ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಶಾಸಕ ಮೇಡಿಪಲ್ಲಿ ಸತ್ಯಂ ಅವರ ಪತ್ನಿ ಮನೆಯಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ಹೈದರಾಬಾದ್ ನ ಅಲ್ವಾನ್ ನಲ್ಲಿ ನಡೆದಿದೆ.
ಮೇಡಿಪಲ್ಲಿ ಸತ್ಯಂ ಕರೀಂ ನಗರ ಜಿಲ್ಲೆಯ ಚೊಪ್ಪದಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ. ಶಾಸಕರ ಪತ್ನಿ ರೂಪಾದೇವಿ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದರು. ಅಲ್ಲದೇ ರೂಪಾದೇವಿ ಮೇಡ್ಚಲ್ ಮುನಿರಾಬಾದ್ ನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಏಕಾಏಕಿ ನೇಣಿಗೆ ಕೊರಳೊಡ್ಡಿದ್ದು, ಪತ್ನಿ ಸಾವಿನಿಂದ ಕಂಗೆಟ್ಟ ಶಾಸಕ ಪ್ರಜ್ಞೆತಪ್ಪಿ ಬಿದ್ದ ಘಟನೆಯೂ ನಡೆದಿದೆ.
ಮೇಡಿಪಲ್ಲಿ ಸತ್ಯಂ 12 ವರ್ಷಗಳ ಹಿಂದೆ ರೂಪಾದೇವಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಬಶಿರಾಬಾದ್ ದವೇರಿಯಾ ವಿಲ್ಲಾಸ್ ನಲ್ಲಿ ನೆಲಸಿದ್ದ ರೂಪಾದೇವಿ, ಒಂದು ತಿಂಗಳ ಹಿಂದಷ್ಟೇ ಹೈದರಾಬಾದ್ ನ ಅಲ್ವಾಲ್ ನ ಪಂಚಶೀಲಾ ಕಾಲೋನಿ ನಿವಾಸಕ್ಕೆ ಶಿಫ್ಟ್ ಆಗಿದ್ದರು. ಸಾವಿಗೂ ಮುನ್ನ ರೂಪಾದೇವಿ ಪತಿ ಮೇಡಪಲ್ಲಿ ಸತ್ಯಂಗೆ ವಿಡಿಯೋ ಕಾಲ್ ಮಾಡಿ ತಾನು ಸಾಯುತ್ತಿರುವುದಾಗಿ ಹೇಳಿದ್ದಾರೆ. ತಕ್ಷಣ ಅವರು ಹೈದರಾಬಾದ್ ನ ಅಲ್ವಾನ್ ನಲ್ಲಿರುವ ಮನೆಗೆ ಬಂದಿದ್ದಾರೆ. ಅಷ್ಟರಲ್ಲೇ ರೂಪಾದೇವಿ ಆತ್ಮಹತ್ಯೆಗೆ ಶರಣಾಗಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ರೂಪಾದೇವಿ ಉಸಿರುಚೆಲ್ಲಿದ್ದರು. ಶಾಸಕರ ಪತ್ನಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ