*ಹಿಜಾಬ್ ನಿಷೇಧವೇ ಆಗಿಲ್ಲ, ಆದೇಶ ವಾಪಾಸ್ ಹೇಗೆ ಪಡೀತಾರೆ? ಸಿಎಂಗೆ ಟಾಂಗ್ ನೀಡಿದ ಮಾಜಿ ಸಿಎಂ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ನಿಷೇಧ ಹಿಂಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಆಡಳಿತ ಪಕ್ಷದ ವಿರುದ್ಧ ವಿಪಕ್ಷ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಹಿಜಾಬ್ ನಿಷೇಧ ವಾಪಾಸ್ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಸಿದ್ದರಾಮಯ್ಯ ಹೇಳಿಕೆ ಕೇವಲ ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ನಿಷೇಧವೇ ಆಗಿಲ್ಲ. ಇನ್ನು ನಿಷೇಧ ಆದೇಶ ವಾಪಾಸ್ ಹೇಗೆ ಪಡೀತಾರೆ? ಎಂದು ಕೇಳಿದ್ದಾರೆ. ಸಿದ್ದರಾಮಯ್ಯನವರು ರಾಜಕೀಯ ಕಾರಣಕ್ಕೆ ಜನರಲ್ಲಿ ಗೊಂದಲ ಸೃಷ್ಟಿಸಲು ಹೇಳಿಕೆ ಕೊಡುತ್ತಿದ್ದಾರೆ ಎಂದರು.
ಹಿಂದೆಯೂ ಹಿಜಾಬ್ ನಿಷೇಧ ಪ್ರಶ್ನೆಯೇ ಬಂದಿಲ್ಲ. ಶಾಲೆಗಳಲ್ಲಿ ಸಮವಸ್ತ್ರ ಸಂಹಿತೆ ಬಗ್ಗೆ ವಿಚಾರವಿತ್ತು. ಈಗಾಗಲೇ ಶಾಲೆಗಳಲ್ಲಿ ಸಮವಸ್ತ್ರ ನೀತಿ ಜಾರಿಯಲ್ಲಿದೆ. ಹೀಗಿರುವಾಗ ಶಾಲೆಗಳಲ್ಲಿ ಸಮವಸ್ತ್ರ ಪಾಲನೆ ಮಾಡಬೇಕು ಎಂಬುದು ಸ್ಪಷ್ಟ. ಬೇರೆಡೆಗಳಲ್ಲಿ ವಸ್ತ್ರ ಸಂಹಿತಿ ಬಗ್ಗೆ ಯಾವ ಆದೇಶ ಹೊರಡಿಸಿಲ್ಲ. ಹಾಗಾಗಿ ಹಿಜಾಬ್ ನಿಷೇಧ ಪ್ರಶ್ನೆಯೇ ಇಲ್ಲ. ಇನ್ನು ಸಿಎಂ ಸಿದ್ದರಾಮಯ್ಯ ಈಗ ಹಿಜಾಬ್ ನಿಷೇಧ ಹಿಂಪಡೆಯುವುದಾಗಿ ಹೇಳಿಕೆ ನೀಡಿರುವುದು ರಾಜಕೀಯ ಪ್ರೇರಿತ. ನಿಷೇಧ ಆದೇಶವೇ ಆಗಿಲ್ಲ, ಆದೇಶ ವಾಪಾಸ್ ಹೇಗೆ ಪಡೆದುಕೊಳ್ಳಲು ಸಾಧ್ಯ? ಎಂದು ಪ್ರಶ್ನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ