Latest

ಪೊಲೀಸ್ ಸೇರಿ ಹಲವು ಇಲಾಖೆಗಳಿಗೆ ಸಿಎಂ ಖಡಕ್ ವಾರ್ನಿಂಗ್

ವಿವಿಧ ಇಲಾಖೆಗಳೊಂದಿಗೆ ಮುಖ್ಯಮಂತ್ರಿ ಸಭೆಯ ಮುಖ್ಯಾಂಶಗಳು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ರಾಜ್ಯದ ಹಣಕಾಸು ಪರಿಸ್ಥಿತಿ, ಬೆಳೆ ಸಮೀಕ್ಷೆ, ಸಾಲಮನ್ನಾ ಯೋಜನೆ, ಋಣ ಪರಿಹಾರ ಕಾಯ್ದೆ ಹಾಗೂ ವಸತಿ ಇಲಾಖೆಯ ಪ್ರಗತಿ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದರು.

ಆರ್ಥಿಕ ಇಲಾಖೆ: 

ರಾಜ್ಯದ ಹಣಕಾಸು ಪರಿಸ್ಥಿತಿಯ ಕುರಿತು ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್‍ಎನ್ ಪ್ರಸಾದ್ ಅವರು ಮಾಹಿತಿ ನೀಡಿದರು.
ರಾಜ್ಯದ ವಿತ್ತೀಯ ಕೊರತೆ ಶೇ. 2.48 ರಷ್ಟು ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಿತಿಯಲ್ಲಿಯೇ ಇದೆ.  ತೆರಿಗೆ ಸಂಗ್ರಹ ಈ ವರೆಗೆ ನಿಗದಿತ ವಾರ್ಷಿಕ ಗುರಿಯ ಶೇ. 23.33 ರಷ್ಟಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯ ತೆರಿಗೆ ಸಂಗ್ರಹ ವಾರ್ಷಿಕ ಗುರಿಯ ಶೇ. 23.28 ರಷ್ಟಾಗಿದೆ, ಅಬಕಾರಿ ಇಲಾಖೆಯಲ್ಲಿ 27.49, ವಾಹನ ನೋಂದಣಿ ಶೇ. 20.78, ನೋಂದಣಿ ಮುದ್ರಾಂಕ ಇಲಾಖೆಯಲ್ಲಿ ಶೇ. 22.72 ರಷ್ಟು ತೆರಿಗೆ ಸಂಗ್ರಹವಾಗಿದೆ. ನಿಗದಿತ ಗುರಿ ಸಾಧನೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
2019-20 ನೇ ಸಾಲಿಗೆ ಇಂಧನ, ಆಹಾರ ಸಬ್ಸಿಡಿ, ಲೋಕೋಪಯೋಗಿ ಇಲಾಖೆ, ವಸತಿ ಇಲಾಖೆ ಮೊದಲಾದ ಇಲಾಖೆಗಳಿಂದ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇದ್ದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಮುಖ್ಯಮಂತ್ರಿಗಳು ತಿಳಿಸಿದರು.
ಆಹಾರ ಭದ್ರತಾ ಯೋಜನೆಗಳು ಹಾಗೂ ವಸತಿ ಇಲಾಖೆ ಯೋಜನೆಗಳ ಕುರಿತು ಕೇಂದ್ರದ ಸಚಿವರನ್ನು ಭೇಟಿಯಾಗಿ ಹೆಚ್ಚಿನ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

 ಬೆಳೆ ಸಮೀಕ್ಷೆ ಕುರಿತ ಸಭೆ

ರಾಜ್ಯದಲ್ಲಿ ಈಗಾಗಲೇ ಬೆಳೆ ಸಮೀಕ್ಷೆ ನಡೆಸುವ ಕುರಿತು ಆದೇಶ ಹೊರಡಿಸಲಾಗಿದ್ದು, ಮೊಬೈಲ್ ಆಪ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಸುಮಾರು 25 ಸಾವಿರ ಯುವಕರ ಸಹಾಯದಿಂದ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಇದರಿಂದ ನಿಖರ ಮಾಹಿತಿ ದೊರೆಯುವ ಕಾರಣ ಪಾರದರ್ಶಕವಾಗಿ ಇನ್ ಪುಟ್ ಸಬ್ಸಿಡಿ, ಬೆಳೆವಿಮೆ ಪರಿಹಾರ ವಿತರಿಸಲು ಅನುಕೂಲವಾಗುತ್ತದೆ.
ತೀವ್ರ ಬರ ಪರಿಸ್ಥಿತಿ ಇರುವುದರಿಂದ ಬೆಳೆ ಸಮೀಕ್ಷೆಯನ್ನು ನಿಖರವಾಗಿ ನಡೆಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ. ಕೇಂದ್ರ ಸರ್ಕಾರಕ್ಕೆ 75 ಸಾವಿರ ಟನ್ ಯೂರಿಯಾ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿದ್ದು, ಕೇಂದ್ರ ಸಚಿವರೊಂದಿಗೆ ಈ ಕುರಿತು ಚರ್ಚಿಸಿ ಬಿಡುಗಡೆಗೆ ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಜ್ಯದಲ್ಲಿ ಎರಡು ಕಂಪೆನಿಗಳು ಕಳೆದ ವರ್ಷದ ಬೆಳೆವಿಮೆ ಪಾವತಿ ಪ್ರಕ್ರಿಯೆ ಪ್ರಾರಂಭಿಸಿಲ್ಲ.  ಈ ಕುರಿತು ಸಹ ಕೇಂದ್ರ ಸರ್ಕಾರದ ಕೃಷಿ ಸಚಿವರಿಗೆ ಮನವಿ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

 ಋಣ ಪರಿಹಾರ ಕಾಯ್ದೆ

ಸಹಕಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಗಳು ಋಣ ಪರಿಹಾರ ಕಾಯ್ದೆ 2018ರಡಿ ನಿಯಮಗಳನ್ನು ರೂಪಿಸುವ ಕುರಿತು ಚರ್ಚಿಸಿದರು.
ಜುಲೈ 23, 2019 ರಂದು ರಾಷ್ಟ್ರಪತಿಗಳು ಋಣ ಪರಿಹಾರ ಕಾಯ್ದೆ 2018ನ್ನು ಅಂಗೀಕರಿಸಿದ್ದು, ಈ  ಕಾಯ್ದೆಯ ಅನುಷ್ಠಾನಕ್ಕಾಗಿ ನಿಯಮ ರೂಪಿಸಲಾಗುತ್ತಿದೆ.  ಈ ಕುರಿತು ಸಹ ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು.

 ವಸತಿ ಇಲಾಖೆ 

ವಸತಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿಗಳು, ಬೆಂಗಳೂರು ಸೇರಿದಂತೆ, ಎಲ್ಲ ಜಿಲ್ಲೆಗಳಲ್ಲಿ ಮುಖ್ಯಮಂತ್ರಿಗಳ ವಸತಿ ಯೋಜನೆಯ ಮನೆಗಳನ್ನು ತ್ವರಿತವಾಗಿ ನಿರ್ಮಿಸುವಂತೆ ಸೂಚಿಸಿದರು.
ಅಗತ್ಯವಿರುವ ಹೆಚ್ಚುವರಿ ಅನುದಾನದ ಕುರಿತು ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಸೂಚನೆ

ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ ಅವರು ಇಂದು  ಗೃಹ ಕಚೇರಿ ಕೃಷ್ಣಾದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮುಖ್ಯಮಂತ್ರಿಗಳ ಸಲಹೆಗಾರ ಎಂ. ಲಕ್ಷ್ಮೀನಾರಾಯಣ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ. ವಿ. ರಮಣ ರೆಡ್ಡಿ, ಪೊಲೀಸ್ ಮಹಾನಿರ್ದೇಶಕ ರಾದ ನೀಲಮಣಿ ಎನ್. ರಾಜು ಮತ್ತಿತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿ. ಇವುಗಳಿಗೆ ಕಡಿವಾಣ ಹಾಕಲು ಪೊಲೀಸರು ಕಟ್ಟೆಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ರಾಜ್ಯದ ಕಾನೂನು ಸುವ್ಯವಸ್ಥೆಯ ಕುರಿತು  ಚರ್ಚಿಸಿದರು.
 ಬೆಂಗಳೂರಿನ ಬಗ್ಗೆ ಇಡೀ ಜಗತ್ತು ಗಮನಹರಿಸುತ್ತದೆ. ನಗರದಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ  ನಿಗಾ ವಹಿಸಬೇಕು. ವಿಶ್ವಮಟ್ಟದ ತಂತ್ರಜ್ಞಾನ ಬಳಸಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಬೇಕು.  ಅಪರಾಧ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ರಾತ್ರಿ 8.00 ರಿಂದ ಬೆಳಿಗ್ಗೆ 6.00 ಗಂಟೆಯವರೆಗೆ ಗಸ್ತು ತಿರುಗುವಂತೆ ಮುಖ್ಯಮಂತ್ರಿಗಳು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನಲ್ಲಿ ಭಯೋತ್ಪಾದಕರು ಆಶ್ರಯ ಪಡೆದಿರುವ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದ ಅವರು, ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲು ಸೂಚನೆ ನೀಡಿದರು.  ರಾಜ್ಯದಲ್ಲಿ ಕೋಮುಗಲಭೆ ಸಂಭವಿಸದಂತೆ ಎಚ್ಚರ ವಹಿಸುವಂತೆ ಸೂಚಿಸಿದರು.
ಕೋಮು ಗಲಭೆಗಳಿಗೆ ಪ್ರಚೋದನೆ ನೀಡುವವರು ಯಾರೇ ಇರಲಿ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದರು.
ಎಲ್ಲ ಧರ್ಮದವರ ಹಬ್ಬಗಳ ಆಚರಣೆಗೆ ಅಡ್ಡಿ ಆತಂಕಗಳಿಲ್ಲದ ವಾತಾವರಣ ನಿರ್ಮಿಸಬೇಕು. ಹಬ್ಬ ಹರಿದಿನಗಳಂದು ವಿಶೇಷ ಭದ್ರತೆ ನೀಡಿ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 25,174 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ಮುಖ್ಯಮಂತ್ರಿಗಳು ನಿರ್ಮಾಣ ಹಂತದಲ್ಲಿರುವ  ಪೊಲೀಸರ ವಸತಿ ಗೃಹಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದೆಂದರು.
ಪೊಲೀಸ್ ಕಚೇರಿಗಳ ನಿರ್ಮಾಣ ಕಾಮಗಾರಿಗಳು ಸಹ ವಿಳಂಬವಾಗಬಾರದು ಎಂದು ಅವರು ಸೂಚಿಸಿದರು.
ಪೊಲೀಸ ಇಲಾಖೆ ಕಚೇರಿ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾವಾರು ಪಟ್ಟಿ ಸಲ್ಲಿಸಲು ಮುಖ್ಯಮಂತ್ರಿಗಳು ಸೂಚಿಸಿದರು.  ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಸರ್ಕಾರ ಆದ್ಯತೆ ನೀಡುವುದು ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆಯಿತ್ತರು.
ಪೊಲೀಸ್ ಇಲಾಖೆಯ ವಿವಿಧ ಕಾರ್ಯಕ್ರಮಗಳಿಗೆ ಅಗತ್ಯವಿರುವ ಅನುದಾನವನ್ನು ಹಣಕಾಸಿನ ಸ್ಥಿತಿಗತಿ ಪರಿಶೀಲಿಸಿ ಬಿಡುಗಡೆ ಮಾಡಲಾಗುವುದು ಎಂದರು.
ಸಭೆಯಲ್ಲಿ  ಮುಖ್ಯಮಂತ್ರಿಗಳ ಸಲಹೆಗಾರ ಎಂ.ಲಕ್ಷ್ಮೀನಾರಾಯಣ್, ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್. ರಾಜು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್,  ಹಾಗೂ  ಹಿರಿಯ ಪೋಲೀಸ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button