Kannada NewsKarnataka News

ಮತ್ತೊಮ್ಮೆ ವಿವಾದಕ್ಕೆ ಬಿದ್ದ ಲಕ್ಷ್ಮಣ ಸವದಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ವಿಧಾನಮಂಡಳದ ಅಧಿವೇಶನ ನಡೆಯುತ್ತಿದ್ದ ವೇಳೆ ಅಶ್ಲೀಲ ವೀಡಿಯೋ ನೋಡಿದ ಆರೋಪದ ಮೇಲೆ ಸಚಿವಸ್ಥಾನ ಕಳೆದುಕೊಂಡಿದ್ದ ಲಕ್ಷ್ಮಣ ಸವದಿ ಈಗ ತಮ್ಮ ನಾಲಗೆ ಹರಿಬಿಟ್ಟು ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ತಾವು ಉಪಮುಖ್ಯಮಂತ್ರಿಯಾಗಲು ಪರೋಕ್ಷವಾಗಿ ಕಾರಣರಾಗಿದ್ದ ಅಥಣಿಯ ಅನರ್ಹ ಶಾಸಕ ಮಹೇಶ ಕುಮಟಳ್ಳಿ ಕುರಿತು ಅಸಹ್ಯಕರ ರೀತಿಯಲ್ಲಿ ಮಾತನಾಡುವ ಮೂಲಕ ಸವದಿ ವಿವಾದಕ್ಕೊಳಗಾಗಿದ್ದಾರೆ.
ಸವದಿ ಮಾತು ಕೇಳಿ ಮಹೇಶ ಕುಮಟಳ್ಳಿ ಗಳ ಗಳನೆ ಅತ್ತಿದ್ದಾರೆ. ಅಲ್ಲದೆ ಮತ್ತೊರ್ವ ಅನರ್ಹ ಶಾಸಕ ರಮೇಶ ಜಾರಕಿಹೊಳಿ ನಾಲಗೆ ಬಿಗಿಹಿಡಿದು ಮಾತನಾಡುವಂತೆ ಸವದಿಗೆ ತಾಖೀತು ಮಾಡಿದ್ದಾರೆ. ವಿವಾದವಾಗಿದ್ದನ್ನು ಗಮನಿಸಿದ ಸವದಿ, ನಾನು ಮಾತನಾಡಿದ್ದು ಬೇರೆ ಕುಮಟಳ್ಳಿ ಜೊತೆಗೆ, ಮಹೆಶ ಕುಮಟಳ್ಳಿ ಬಗೆಗೆ ಅಲ್ಲ ಎಂದು ವಿವಾದದಿಂದ ಪಾರಾಗಲು ಯತ್ನಿಸಿದ್ದಾರೆ.

ಆಗಿದ್ದೇನು?

ಅಥಣಿ ತಾಲೂಕಿನ ದರೂರಿಗೆ ತೆರಳಿದ್ದ ವೇಳೆ ಲಕ್ಷ್ಮಣ ಸವದಿಗೆ ಒಂದು ಫೋನ್ ಬರುತ್ತದೆ. ಫೋನ್ ನಲ್ಲಿ ಜೋರಾಗಿ ಮಾತನಾಡಿದ ಸವದಿ, ಆ ದರಿದ್ರ ಸೂ…. ಮಗ ಕುಮಟಳ್ಳಿ ಬಗ್ಗೆ ಮಾತನಾಡಬೇಡಿ, ದರಿದ್ರದವ ಓಡಿ ಹೋಗಿದ್ದಾನೆ ಎಂದೆಲ್ಲ ಹೇಳಿದ್ದಾರೆ. ಈ ಮಾತುಗಳು ವೀಡಿಯೋದಲ್ಲಿ ರೆಕಾರ್ಡ್ ಆಗಿ ವೈರಲ್ ಆಗಿದೆ.
ವೀಡಿಯೋ ನೋಡಿದ ಮಹೇಶ ಕುಮಟಳ್ಳಿ ಗಳಗಳನೆ ಅತ್ತಿದ್ದಾರೆ. ನನ್ನ ತಾಯಿಯ ಬಗೆಗೂ ಹೀಗೆಲ್ಲ ಏಕೆ ಮಾತನಾಡಿದರು ಗೊತ್ತಿಲ್ಲ. ಅವರು ದೊಡ್ಡವರು. ಇಂತಹ ಮಾತನ್ನೆಲ್ಲ ಆಡಬಾರದಿತ್ತು. ನನ್ನ ಮನಸ್ಸಿಗೆ ತುಂಬಾ ಬೇಜಾರಾಗಿದೆ ಎಂದು ಕಣ್ಣೀರು ಹಾಕಿದರು. ನಾನು ಈ ಬಗ್ಗೆ ಯಾರಿಗೂ ದೂರು ಕೊಡುವುದಿಲ್ಲ. ಅವರಿಗೆ ವಿಷ ಕೊಟ್ಟರೂ ಅಮೃತವಾಗಲಿ ಎಂದು ಬಯಸುತ್ತೇನೆ ಎಂದೂ ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ, ಲಕ್ಷ್ಮಣ ಸವದಿ ನಾಲಿಗೆ ಸರಿ ಇಲ್ಲ. 2018ರ ಚುನಾವಣೆಯಲ್ಲಿ ಅವನು ಸೋತಿದ್ದೂ ತಮ್ಮ ನಾಲಿಗೆ ಹರಿಬಿಟ್ಟಿದ್ದರಿಂದಲೇ. ಈಗ ಪುನಃ ಇಂತಹ ಮಾತನಾಡಿದ್ದಾನೆ. ಆತ ನಾಲಿಗೆ ಬಿಗಿಹಿಡಿದು ಮಾತನಾಡಬೇಕು ಎಂದಿದ್ದಾರೆ.
ಒಟ್ಟಾರೆ, ಶಾಸಕರಲ್ಲದಿದ್ದರೂ ಮಂತ್ರಿಸ್ಥಾನ, ಉಪಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿ ಸುದ್ದಿಯಾಗಿದ್ದ ಲಕ್ಷ್ಮಣ ಸವದಿ ತಾವಾಗಿಯೇ ವಿವಾದ ಮೈಮೇಲೆಳೆದುಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button