*BJP ಛಿದ್ರ ಛಿದ್ರವಾಗಿದೆ; ಎಷ್ಟೇ ಫೆವಿಕಾಲ್ ಹಾಕಿದ್ರೂ ಜೋಡಿಸಲು ಆಗಲ್ಲ; ಸಚಿವ ಎಂ.ಬಿ.ಪಾಟೀಲ್ ವ್ಯಂಗ್ಯ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ಮನೆಯೊಂದು ನೂರು ಬಾಗಿಲು ಆಗಿದೆ. ಪಕ್ಷದಲ್ಲಿ ಕಲಹ ಆರಂಭವಾಗಿದೆ. ಜನ ಪಾಠ ಕಲಿಸಿದರೂ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಟೀಕೆ ಮಾಡುವುದು ಬಿಟ್ಟಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಮೊದಲು ಅಕ್ಕಿ ಕೊಡಲಾಗದಿದ್ದರೆ ಹಣ ಕೊಡಿ ಎಂದು ಹೇಳಿದ್ರು. ಈಗ ಹಣ ಕೊಡುತೇವೆ ಎಂದರೆ ಹಣ ಏನು ತಿನ್ನಲು ಆಗುತ್ತಾ? ಅಕ್ಕಿ ಕೊಡಿ ಎನ್ನುತ್ತಿದ್ದಾರೆ. ಬಿಜೆಪಿ ನಾಯಕರು ಒಬ್ಬೊಬ್ಬರು ಒಂದೊಂದು ಮಾತಾಡ್ತಿದ್ದಾರೆ ನಮ್ಮ ಗ್ಯಾರಂಟಿಯಿಂದ ಅವರಿಗೆ ತೊಂದರೆ ಆಗಿ ಪಾಪ ಉರಿದುಕೊಳ್ತಿದ್ದಾರೆ ಎಂದು ಟೀಕಿಸಿದರು.
ನಾಲ್ಕು ವರ್ಷ ಆಡಳಿತ ನಡೆಸಿದರೂ ರಾಜ್ಯದಲ್ಲಿ ಒಂದೇ ಒಂದು ಮನೆಯನ್ನೂ ಬಿಜೆಪಿ ಸರ್ಕಾರ ಕಟ್ಟಿ ಕೊಟ್ಟಿಲ್ಲ, ಉದ್ಯೋಗ ಕೊಡುವುದಾಗಿ ಹೇಳಿ ಒಂದೇ ಒಂದು ಕೆಲಸವನ್ನೂ ಕೊಟ್ಟಿಲ್ಲ. ಬಿಜೆಪಿ ದುರಾಡಳಿತ ನೋಡಿ ಚುನಾವಣೆಯಲ್ಲಿ ರಾಜ್ಯದ ಜನರೇ ತಕ್ಕ ಪಾಠ ಕಲಿಸಿದ್ದಾರೆ. ಈಗ ಪಕ್ಷದ ನಾಯಕರ ವಿರುದ್ಧ ರಾಜ್ಯದ ನಾಯಕರೇ ತಿರುಗಿ ಬಿದ್ದಿದ್ದಾರೆ ಎಂದರು.
ಬಿಜೆಪಿ ರಾಜ್ಯದಲ್ಲಿ ಅಂತಿಮ ಘಟ್ಟ ತಲುಪಿದೆ. ಪಕ್ಷ ಛಿದ್ರ ಛಿದ್ರವಾಗಿದೆ. ಎಷ್ಟೇ ಫೆವಿಕಾಲ್ ಹಾಕಿದರೂ ಬಿಜೆಪಿಯನ್ನು ಜೋಡಿಸಲು ಆಗಲ್ಲ ಎಂದು ಲೇವಡಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ