೇಕು ಎಂದು ಮನವಿ ಮಾಡಿಕೊಂಡರು.
ಚಿಕ್ಕೋಡಿ ಅಪರ ಜಿಲ್ಲಾ ವೈದ್ಯಾಧಿಕಾರಿ ಡಾ. ಎಸ್.ಎಸ್ ಗಡಾದ ಮಾತನಾಡಿ, ಸೋಂಕಿನ ತುರ್ತು ಚಿಕಿತ್ಸೆಯ ಆಕ್ಸಿಜನ್,  ವೈದ್ಯ ಸಿಬ್ಬಂದಿ, ರೋಗಿಯ ಪ್ರಥಮೋಪಚಾರಕ್ಕೆ ಬೇಕಾಗುವ ಅಗತ್ಯ ಸೇವೆಗಳು ದೊರೆಯುತ್ತವೆ. ಸುರಕ್ಷಿತವಾಗಿ ಜಾಗೃತರಾಗಿ ಮನೆಯಲ್ಲಿಯೇ ಇರುವ ಮೂಲಕ ಕೊರೋನಾ ಚೈನ್ ಬ್ರೇಕ್ ಮಾಡುವ ಕುರಿತು ವಿವರಿಸಿದರು.
ಚಾಲನಾ ಕಾರ್ಯಕ್ರಮದಲ್ಲಿ ತಹಶೀಲ್ದಾರ ಡಾ. ಮೋಹನಕುಮಾರ ಭಸ್ಮೆ, ಶಾಸಕರ ಆಪ್ತಸಹಾಯಕ ನಾಗಪ್ಪ ಶೇಖರಗೋಳ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಟಿ.ಎಚ್.ಒ ಡಾ. ಎಮ್.ಎಸ್ ಕೊಪ್ಪದ, ಹಿರಿಯ ತಜ್ಞ ವೈದ್ಯ ಡಾ. ಆರ್.ಎಸ್ ಬೆಣಚಿನಮರಡಿ, ಬಿಇಒ ಅಜಿತ ಮನ್ನಿಕೇರಿ, ಗ್ರೇಡ್ ೨ ತಹಶೀಲ್ದಾರ ಶಿವಾನಂದ ಬಬಲಿ, ತಾಪಂ ಎಡಿ ಎಸ್.ಎಸ್ ರೊಡ್ಡನವರ, ಸಿಪಿಐ ವೇಂಕಟೇಶ ಮುರನಾಳ, ಪಿಎಸ್‌ಐ ಎಚ್ ವಾಯ್ ಬಾಲದಂಡಿ, ಸ್ಥಳೀಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಪುರಸಭೆ ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಆರೋಗ್ಯ ಸಲಹಾ ಸಮಿತಿಯ ಆರ್.ಪಿ ಸೋನವಾಲಕರ, ಡಾ. ಎಸ್.ಎಸ್ ಪಾಟೀಲ, ಹನಮಂತ ಪೂಜೇರಿ, ಟೀಂ ಎನ್.ಎಸ್.ಎಫ್‌ನ ನಿಂಗಪ್ಪ ಕುರಬೇಟ ಹಾಗೂ ಪುರಸಭೆ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕೋವಿಡ್ ಸೋಂಕಿತರ ಆರೈಕೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅವಿರತವಾಗಿ ಶ್ರಮಿಸುತ್ತಿದ್ದು, ಗೋಕಾಕ, ಮಲ್ಲಾಪೂರ ಪಿಜಿ ಮತ್ತು ಮೂಡಲಗಿ ಪಟ್ಟಣಗಳಲ್ಲಿ ಕೊರೊನ ಕಾಳಜಿ ಕೇಂದ್ರಗಳನ್ನು ತೆರೆದು ಸೋಂಕಿತರಿಗೆ ಸ್ವಂತ ವೆಚ್ಚದಲ್ಲಿ ಆಕ್ಸಿಜನ್, ಔಷಧಿಗಳ ಕಿಟ್‌ಗಳನ್ನು ನೀಡುತ್ತಿದ್ದಾರೆ. ಅಲ್ಲದೇ ಸೋಂಕಿತರ ಆರೋಗ್ಯ ವಿಚಾರಿಸಲು ಬರುವ ಕುಟುಂಬಸ್ಥರಿಗೆ ಮಲ್ಲಾಪೂರ ಪಿಜಿಯಲ್ಲಿ ಶೆಡ್ ನಿರ್ಮಿಸಿ ಆಸರೆಯಾಗಿದ್ದಾರೆ. ಪ್ರತಿ ಸಂದರ್ಭಗಳಲ್ಲೂ ಜನರು ಕಷ್ಟದಲ್ಲಿದ್ದರೆ ಅವರ  ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ
-ಶ್ರೀ ಅಭಿನವ ಶಿವಾನಂದ ಸ್ವಾಮೀಜಿಗಳು

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button