Belagavi NewsBelgaum NewsKannada NewsKarnataka NewsNationalPolitics

*ಜೈಲಿನಲ್ಲಿರುವ ಕೈದಿಗಳಿಗೂ ಮತದಾನದ ಹಕ್ಕು ನೀಡಿ: ರಾಜ್ಯಸಭೆಯಲ್ಲಿ ಕಡಾಡಿ ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜೈಲಿನ ಒಳಗಿನಿಂದ ಚುನಾವಣೆಗೆ ಸ್ಪರ್ಧಿಸಲು ಕಾನೂನಿನಲ್ಲಿ ಅವಕಾಶವಿರುವಾಗ, ಅದೇ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಮತದಾನದ ಹಕ್ಕು ನೀಡುವ ನಿಟ್ಟಿನಲ್ಲಿ ಪ್ರಸ್ತುತ ಜಾರಿಯಲ್ಲಿರುವ 1951 ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 62(5) ಕ್ಕೆ ತಿದ್ದುಪಡಿ ತರುಬೇಕು ಎಂದು ರಾಜ್ಯಸಭೆಯ್ಲಿ ಸಂಸದ ಈರಣ್ಣ ಕಡಾಡಿ ಮನವಿ ಮಾಡಿದ್ದಾರೆ.

ರಾಜ್ಯಸಭೆಯ ಶೂನ್ಯ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ‘ಸಬ್ ಕಾ ಸಾಥ್‌, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್’ ಎಂಬ ಮಂತ್ರದೊಂದಿಗೆ ಕೆಲಸ ಮಾಡುತ್ತಲಿದೆ. ದೇಶದ ಜೈಲುಗಳಲ್ಲಿರುವ ಸುಮಾರು 4.9 ಲಕ್ಷ ಕೈದಿಗಳಲ್ಲಿ ಶೇ. 77 ಕ್ಕೂ ಹೆಚ್ಚು ಅಂದರೆ ಸುಮಾರು 3.8 ಲಕ್ಷ ಜನರು ವಿಚಾರಣಾಧೀನ ಕೈದಿಗಳಾಗಿದ್ದಾರೆ. 

ಇವರಲ್ಲಿ ಬಹುತೇಕರು ಬಡವರು ಮತ್ತು ಶೋಷಿತ ವರ್ಗಕ್ಕೆ ಸೇರಿದವರಾಗಿದ್ದು, ಕೇವಲ ಜಾಮೀನು ಹಣ ಪಾವತಿಸಲಾಗದ ಕಾರಣಕ್ಕೆ ಜೈಲಿನಲ್ಲಿದ್ದಾರೆ. 

ಇಂತಹವರಿಗೆ ಮತದಾನದ ಹಕ್ಕು ನಿರಾಕರಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸರಿಯಲ್ಲ. ಒಬ್ಬ ಅಪರಾಧಿ ಎಂದು ಸಾಬೀತಾದ ವ್ಯಕ್ತಿ ಜಾಮೀನು ಅಥವಾ ಪೆರೋಲ್ ಮೇಲೆ ಹೊರಗಿದ್ದಾಗ ಮತ ಹಾಕಬಹುದು.

Home add -Advt

 ಆದರೆ, ಕಾನೂನಿನ ದೃಷ್ಟಿಯಲ್ಲಿ ಇನ್ನೂ ‘ನಿರ್ದೋಷಿ’ಯಾಗಿಯೇ ಇರುವ ವಿಚಾರಣಾಧೀನ ಕೈದಿಗಳಿಗೆ ಮತದಾನದ ಹಕ್ಕಿಲ್ಲ. ಈ ತಾರತಮ್ಯವನ್ನು ಹೋಗಲಾಡಿಸಲು 1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 62(5) ಕ್ಕೆ ತಿದ್ದುಪಡಿ ತರುವುದು ಅಗತ್ಯವಾಗಿದೆ ಎಂದು ಸದನದ ಗಮನ ಸೆಳೆದರು.

7 ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆಯ ಆರೋಪ ಹೊತ್ತಿರುವ ವಿಚಾರಣಾಧೀನ ಕೈದಿಗಳಿಗೆ ಮತದಾನದ ಹಕ್ಕು ನೀಡಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಈಗಾಗಲೇ ಅನೇಕ ಅಪ್ರಸ್ತುತ ಕಾನೂನುಗಳನ್ನು ರದ್ದುಗೊಳಿಸಿದೆ. 

ಅದೇ ಮಾದರಿಯಲ್ಲಿ ಈ ಕಾನೂನು ಲೋಪವನ್ನೂ ಸರಿಪಡಿಸಿ, ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು. ಸುಪ್ರೀಂ ಕೋರ್ಟ್ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವುದು ಸ್ವಾಗತಾರ್ಹ. 

ದೇಶದ ಕಾರಾಗೃಹಗಳಲ್ಲಿರುವ ಲಕ್ಷಾಂತರ ವಿಚಾರಣಾಧೀನ ಕೈದಿಗಳ ಮೂಲಭೂತ ಹಕ್ಕುಗಳ ರಕ್ಷಣೆಯ ದೃಷ್ಟಿಯಿಂದ ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಶೀಘ್ರವಾಗಿ ಕಾನೂನು ತಿದ್ದುಪಡಿ ತರಬೇಕೆಂದು ಅವರು ಸದನದ ಮೂಲಕ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

Related Articles

Back to top button