ಪ್ರಗತಿವಾಹಿನಿ ಸುದ್ದಿ, ಅಂಕೋಲಾ: ಎಷ್ಟೋ ಪಾಲಕರು ತಮ್ಮ ಮಕ್ಕಳು ಸೈನ್ಯ ಸೇರಿ ದೇಶ ಸೇವೆ ಮಾಡುವ ಕನಸು ಕಾಣುವುದು ಸಾಮಾನ್ಯ. ಇನ್ನೂ ಅನೇಕ ಯುವಕರು ದೇಶಸೇವೆಗಾಗಿ ಸೇನಾಪಡೆ ಸೇರಲು ನಾ ಮುಂದು, ತಾ ಮುಂದು ಎಂದು ಮಗಿಬೀಳುವುದನ್ನೂ ಕಂಡಿದ್ದೇವೆ.
ಆದರೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾವಿಕೇರಿ ನಿವಾಸಿ ರಾಘವೇಂದ್ರ ಭಟ್ ಎಂಬುವವರು ತಮ್ಮ ಮನೆಯಲ್ಲಿ ಸಾಕಿದ್ದ ಬೆಲ್ಜಿಯಂ ಮೆಲಿನೋಯ್ಸ್ (ಶೆಫರ್ಡ್) ತಳಿಯ ಶ್ವಾನಪಡೆಯನ್ನೇ ದೇಶ ಸೇವೆಗೆ ಸಮರ್ಪಿಸಿದ್ದಾರೆ.
ರಾಘವೇಂದ್ರ ಭಟ್ ಅವರ ಮನೆಯಲ್ಲಿ ‘ಕೆಎಫ್’ ಎಂಬ ಹೆಸರಿನ ನಾಲ್ಕು ವರ್ಷದ, ‘ಡೆವಿಲ್’ ಎನ್ನುವ ಎರಡೂವರೆ ವರ್ಷದ ಗಂಡು ಶ್ವಾನಗಳು, ಲೀಸಾ ಹಾಗೂ ಟೈನಿ ಎನ್ನುವ ಮೂರು ವರ್ಷದ ಶ್ವಾನಗಳನ್ನು ಸಾಕಿದ್ದಾರೆ. ಈ ಪೈಕಿ ಲೀಸಾ ಹಾಗೂ ಟೈನಿ ಮರಿ ಹಾಕಿದಾಗ ಇವುಗಳ ಮರಿಗಳು ರಾಜ್ಯ ಪೊಲೀಸ್ ಇಲಾಖೆಯ ಶ್ವಾನದಳಕ್ಕೆ ಅವುಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿತ್ತು.
ಕಳೆದ ಮೂರು ತಿಂಗಳ ಹಿಂದೆ ಲೀಸಾ 10 ಮರಿಗಳಿಗೆ ಜನ್ಮ ನೀಡಿದ್ದು ಟೈನಿ ಎಂಟು ಮರಿಗಳನ್ನು ಹಾಕಿತ್ತು. ಈ ಮರಿನಾಯಿಗಳ ಫೋಟೊಗಳನ್ನು ರಾಘವೇಂದ್ರ ಭಟ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದರು. ಅಲ್ಲಿಗೆ ನಾಯಿಮರಿಗಳ ಅದೃಷ್ಟವೂ ಖುಲಾಯಿಸಿತ್ತು.
ಫೇಸ್ ಬುಕ್ ನಲ್ಲಿ ಈ ನಾಯಿ ಮರಿಗಳ ಫೋಟೊ ಗಮನಿಸಿದ ಸೇನಾಧಿಕಾರಿಯೊಬ್ಬರು ರಾಘವೇಂದ್ರ ಭಟ್ ಅವರನ್ನು ಸಂಪರ್ಕಿಸಿ ಸೈನ್ಯಕ್ಕೆ ನೀಡುವಂತೆ ಕೇಳಿಕೊಂಡಿದ್ದರು. ನಂತರ ಸೇನಾಪಡೆಯ ಅಧಿಕಾರಿಯೊಬ್ಬರನ್ನು ಅಸ್ಸಾಂ ನಿಂದ ಅಂಕೋಲಾಕ್ಕೆ ಕಳುಹಿಸಿ ಶ್ವಾನಗಳ ಚಟುವಟಿಕೆಗಳು, ಸಾಮರ್ಥ್ಯ, ಚಾಕಚಕ್ಯತೆ, ಆಹಾರ ಕ್ರಮ ಇತ್ಯಾದಿಗಳ ಬಗ್ಗೆ 45 ದಿನಗಳ ಕಾಲ ಪರೀಕ್ಷಿಸಿ ಸೇನಾಪಡೆಗೆ ಸೇರಿಸಿಕೊಳ್ಳಲು ಒಪ್ಪಿಗೆ ನೀಡಿದರು.
ಅಂತೆಯೇ ಎಲ್ಲ 17 ಮರಿಗಳನ್ನು ಅಸ್ಸಾಂನ ಸೈನಿಕ ತರಬೇತಿ ಕೇಂದ್ರಗಳಿಗೆ ಕರೆದೊಯ್ದು ತರಬೇತುಗೊಳಿಸುವ ಕಾರ್ಯ ಮುಂದುವರಿದಿದೆ.
ಬೆಲ್ಜಿಯಂ ಮೆನಿಲಾಯ್ಸ್ ತಳಿಯ ಶ್ವಾನಗಳು ಬಹುತೇಕವಾಗಿ ಮಕ್ಕಳ ಸ್ನೇಹಿ ಎಂದೇ ಪರಿಗಣಿಸಲಾಗಿದ್ದು ಕುಟುಂಬದ ರಕ್ಷಣೆಯಲ್ಲಿ ಅವುಗಳ ಕಾರ್ಯಕ್ಷಮತೆ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ