
ಪ್ರಗತಿವಾಹಿನಿ ಸುದ್ದಿ: ಹಿರಿಯ ಕೈಗಾರಿಕೋದ್ಯಮಿ, ಕ್ರಿಕೆಟ್ ಪ್ರೇಮಿ ಭರತ್ ಖಿಮ್ಜಿ ವಿಧಿವಶರಾಗಿದ್ದಾರೆ.
ಉದ್ಯಮಿ ಹಾಗೂ ಆತ್ಮೀಯರಾದ ಭರತ್ ಖಿಮ್ಜಿ ಅವರ ನಿಧನಕ್ಕೆ ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಭರತ್ ಖಿಮ್ಜಿ ಅಗಲಿಕೆ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ. ಈ ಕುರಿತು ಎಕ್ಸ್ ಮಾಡಿರುವ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಅನೇಕ ಯುವ ಉದ್ಯಮಿಗಳಿಗೆ ದಾರಿದೀಪವಾಗಿದ್ದವರು ಭರತ್ ಖಿಮ್ಜಿ. ಅವರ ಪರಿಶ್ರಮ, ದೂರದೃಷ್ಟಿ ಮತ್ತು ಮೌಲ್ಯಾಧಾರಿತ ನಡೆ ಉದ್ಯಮ ಕ್ಷೇತ್ರಕ್ಕೆ ದೊಡ್ಡ ಕೊಡುಗೆ. ಕ್ರೀಡಾ ಕ್ಷೇತ್ರದ ಬಗ್ಗೆ, ವಿಶೇಷವಾಗಿ ಕ್ರಿಕೆಟ್ ಬಗ್ಗೆ ಅವರಿಗೆ ಅಪಾರ ಕಾಳಜಿ ಹಾಗೂ ಪ್ರೀತಿ ಇತ್ತು. ತಮ್ಮದೇ ಆದ ‘ಬಿಡಿಕೆ ಸ್ಪೋರ್ಟ್ಸ್ ಕ್ಲಬ್’ ಸ್ಥಾಪಿಸುವ ಮೂಲಕ ನೂರಾರು ಯುವ ಆಟಗಾರರಿಗೆ ಅವಕಾಶ ನೀಡಿದ್ದು, ಅನೇಕ ಪ್ರತಿಭೆಗಳ ಬೆಳವಣಿಗೆಗೆ ಕಾರಣರಾದರು.
ಕ್ರೀಡೆ ಕೇವಲ ಸ್ಪರ್ಧೆಯಲ್ಲ, ಅದು ಶಿಸ್ತು, ತಂಡಭಾವ ಮತ್ತು ವ್ಯಕ್ತಿತ್ವ ನಿರ್ಮಾಣದ ಮಾಧ್ಯಮ ಎಂಬ ಅವರ ನಂಬಿಕೆ ಇಂದಿಗೂ ಅನೇಕ ಯುವಕರಿಗೆ ಪ್ರೇರಣೆಯಾಗಿದೆ. ಅವರ ಅಗಲಿಕೆ ಕ್ರೀಡಾ ಲೋಕಕ್ಕೂ, ಉದ್ಯಮ ಕ್ಷೇತ್ರಕ್ಕೂ ಮತ್ತು ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ. ಈ ಅಪಾರ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.



