Belagavi NewsBelgaum NewsKannada NewsKarnataka News

ಆ.20ರಂದು ಮಮದಾಪೂರ ಮೌನಮಲ್ಲಿಕಾರ್ಜುನ ಮಠದಲ್ಲಿ ಪುರಾಣ ಪ್ರವಚನ ಮಂಗಲೋತ್ಸವ


ಪ್ರಗತಿವಾಹಿನಿ ಸುದ್ದಿ, ಬೆಟಗೇರಿ: ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಮೌನಮಲ್ಲಿಕಾರ್ಜುನ ಶೀವಯೋಗಿವರೇಣ್ಯರ ಅಖಂಡ ಮೌನಾನುಷ್ಠಾನದ ೪೨ ಸಂವತ್ಸರಗಳ ಪುಣ್ಯಮಯ ಸುಸಮಯದಲ್ಲಿ ಹಾಗೂ ಅಧಿಕ ಶ್ರಾವಣ ಮಾಸ ಪ್ರಯುಕ್ತ ಮಮದಾಪೂರ ಮೌನಮಲ್ಲಿಕಾರ್ಜುನ ಮಠದಲ್ಲಿ ಸಾಗಿಬರುತ್ತಿರುವ ಪುರಾಣ ಪ್ರವಚನ ಕಾರ್ಯಕ್ರಮದ ಅಂಗವಾಗಿ ಜು.೧೮ ರಿಂದ ಒಂದು ತಿಂಗಳ ಪರ್ಯಂತರ ಪ್ರತಿದಿನ ಸಂಜೆ ೭ ಗಂಟೆಯಿಂದ ೯ ಗಂಟೆ ತನಕ ನಡೆದ ನಾಲ್ವವಾಡ ಶ್ರೀ ವೀರೇಶ್ವರ ಶರಣರ ಮಹಾಪುರಾಣ ಪ್ರವಚನದ ಮಂಗಲೋತ್ಸವ ಕಾರ್ಯಕ್ರಮ ಇದೇ ಆ.೨೦ರಂದು ನಡೆಯಲಿದೆ.
ಸಾಯಂಕಾಲ ೪ ಗಂಟೆಗೆ ಸಕಲ ವಾದ್ಯ, ವೈಭವದೊಂದಿಗೆ ಜಮಖಂಡಿ ಕಲ್ಯಾಣ ಮಠ ಪೂಜ್ಯರ ಅನುಷ್ಠಾನ ಮಂಗಲ ಮತ್ತು ಪುರಾಣ ಮಂಗಲೋತ್ಸವದ ಭವ್ಯ ಪಲ್ಲಕ್ಕಿ ಮೆರವಣಿಗೆ, ಸಂಜೆ ೭ ಗಂಟೆಗೆ ಮಂಗಲ ಧರ್ಮಸಭೆ ಜರುಗಲಿದೆ.
ನಿಡಸೋಸಿ ಸಿದ್ಧಸಂಸ್ಥಾನ ಮಠದ ಜಗದ್ಗುರು ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ, ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿ ಸಾನಿಧ್ಯ, ಮೌನ ಮಲ್ಲಿಕಾರ್ಜುನ ಶಿವಯೋಗಿಗಳು ದಿವ್ಯ ಸಮ್ಮುಖ, ಜಡೆ ಸಂಸ್ಥಾನ ಮಠದ ಡಾ.ಮಹಾಂತ ಮಹಾಸ್ವಾಮಿಜಿ ಅಧ್ಯಕ್ಷತೆ, ಜಮಖಂಡಿ ಕಲ್ಯಾಣಮಠದ ಗೌರಿಶಕರ ಶಿವಾಚಾರ್ಯ ಮಹಾಸ್ವಾಮಿಜಿ ನೇತೃತ್ವ, ಮುಳಹಳ್ಳಿ ಶಿವಯೋಗೇಶ್ವರ ಮಹಾಸ್ವಾಮಿಜಿ, ಶಲವಡಿ ಚರಂತಿಮಠ ವೀರಯ್ಯ ಶಾಸ್ತ್ರೀಗಳು ಪುರಾಣಿಕರು, ಗೋಕಾಕ ಮತಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಮುಖ್ಯ ಅತಿಥಿಗಳಾಗಿ, ಚುಳಕಿಮಠದ ಶೇಖರಯ್ಯ ಸ್ವಾಮಿಜಿ, ನಾಡಿನ ಹರ, ಗುರು, ಚರಮೂರ್ತಿಗಳು ಕಾರ್ಯಕ್ರಮದಲ್ಲಿ ಸಮ್ಮುಖ ವಹಿಸಲಿದ್ದಾರೆ.
ಶಲವಡಿ ಮುತ್ತಣ್ಣ ಹೆಬಸೂರು ಅವರಿಂದ ಸಂಗೀತ, ಅಕ್ಬರ್ ಸಾಹೇಬ ನದಾಫ ಅವರು ತಬಲಾಸಾಥ್ ನೀಡಲಿದ್ದಾರೆ. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ-ಗುರು, ಚರಮೂರ್ತಿಗಳು, ಸಂತ-ಶರಣರು, ಆಧ್ಯಾತ್ಮ ಪ್ರವೀಣರು, ಗಣ್ಯರು ಸೇರಿದಂತೆ ಶ್ರೀ ವೀರೇಶ್ವರ ಪುರಾಣ ಪ್ರವಚನ ಆಯೋಜಕ ಸಮಿತಿ ಪದಾಧಿಕಾರಿಗಳು, ಸದಸ್ಯರು, ಶ್ರೀಮಠದ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪುರಾಣ ಪ್ರವಚನ ಆಯೋಜಕ ಸಮಿತಿ ಸಂಚಾಲಕ ಮಂಜುನಾಥ ಶರಣರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button