ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಸರಕಾರದ ಯಾವುದೇ ಯೋಜನೆಯಿಂದಲೂ ಪ್ರಯೋಜನ ಪಡೆಯಲು ಸಾಧ್ಯವಾಗದಂತಹ ಬಡ ಮಕ್ಕಳಿಗೆ ಉಚಿತವಾಗಿ ಹೃದಯ ಶಸ್ತ್ರ ಚಿಕಿತ್ಸೆ ನಡೆಸಲು ರೋಟರಿ ಕ್ಲಬ್ ನಿರ್ಧರಿಸಿದೆ. ರೋಟರಿ ಇಂಟರ್ ನ್ಯಾಶನಲ್ ಡಿಸ್ಟ್ರಿಕ್ಟ್ 3170 ಯೋಜನೆ ಜಾರಿಗೊಳಿಸುತ್ತಿದ್ದು, ಅಮೇರಿಕಾದ ರೋಟರಿ ಜಿಲ್ಲೆ 7255 ಸೇರಿದಂತೆ ವಿವಿಧ ಸಂಸ್ಥೆಗಳು ನೆರವು ನೀಡುತ್ತಿವೆ.
ಅಮೇರಿಕಾದ ರೋಟರಿ ಜಿಲ್ಲೆ 7255 ಗವರ್ನರ್ ರವಿ ಬೋಪಳಾಪುರ ಗುರುವಾರ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ವಿಶ್ವದ ನಾನಾ ಭಾಗಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಈ ಭಾಗದ 20 ಬಡ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ. 2020 ಡಿಸೆಂಬರ್ ಹೊತ್ತಿಗೆ ದಿನಕ್ಕೊಂದು ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಕೆಎಲ್ಇ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಮಕ್ಕಳನ್ನು ಆಯ್ಕೆ ಮಾಡಲು ವಿವಿಧೆಡೆ ಶಿಬಿರಗಳನ್ನು ಸಂಘಟಿಸಲಾಗುತ್ತದೆ ಎಂದೂ ಅವರು ತಿಳಿಸಿದರು.
ಕೆಎಲ್ಇ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ, ರೋಟರಿ ಕ್ಲಬ್ ಹಮ್ಮಿಕೊಂಡಿರುವ ಯೋಜನೆಯನ್ನು ಶ್ಲಾಘಿಸಿದರು. ಕೆಎಲ್ಇ ಆಸ್ಪತ್ರೆಯಲ್ಲಿ ಕಡಿಮೆ ಖರ್ಚಿನಲ್ಲಿ ಶಸ್ತ್ರ ಚಿಕಿತ್ಸೆ ಜೊತೆಗೆ ನಂತರದ ಉಪಚಾರವನ್ನು ಸಹ ನೀಡಲಾಗುತ್ತದೆ. ಯೋಜನೆಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದರು.
ಚೈತನ್ಯ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರದ ವಿವಿಧ ಯೋಜನೆಗಳಿಂದಲೂ ಲಾಭ ಪಡೆಯಲಾಗದವರು ರೋಟರಿ ಕ್ಲಬ್ ಸಂಪರ್ಕಿಸಬೇಕು. ಈ ಬಗ್ಗೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಪ್ರತಿ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಗತಿ ಅಧ್ಯಯನ ಮಾಡಿ ಸೌಲಭ್ಯಕ್ಕೆ ಆಯ್ಕೆ ಮಾಡಲಾಗುವುದು ಎಂದರು.
ಮೊದಲ ಹಂತದಲ್ಲಿ ಸುಮಾರು 37.39 ಲಕ್ಷ ರೂ. ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. 15 ವರ್ಷಕ್ಕಿಂತ ಕಡಿಮೆ ವಯೋಮಾನದವರು ಮಾತ್ರ ಅರ್ಹರಾಗುತ್ತಾರೆ. ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಾರೆ ಎಂದು ಅವರು ಹೇಳಿದರು.
ಜಯಸಿಂಹ ಬೆಳಗಲ್ ಸ್ವಾಗತಿಸಿದರು. ಆನಂದ ಕುಲಕರ್ಣಿ, ಸುಜಾತಾ ಜಾಲಿ, ಆನಂದ ಬುಕ್ಕೆಬಾಗ್, ಮನೋಜ ಸುತಾರ್, ಸತೀಶ್ ಕುಲಕರ್ಣಿ, ನೀಲೇಶ್ ಪಾಟೀಲ್, ಕೆಎಲ್ಇ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗೆ ಚೈತನ್ಯ ಕುಲಕರ್ಣಿ (9341101797), ಡಾ.ಮನೋಜ ಸುತಾರ (9448634116) ಡಾ.ಸುಜಾತಾ ಜಾಲಿ (9845688999), ಜಯಸಿಂಹ್ ಬೆಳಗಲ್ (7353491776), ಆನಂದ ಬುಕ್ಕೆಬಾಗ್ (9632631630), ನೀಲೇಶ್ ಪಾಟೀಲ (9845744262) ಸಂಪರ್ಕಿಸಬಹುದು.
For English Click –
Rotary Foundation planing to conduct 20 heart surgeries for children
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ