*ಷರತ್ತುಗಳನ್ನು ಒಪ್ಪಿದರೆ ಮೈತ್ರಿಗೆ ರೆಡಿ ಎಂದ ಹೆಚ್.ಡಿ.ಕುಮಾರಸ್ವಾಮಿ; ಮಾಜಿ ಸಿಎಂ ಹಾಕಿದ ಕಂಡಿಷನ್ಸ್ ಏನು?*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಒಂದು ವೇಳೆ ಅತಂತ್ರ ಫಲಿತಾಂಶ ಬಂದಲ್ಲಿ ಮೈತ್ರಿ ಸರ್ಕಾರ ರಚನೆಗೆ ನಾನು ಸಿದ್ಧ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಂಗಾಪುರದಿಂದ ಸಂದೇಶ ರವಾನಿಸಿದ್ದಾರೆ.
ಚುನಾವಣೆ ಮುಗಿಯುತ್ತಿದ್ದಂತೆ ಸಿಂಗಾಪುರಕ್ಕೆ ತೆರಳಿರುವ ಮಾಜಿ ಸಿಎಂ ಕುಮಾರಸ್ವಾಮಿ, ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ನಮ್ಮ ಷರತ್ತುಗಳಿಗೆ ಒಪ್ಪುವ ಪಕ್ಷಗಳೊಂದಿಗೆ ಮೈತ್ರಿ ಸರ್ಕಾರ ರಚನೆಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಸಮ್ಮಿಶ್ರ ಸರ್ಕಾರದಡಿ ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ತಮಗಾದ ಇಕ್ಕಟ್ಟಿನ ಸ್ಥಿತಿ ಈಬಾರಿ ಮೈತ್ರಿ ಸರ್ಕಾರ ರಚನೆಯಾದರೆ ಆಗಬಾರದು ಎಂಬುದು ಕುಮಾರಸ್ವಾಮಿಯವರ ಸ್ಪಷ್ಟ ನಿಲುವು ಎನ್ನಲಾಗಿದೆ. ಈ ನಿಟ್ಟಿನಲ್ಲಿ ಕೆಲ ಪ್ರಮುಖ ಷರತ್ತುಗಳನ್ನು ಅವರು ಮುಂದಿಟ್ಟಿದ್ದು, ಷರತ್ತುಗಳಿಗೆ ಬಿಜೆಪಿಯಾಗಲಿ ಇಲ್ಲವೇ ಕಾಂಗ್ರೆಸ್ ಪಕ್ಷವಾಗಲಿ ಒಪ್ಪಿದಲ್ಲಿ ಮೈತ್ರಿ ಸರ್ಕಾರ ರಚನೆಗೆ ರೆಡಿ ಎಂದು ಹೇಳಿದ್ದಾರೆ.
ನನ್ನನ್ನು ಸಿಎಂ ಮಾಡಬೇಕು, ಸರ್ಕಾರ ನಡೆಸಲು ಮುಕ್ತ ಸ್ವಾತಂತ್ರ್ಯ ನೀಡಬೇಕು. ಜೆಡಿಎಸ್ ಶಾಸಕರಿಗೆ ಪ್ರಮುಖ ಖಾತೆಗಳಾದ ಜಲಸಂಪನ್ಮೂಲ, ಇಂಧನ, ಲೋಕೋಪಯೋಗಿ ಖಾತೆಗಳನ್ನು ನೀಡಬೇಕು, ಜೆಡಿಎಸ್ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಜಾರಿಗೊಳಿಸಲು ಅವಕಾಶ ಕೊಡಬೇಕು, ಸಮ್ಮಿಶ್ರ ಪಾಲುದಾರ ಪಕ್ಷಗಳು ಮಂಡ್ಯ ಹಾಗೂ ಹಾಸನ ಕ್ಷೇತ್ರಗಳಿಂದ ದೂರವಿರಬೇಕು, ಯಾವುದೇ ಸಿದ್ಧಾಂತಗಳನ್ನು ಚರ್ಚೆಯಿಲ್ಲದೇ ಮಾಡಬಾರದು ಎಂಬ ಷರತ್ತುಗಳನ್ನು ಇಟ್ಟಿದ್ದಾರೆ. ಈ ಷರತ್ತುಗಳನ್ನು ಒಪ್ಪುವ ಪಕ್ಷದ ಜೊತೆ ಮೈತ್ರಿ ಸರ್ಕಾರಕ್ಕೆ ತಯಾರಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ