Latest

*ಶ್ರೀ ಸಿದ್ದೇಶ್ವರ ಸ್ವಾಮೀಜಿ ನಡೆದಾಡಿದ ನಾಡಿನಲ್ಲಿ 37 ನೇ ಪತ್ರಕರ್ತರ ರಾಜ್ಯ ಸಮ್ಮೇಳನ*

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಬಸವನಾಡು, ಗೊಮ್ಮಟ ಬೀಡು, ಶ್ರೀ ಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ಷೇತ್ರ ವಿಜಯಪುರದಲ್ಲಿ ಫೆಬ್ರವರಿ 4 ಮತ್ತು5 ರಂದು ಶನಿವಾರ ಮತ್ತು ಭಾನುವಾರ ಎರಡು ದಿನ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ ನಡೆಯಲಿದೆ.

ನಗರದ ಪತ್ರಿಕಾ ಭವನದಲ್ಲಿ ರವಿವಾರ ಸಮ್ಮೇಳನದ ಸಿದ್ಧತೆಗಳನ್ನು ಪರಿಶೀಲಿಸಲು ಕರೆಯಲಾಗಿದ್ದ ವಿವಿಧ ಸಮಿತಿಗಳ ಸಭೆಯ ಸಂದರ್ಭದಲ್ಲಿ‌ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸಮ್ಮೇಳನ ಯಶಸ್ವಿಗೆ ಎಲ್ಲರ ಸಹಕಾರ ಕೋರಿದರು.

ಐತಿಹಾಸಿಕ ವಿಜಯಪುರ ನಗರದಲ್ಲಿ ಪ್ರಪ್ರಥಮ ಬಾರಿಗೆ ಪತ್ರಕರ್ತರ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ. ಗಡಿಭಾಗದಲ್ಲಿ ನಡೆಯುವ ಈ ಸಮ್ಮೇಳನ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದರು.

ರಾಜ್ಯದ ಬೇರೆ- ಬೇರೆ ಜಿಲ್ಲೆಗಳಿಂದ ಆಗಮಿಸುವ ಪ್ರತಿನಿಧಿಗಳಿಗೆ ಊಟ, ವಸತಿ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿ ಒಳ್ಳೆಯ ಆತಿಥ್ಯ ನೀಡಿದರೆ ಬೇರೆ ಜಿಲ್ಲೆಗಳಿಂದ ಬಂದ ಪ್ರತಿನಿಧಿಗಳು ಈ ಜಿಲ್ಲೆಯ ಬಗ್ಗೆ ಮನದಲ್ಲಿ ಸವಿನೆನಪು ಇಟ್ಟುಕೊಂಡು ತಮ್ಮೂರಿಗೆ ಹೋಗುವರು. ಈ ಸಮ್ಮೇಳನ ನಮ್ಮ ಮನೆಯ ಕಾರ್ಯಕ್ರಮವೆಂದು ತಿಳಿದು ಎಲ್ಲರೂ ಉತ್ಸಾಹದಿಂದ ಒಗ್ಗೂಡಿ ಕೆಲಸ ಮಾಡುವ ಮೂಲಕ ಸಮ್ಮೇಳನದ ಯಶಸ್ಸಿಗೆ ಕಾರಣರಾಗಬೇಕು ಎಂದು ಅವರು ಹೇಳಿದರು.

ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಜ.9 ಮತ್ತು 10‌ರಂದು ಮುಂದೂಡಲಾಗಿತ್ತು. ಮುಖ್ಯಮಂತ್ರಿ ಸಮ್ಮತಿಯೊಂದಿಗೆ ಫೆ.4 ಮತ್ತು 5 ರಂದು ಸಮ್ಮೇಳನ ದಿನಾಂಕ ನಿಗದಿ ಮಾಡಲಾಗಿದೆ ಎಂದರು.

ಶ್ರೀ ಸಿದ್ಧೇಶ್ವರ ಶ್ರೀಗಳು ಈ ಸಮ್ಮೇಳನದ ಸಾನಿಧ್ಯ ವಹಿಸಲು ಸಂತೋಷದಿಂದ ಒಪ್ಪಿಕೊಂಡು ಸಮ್ಮೇಳನ ಗಡಿಭಾಗದಲ್ಲಿ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದ್ದರು. ಅವರ ಸಾನಿಧ್ಯದಲ್ಲಿ ಈ ಸಮ್ಮೇಳನ ನಡೆಯಬೇಕಾಗಿತ್ತು. ಆದರೆ ಅವರು ನಮ್ಮನ್ನಗಲಿರುವುದು ನಮಗೆಲ್ಲ ತುಂಬಾ ದುಃಖವನ್ನುಂಟು ಮಾಡಿದೆ ಎಂದರು.

ಫೆ. 4 ರಂದು ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಚಿವರು, ಸ್ಥಳೀಯ ಶಾಸಕರು
ಸಮ್ಮೇಳನದಲ್ಲಿ ಭಾಗವಹಿಸುವರು ಎಂದರು.

ಫೆ. 5 ಪ್ರತಿನಿಧಿಗಳ ಸಮಾವೇಶ ನಡೆಯುವುದು. ನಂತರ ಸಮಾರೋಪ ಸಮಾರಂಭ ಹಾಗೂ ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಜರುಗುವುದು. ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸುವರು. ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಹಲವಾರು ಸಚಿವರು, ಸಂಸದರು, ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸುವರು ಎಂದರು.

ಈ ಬಾರಿ ಸಮ್ಮೇಳನದಲ್ಲಿ 3 ಗೋಷ್ಠಿಗಳನ್ನು ಆಯೋಜಿಸಲಾಗಿದೆ. ನವಮಾಧ್ಯಮ ಮತ್ತು ಪತ್ರಕರ್ತರು ಎಂಬ ವಿಷಯದ ಬಗ್ಗೆ ಒಂದು ಗೋಷ್ಠಿ ನಡೆದರೆ, ಸುದ್ದಿಮನೆ ಮತ್ತು ಮಹಿಳೆಯರು ಎಂಬ ವಿಷಯದ ಬಗ್ಗೆ ಮತ್ತೊಂದು ಗೋಷ್ಠಿ ನಡೆಯಲಿದೆ. ಗಡಿ ಭಾಗದ ಮಾಧ್ಯಮಗಳ ಪಾತ್ರ ಕುರಿತು ಈತನಕ ಚರ್ಚೆಗಳು ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಮಾಧ್ಯಮ ಎಂಬ ವಿಷಯ ಕುರಿತು ವಿಶೇಷ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ ಎಂದರು.

ಸುದ್ದಿ ಮನೆಯಲ್ಲಿ ಪತ್ರಿಕಾ ವಿತರಕರು ಮಹತ್ವದ ಕೊಂಡಿಯಾಗಿದ್ದಾರೆ. ಆ ಕಾರಣಕ್ಕಾಗಿ ಪತ್ರಿಕಾ ವಿತರಕರ ಸಮಸ್ಯೆಗಳ ಕುರಿತು ಸಂವಾದ ನಡೆಯಲಿದೆ ಎಂದು ಶಿವಾನಂದ ತಗಡೂರ ವಿವರಿಸಿದರು.

ಇದೇ ಸಮ್ಮೇಳನದಲ್ಲಿ ವಿಜಯಪುರ ಜಿಲ್ಲೆಯ ಹತ್ತು ಜನ ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನವಿರುತ್ತದೆ ಎಂದರು.

ಎರಡು ದಿನಗಳ ಈ ಸಮ್ಮೇಳನದಲ್ಲಿ ಐದು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ಎರಡೂವರೆ ಸಾವಿರ ಪತ್ರಕರ್ತರು ಪ್ರತಿನಿಧಿಗಳ ನೊಂದಾಯಿಸಿಕೊಂಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಉಪಾಧ್ಯಕ್ಷರಾದ ಇಂದುಶೇಖರ ಮಣೂರ, ಪ್ರಕಾಶ ಬೆಣ್ಣೂರ, ಫಿರೋಜ್ ರೋಜಿನದಾರ, ಕಾರ್ಯದರ್ಶಿಗಳಾದ ಅವಿನಾಶ ಬಿದರಿ, ಮಲ್ಲಿಕಾರ್ಜುನ ಕೆಂಭಾವಿ, ಖಜಾಂಚಿಗಳಾದ ರಾಹುಲ ಆಪ್ಟೆ, ದೀಪಕ ಶಿಂತ್ರೆ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ.ಬಿ.ವಡವಡಗಿ, ಕೆ.ಕೆ.ಕುಲಕರ್ಣಿ, ಕೌಶಲ್ಯ ಪನ್ನಾಳಕರ, ವಿಜಯವಾಣಿ ಸ್ಥಾನಿಕ ಸಂಪಾದಕ ಕೆ.ಎನ್.ರಮೇಶ, ಅಕ್ಕಮಹಾದೇವಿ ಮಹಿಳಾ ವಿ.ವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಓಂಕಾರ ಕಾಕಡೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಲಿಂ.ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಮೂಲಕ ಗೌರವ ನಮನ ಸಲ್ಲಿಸಿ ನಂತರ ಎರಡು ನಿಮಿಷ ಮೌನ ಆಚರಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

*ಮೂಡಲಗಿಯಲ್ಲಿ ಮಾಜಿ ಸೈನಿಕರ ಸಂಘಕ್ಕೆ ಉಚಿತ ನಿವೇಶನ : ಶಾಸಕ ಬಾಲಚಂದ್ರ ಜಾರಕಿಹೊಳಿ*

https://pragati.taskdun.com/mudalagifree-site-ex-servicemen-associationmla-balachandra-jarakiholi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button