Belagavi NewsBelgaum NewsElection NewsKannada NewsKarnataka NewsPolitics

ಲೋಕಸಭಾ ಚುನಾವಣೆ- 2024: ಮತದಾನ ಹೆಚ್ಚಳ

ಬೆಳಗಾವಿ ಜಿಲ್ಲೆಯಲ್ಲಿ ಶೇ.೭೪.೮೭ ರಷ್ಟು ಮತದಾನ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರಜಾಪ್ರಭುತ್ವದ ಹಬ್ಬವಾಗಿರುವ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು, ಮೂರು ಲೋಕಸಭಾ ಮತಕ್ಷೇತ್ರಗಳ ವ್ಯಾಪ್ತಿಯನ್ನು ಒಳಗೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ ಶೇ.೭೪.೮೭ ರಷ್ಟು ಮತದಾನವಾಗಿದೆ.
೦೧- ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಶೇ.೭೮.೫೧ ಮತ್ತು ೦೨-ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಶೇ.೭೧.೩೮ರಷ್ಟು ಮತದಾನವಾಗಿರುತ್ತದೆ. ಇದಲ್ಲದೇ ಕೆನರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.೭೩.೮೭ ಮತ್ತು ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. ೭೬.೨೫ ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳ:
ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ೨೦೧೯ ರಲ್ಲಿ ಶೇ.೭೫.೫೨ ರಷ್ಟು ಮತದಾನವಾಗಿದ್ದರೆ ೨೦೨೪ ರಲ್ಲಿ ಶೇ.೭೮.೫೧ ರಷ್ಟು ಮತದಾನವಾಗುವ ಮೂಲಕ ಪ್ರತಿಶತ ೩ ರಷ್ಟು ಹೆಚ್ಚಳವಾಗಿರುತ್ತದೆ.
ಅದೇ ರೀತಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ೨೦೧೯ ರ ಚುನಾವಣೆಯಲ್ಲಿ ಶೇ. ೬೭.೭೦ ರಷ್ಟು ಮತದಾನವಾಗಿತ್ತು. ಈ ಬಾರಿ ೨೦೨೪ ರಲ್ಲಿ ಶೇ.೭೧.೩೮ ರಷ್ಟು ಮತದಾನವಾಗುವ ಮೂಲಕ ಪ್ರತಿಶತ ೪ ರಷ್ಟು ಹೆಚ್ಚಳವಾಗಿರುತ್ತದೆ ಎಂದು ನಿತೇಶ್ ಪಾಟೀಲ ತಿಳಿಸಿದ್ದಾರೆ.
ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಮತದಾನ ನಡೆಯಿತು. ಕೆಲವು ಕಡೆಗಳಲ್ಲಿ ೬ ಗಂಟೆಯ ಒಳಗೆ ಮತಗಟ್ಟೆಯ ಸರದಿಯಲಿದ್ದ ಮತದಾರರಿಗೆ ಟೋಕನ್ ವಿತರಿಸಿದ ಬಳಿಕ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಜಿಲ್ಲೆಯ ಎಲ್ಲ ಕಡೆಗಳಲ್ಲೂ ಮತದಾನ ಶಾಂತಿಯುತವಾಗಿ ನಡೆದಿರುತ್ತದೆ.
ಅಂತರ್ ರಾಷ್ಟ್ರೀಯ ನಿಯೋಗದ ಭೇಟಿ:
ಭಾರತ ದೇಶದ ಚುನಾವಣಾ ಪ್ರಕ್ರಿಯೆ ವೀಕ್ಷಣೆಗೆ ಆಗಮಿಸಿರುವ ಐದು ದೇಶಗಳ ಚುನಾವಣಾ ಆಯೋಗಗಳ ಹತ್ತು ಜನ ಅಂತರ್ ರಾಷ್ಟ್ರೀಯ ನಿಯೋಗದ ಸದಸ್ಯರು ನಸುಕಿನ ಜಾವದಿಂದಲೇ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ವೀಕ್ಷಿಸಿದರು.
ಬೆಳಗಾವಿ ಜಿಲ್ಲೆಗೆ ಆಗಮಿಸಿದ ಕಾಂಬೋಡಿಯಾ, ನೇಪಾಳ, ಮೊಲ್ಡೊವಾ, ಸಿಷೆಲ್ ಹಾಗೂ ತುನಿಷಿಯಾ ದೇಶಗಳ ಚುನಾವಣಾ ಆಯೋಗಗಳ ಹತ್ತು ಸದಸ್ಯರ ತಂಡವು ವಾಸ್ತವ ಮತದಾನ ಆರಂಭಕ್ಕಿಂತ ಮುಂಚೆ ನಡೆಯುವ ಅಣಕು ಮತದಾನ ಪ್ರಕ್ರಿಯೆಯನ್ನು ಕೂಡ ವೀಕ್ಷಿಸಿದರು.
ಇದಲ್ಲದೇ ಸಖಿ ಮತಗಟ್ಟೆ(ಪಿಂಕ್ ಬೂತ್) ಸೇರಿದಂತೆ ವಿವಿಧ ಮತಟಗಟ್ಟೆಗಳಿಗೂ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಸಾಮಾನ್ಯ ವೀಕ್ಷಕರು ಹಾಗೂ ಚುನಾವಣಾಧಿಕಾರಿಗಳ ನಿಗಾ:
ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಸಾಮಾನ್ಯ ವೀಕ್ಷಕರಾದ ಎಂ.ಕೆ.ಅರವಿಂದ ಕುಮಾರ್ ಹಾಗೂ ಜಿ.ಎಸ್.ಪಾಂಡಾ ದಾಸ್ ಅವರು ಕೂಡ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಸುಗಮ ಹಾಗೂ ಶಾಂತಿಯುತವಾಗಿರುವ ಬಗ್ಗೆ ಖಚಿತಪಡಿಸಿಕೊಂಡರು.
ಇದಲ್ಲದೇ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆಯ ಮೂಲಕ ಸೂಕ್ಷ್ಮ ಮತಗಟ್ಟೆಗಳಲ್ಲಿ ನಡೆದ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ನಿತೇಶ್ ಪಾಟೀಲ ಮತ್ತು ಚಿಕ್ಕೋಡಿ ಕ್ಷೇತ್ರದ ಚುನಾವಣಾಧಿಕಾರಿ ರಾಹುಲ್ ಶಿಂಧೆ ಅವರು ಕೂಡ ಮತಗಟ್ಟೆಗಳಿಗೆ ಭೇಟಿ ನೀಡಿ, ಮತದಾರರಿಗೆ ಒದಗಿಸಲಾಗಿರುವ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.

ಜಿಲ್ಲೆಯಲ್ಲಿ ನಡೆದ ಮತದಾನ ವಿವರ:

  • ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟಾರೆ ಶೇ.ಶೇ.೭೧.೩೮ ರಷ್ಟು ಮತದಾನವಾಗಿರುತ್ತದೆ.
    ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.೭೧.೯೨, ಗೋಕಾಕ ಶೇ.೭೧.೦೬ ಬೆಳಗಾವಿ(ಉತ್ತರ) ಶೇ.೬೩.೪೨ ಬೆಳಗಾವಿ(ದಕ್ಷಿಣ) ಶೇ.೬೭.೫೨ ಬೆಳಗಾವಿ(ಗ್ರಾಮೀಣ) ಶೇ.೭೬.೮೭ ಬೈಲಹೊಂಗಲ ಶೇ.೭೩.೫ ಸವದತ್ತಿ-ಯಲ್ಲಮ್ಮ ಶೇ.೭೬.೭೩ ಹಾಗೂ ರಾಮದುರ್ಗ ಶೇ.೭೩.೬ ಮತದಾನ ಆಗಿರುತ್ತದೆ.
  • ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟಾರೆ ಶೇ.೭೮.೫೧ ಮತದಾನವಾಗಿರುತ್ತದೆ.
    ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. ೭೯.೭೩, ಚಿಕ್ಕೋಡಿ-ಸದಲಗಾ ಶೇ. ೭೯.೫೮ ಅಥಣಿ ಶೇ.೭೮.೬೬ ಕಾಗವಾಡ ಶೇ.೭೮.೮೪ ಕುಡಚಿ ಶೇ. ೭೪.೭೪ ರಾಯಬಾಗ ಶೇ.೭೫.೮ ಹುಕ್ಕೇರಿ ಶೇ.೭೮.೩೫ ಹಾಗೂ ಯಮಕನಮರಡಿ ಶೇ.೮೨.೧೪ ರಷ್ಟು ಮತದಾನ ಆಗಿರುತ್ತದೆ.

  • ಮತಯಂತ್ರಗಳು ಸ್ಟ್ರಾಂಗ್ ರೂಮ್ ನಲ್ಲಿ ಭದ್ರ:
    ಮತದಾನದ ಬಳಿಕ ಚುನಾವಣಾ ಸಿಬ್ಬಂದಿಯು ತಮ್ಮ ತಮ್ಮ ಮತಗಟ್ಟೆಗಳಿಂದ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಪೊಲೀಸ್ ಭದ್ರತೆಯೊಂದಿಗೆ ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಡಿಮಸ್ಟ ರಿಂಗ್ ಕೇಂದ್ರಗಳಿಗೆ ರಾತ್ರಿಯವರೆಗೆ ತಲುಪಿಸಿದರು.
    ಡಿಮಸ್ಟರಿಂಗ್ ಕೇಂದ್ರಗಳಿಂದ ಮತ ಎಣಿಕೆ ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಮ್ ಗಳಿಗೆ ಮಧ್ಯರಾತ್ರಿಯವರೆಗೆ ಮತಯಂತ್ರಗಳನ್ನು ಕಳುಹಿಸಲಾಯಿತು.
    ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರವನ್ನು ಬೆಳಗಾವಿ ನಗರದ ಆರ‍್ಪಿ.ಡಿ. ಮಹಾವಿದ್ಯಾಲಯದಲ್ಲಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರವನ್ನು ಚಿಕ್ಕೋಡಿ ನಗರದ ಆರ‍್ಡಿ.ಕಾಲೇಜಿನಲ್ಲಿ ಸ್ಥಾಪಿಸಲಾಗಿರುತ್ತದೆ.
    ಆಯಾ ಮತ ಎಣಿಕೆ ಕೇಂದ್ರಗಳ ಸ್ಟ್ರಾಂಗ್ ರೂಮ್ ಗಳಲ್ಲಿ ಮತಯಂತ್ರಗಳನ್ನು ಇರಿಸಲಾಗಿರುತ್ತದೆ. ಜೂನ್ ೪ ರಂದು ಮತ ಎಣಿಕೆ ನಡೆಯಲಿದೆ.

  • ಜಿಲ್ಲೆಯ ಜನತೆಗೆ ಕೃತಜ್ಞತೆ:
    ಲೋಕಸಭೆ ಚುನಾವಣೆಯನ್ನು ಅತ್ಯಂತ ಶಾಂತಿಯುತ ಹಾಗೂ ಸುಗಮವಾಗಿ ನಡೆಸಲು ಸಹಕರಿಸಿದ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರಿಗೆ, ಜನಪ್ರತಿನಿಧಿಗಳು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಕಂದಾಯ, ಜಿಲ್ಲಾ ಪಂಚಾಯತಿ ಹಾಗೂ ಪೊಲೀಸ್ ಸೇರಿದಂತೆ ಪ್ರತಿಯೊಂದು ಇಲಾಖೆಗಳ ಅಧಿಕಾರಿಗಳು/ಸಿಬ್ಬಂದಿ, ಸ್ವೀಪ್ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಮತದಾನ ಹೆಚ್ಚಳಕ್ಕೆ ಕೈಜೋಡಿಸಿದ ಸಂಘ-ಸಂಸ್ಥೆಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ರಾಹುಲ್ ಶಿಂಧೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಮತದಾನ ಹೆಚ್ಚಳಕ್ಕೆ ಸಹಾಯಕವಾದ ಸ್ವೀಪ್ ಚಟುವಟಿಕೆಗಳು: ರಾಹುಲ್ ಶಿಂಧೆ


:ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ಕ್ಕೆ ಸಂಬಂಧಿಸಿದಂತೆ ಮೇ. ೭ ರಂದು ಜರುಗಿದ ಮತದಾನದಲ್ಲಿ ಚಿಕ್ಕೋಡಿ ಲೋಕಸಭಾ ೭೮.೬೩% ರಷ್ಟು ಮತಕ್ಷೇತ್ರದ ವ್ಯಾಪ್ತಿಯಲ್ಲಿ ಹಾಗೂ ಬೆಳಗಾವಿ ಲೋಕಸಭಾ ೭೧.೪೯ ಮತಕ್ಷೇತ್ರದ ಮತದಾನವಾಗಿರುತ್ತದೆ.
೨೦೧೯ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ೭೫.೫೨% ರಷ್ಟು ಹಾಗೂ ಬೆಳಗಾವಿ ೬೭.೪೪% ರಷ್ಟು ಮತದಾನವಾಗಿದ್ದು ಪ್ರಸಕ್ತ ಚುನಾವಣೆಯಲ್ಲಿ ಪ್ರತಿಶತ ತಲಾ ೩% ಮತ್ತು ೪% ರಷ್ಟು ಹೆಚ್ಚಿನ ಮತದಾನವಾಗಿರುತ್ತದೆ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಹುಲ ಶಿಂಧೆ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಜಿಲ್ಲೆಯಾದ್ಯಂತ ಜೊರಾದ ಸ್ವೀಪ್ ಚಟುವಟಿಕೆ
ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಸಾರ್ವತ್ರಿಕ ಲೋಕಸಭಾ ಚುನಾವಣೆ-೨೦೨೪ ರ ಅಂಗವಾಗಿ ಜಿಲ್ಲೆಯಾದ್ಯಂತ ಮತದಾನ ಜಾಗೃತಿಗಾಗಿ ಸ್ವೀಪ್ ಚಟುವಟಿಕೆಯಡಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ೧೮ ಮತಕ್ಷೆತ್ರಗಳಲ್ಲಿ ಬೀದಿ ನಾಟಕ, ಮನೆ ಮನೆ ಭೇಟಿ ಕಾರ್ಯಕ್ರಮ, ಬೋಟಿಂಗ್, ಬೈಕ್ ರ‍್ಯಾಲಿ, ಕಾಲ್ನಡಿಗೆ ಜಾಥಾ, ನೋ ಯುವರ್ ಬುಥ್ , ಆಟೋ ಪ್ರಚಾರ, ಬಸ್ ನಿಲ್ದಾಣಗಳಲ್ಲಿ ಜಿಂಗಲ್ಸ ಮೂಲಕ ಪ್ರಚಾರ, ಕುಂಬ ಮೇಳ, ಎತ್ತಿನ ಚಕ್ಕಡಿ ಮೂಲಕ ರ‍್ಯಾಲಿ, ಯುವ ಮತದಾರರಿಗೆ ಕ್ರಿಕೇಟ್ ಪಂದ್ಯಾವಳಿ, ಮೆಹಂದಿ ಸ್ಪರ್ದೆ, ರಂಗೊಲಿ ಸ್ಪರ್ಧೆ, ಹಸ್ತಾಕ್ಷರ ಸಂಗ್ರಹ, ಹೆಚ್ಚಿನ ಜನರು ಸೇರುವ ಸ್ಥಳಗಳಲ್ಲಿ ದೊಡ್ಡ ಅಳತೆಯ ಬ್ಯಾನರ್ ಮತ್ತು ಸೆಲ್ಪಿ ಸ್ಟ್ಯಾಂಡ್ ಅಳವಡಿಕೆ, ಪ್ಲವರ್ ಕ್ಯಾಂಪೆನ್, ಯುವ ಮತದಾರರ ಸಭೆ, ಸಂತೆ, ಮದುವೆ ಹೆಚ್ಚಿನ ಜನ ಸೇರುವ ಸ್ಥಳಗಳಲ್ಲಿ ಜಾಗೃತಿ, ಕಡಮೆ ಮತದಾನವಾದ ಸ್ಥಳಗಳಲ್ಲಿ ಪುಷ್ಪ ನೀಡುವುದರ ಮೂಲಕ ಜಾಗೃತಿ , ಸಮಾಜಿಕ ಮಾದ್ಯಮಗಳಲ್ಲಿ ಜಾಗೃತಿ, ಪಂಜಿನ ಮೆರವಣಿಗೆ, ನಮ್ಮ ನಡೆ ಮತಗಟ್ಟೆ ಕಡೆ, ಹಾಟ್ ಎರ್ ಬಲೂನ್, ಮಾಸ್ಕಾಟ್ ಅನಾವರಣ, ಮನೆ ಮನೆಗೆ ತೆರಳಿ ವೋಟರ್ ಸ್ಲಿಪ್ ನೀಡುವುದು ಹೀಗೆ ಹಲವಾರು ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಹಮ್ಮಿಕೊಂಡು ಜನರಿಗೆ ಜಾಗೃತಿ ಮೂಡಿಸಲಾಗಿದೆ ಎಂದು ರಾಹುಲ ಶಿಂಧೆ ಹೇಳಿದರು.

ಮತಗಟ್ಟೆಗಳ ಆಕರ್ಷಣೆ
ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಗಳಲ್ಲಿ ತೊಂಬತ್ತು ಸಖಿ ಅಥವಾ ಪಿಂಕ್ ಮತಗಟ್ಟೆ ನಿರ್ಮಾಣ, ವಿಶೇಷ ಚೇತನರ ನಿರ್ವಹಣೆಗಾಗಿ ಜಿಲ್ಲೆಯಾದ್ಯಂತ ಒಟ್ಟು ಹದಿನೆಂಟು ಮತಗಟ್ಟೆಗಳು ನಿರ್ಮಾಣ, ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರಿರುವ ಮತಗಟ್ಟೆಗಳಲ್ಲಿ ಯುವಕರಿಗಾಗಿ ಯುವಜನ ನಿರ್ವಹಣೆಯ ಮತಗಟ್ಟೆಗಳನ್ನು ಜಿಲ್ಲೆಯಾದ್ಯಂತ ಹದಿನೆಂಟು ಯುವ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ.
ಅಲ್ಲದೇ ಆಯಾ ಮತಕ್ಷೇತ್ರಕ್ಕೆ ಸಂಬಂಧಿಸಿದ ವಿಶೇಷ ಸಾಧನೆ ಮಾಡಿದ ವ್ಯಕ್ತಿ, ಸ್ಥಳಿಯ ಜನಪದ ಕಲೆ, ಪ್ರೇಕ್ಷಣಿಯ ಸ್ಥಳ ಧ್ಯೇಯಗಳನ್ನು ಇಟ್ಟುಕೊಂಡು ಮತದಾರರಿಗೆ ಆಕರ್ಷಣಿಯವಾಗಿ ಕಾಣಲು ಹದಿನೆಂಟು ಮತಗಟ್ಟೆಗಳನ್ನು ನಿರ್ಮಿಸಲಾಗಿತ್ತು ಇದರಿಂದ ಮತಗಟ್ಟೆಗಳ ಕಡೆ ಮತದಾರರನ್ನು ಸೆಳೆಯುವಲ್ಲಿ ಸಹಾಯಕವಾಗಿದೆ. ಎಂದು ರಾಹುಲ್ ಶಿಂಧೆ ತಿಳಿಸಿದ್ದಾರೆ.
ಜಿಲ್ಲೆಯ ಜನತೆಗೆ ಕೃತಜ್ಞತೆ
ಲೋಕಸಭೆ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರಿಗೆ, ಜನಪ್ರತಿನಿಧಿಗಳು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಕಂದಾಯ, ಜಿಲ್ಲಾ ಪಂಚಾಯತಿ ಹಾಗೂ ಪೊಲೀಸ್ ಸೇರಿದಂತೆ ಪ್ರತಿಯೊಂದು ಇಲಾಖೆಗಳ ಅಧಿಕಾರಿಗಳು/ಸಿಬ್ಬಂದಿ, ಸ್ವೀಪ್ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಮತದಾನ ಹೆಚ್ಚಳಕ್ಕೆ ಕೈಜೋಡಿಸಿದ ಸಂಘ-ಸಂಸ್ಥೆಗಳು , ಜಿಲ್ಲಾಹಾಗೂ ತಾಲ್ಲೂಕಾ ಸ್ವೀಪ ಕಮಿಟಿ ಸದಸ್ಯರುಗಳಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ರಾಹುಲ್ ಶಿಂಧೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.



ಜಿಲ್ಲೆಯಲ್ಲಿ ವಿಕಲಚೇತನರಿಂದ ಶೇ.೮೧ ರಷ್ಟು ಮತದಾನ
ಸಾರ್ವತ್ರಿಕ ಲೋಕಸಭಾ ಚುನಾವಣೆ-೨೦೨೪ ಕ್ಕೆ ಮೇ.೭ ರಂದು ನಡೆದ ಮತದಾನದಲ್ಲಿ ಬೆಳಗಾವಿ ಜಿಲ್ಲೆಯ ೨ ಲೋಕಸಭಾ ಕ್ಷೇತ್ರಗಳು ೧೬ ವಿಧಾನಸಭಾ ಮತಕ್ಷೇತ್ರಗಳು ಹಾಗೂ ಕೆನರಾ ಲೋಕಸಭಾ ಕ್ಷೇತ್ರದ ೨ ವಿಧಾನ ಸಭಾ ಮತಕ್ಷೇತ್ರಗಳು ಸೇರಿದಂತೆ ಜಿಲ್ಲೆಯ ೧೮ ಮತಕ್ಷೇತ್ರಗಳಲ್ಲಿ ವಿಕಲಚೇತನರಿಗಾಗಿ ವಿಶೇಷ ಮತಗಟ್ಟೆಗಳನ್ನು ರಚಿಸಲಾಗಿತ್ತು.
ಸದರಿ ಜಿಲ್ಲೆಯ ಒಟ್ಟು ೫೨,೭೬೦ ವಿಕಲಚೇತನ ಮತದಾರರ ಪೈಕಿ ಒಟ್ಟು ೪೨,೮೫೨ ವಿಕಲಚೇತನ ಮತದಾರರು ಮತದಾನ ಮಾಡಿದ್ದು, ೧೮ ಮತಕ್ಷೇತ್ರವಾರು ಜಿಲ್ಲೆಯಲ್ಲಿ ವಿಕಲಚೇತನರಿಂದ ಶೇ. ೮೧ ರಷ್ಟು ಮತದಾನವಾಗಿರುತ್ತದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button