Kannada NewsKarnataka NewsLatest

*ಗಿಳಿಶಾಸ್ತ್ರ ಹೇಳುವ ನೆಪದಲ್ಲಿ ಐಟಿ ಅಧಿಕಾರಿಗೆ 35 ಲಕ್ಷ ವಂಚನೆ: ಚಿನ್ನಾಭರಣ ಹೊತ್ತು ಎಸ್ಕೇಪ್ ಆದ ಖದೀಮ*

ಪ್ರಗತಿವಾಹಿನಿ ಸುದ್ದಿ: ಐಟಿ ಅಧಿಕಾರಿಯೊಬ್ಬರು ಗಿಳಿಶಾಸ್ತ್ರದವನ ಆಮಿಷ ನಂಬಿ 35 ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Home add -Advt

ಬೆಂಗಳೂರಿನ ಭಾರತಿನಗರದಲ್ಲಿ ಈ ಘಟನೆ ನಡೆದಿದೆ. ವರ್ಗಾವಣೆ ಹಾಗೂ ಅಭಿವೃದ್ಧಿಗಾಗಿ ಗಿಳಿಶಾಸ್ತ್ರದವನನ್ನು ನಂಬಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ, ಹಣ ಕಳೆದುಕೊಂಡಿದ್ದಾರೆ.

ಕೆಲವು ವರ್ಷಗಳಿಂದ ಬೆಂಗಳೂರಿನ ಐಟಿ ಇಲಾಖೆ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಯೊಬ್ಬರು ಕಳೆದ ಡಿಸೆಂಬರ್ ತಿಂಗಳಲ್ಲಿ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬಾತನ ಪರಿಚಯವಾಗಿತ್ತು. ಭಾರತಿನಗರದ ಶ್ರೀ ಸರ್ಕಲ್ ಬಳಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬಾತ, ಮುಖ ನೋಡಿ ಜಾತಕ ಹಾಗೂ ಭವಿಷ್ಯ ಹೇಳುತ್ತೇನೆ ಎಂದು ಅಧಿಕಾರಿಯನ್ನು ನಂಬಿಸಿದ್ದ.

ಜೀವನದಲ್ಲಿ ಅಭಿವೃದ್ಧಿ ಆಗಬೇಕಾದರೆ ವಿಶೇಷ ಪೂಜೆ ಮಾಡಿಸಬೇಕು ಎಂದು ಹೇಳಿದ್ದ. ಅದಕ್ಕಾಗಿ ಅಧಿಕಾರಿಯಿಂದ ಆರಂಭದಲ್ಲಿ ಸುಮಾರು 50 ಸಾವಿರ ರೂಪಾಯಿ ಪಡೆದು ಪೂಜೆ ಮಾಡಿಸಿದ್ದ. ನಂತರವೂ ಆ ಅಧಿಕಾರಿಗೆ ಪದೇ ಪದೇ ಕರೆ ಮಾಡಿ ವಿವಿಧ ಪೂಜೆಗಳ ಬಗ್ಗೆ ಹೇಳುತ್ತಿದ್ದ. ಹೀಗೆ ಅಧಿಕಾರಿ ಹಾಗೂ ಗಿಳಿಶಾಸ್ತ್ರದವನ ಒಡನಾಟ ಆರಂಭವಾಗಿದೆ.

ಇದೇ ವೇಳೆ ವರ್ಗಾವಣೆಯ ವಿಚಾರವಾಗಿ ಐಟಿ ಅಧಿಕಾರಿ ಗಿಳಿಶಾಸ್ತ್ರ ಕೇಳಿದಾಗ, ದೊಡ್ಡ ಪೂಜೆ ಮಾಡಬೇಕು. ಅದಕ್ಕಾಗಿ ಮನೆಯಲ್ಲಿರುವ ಚಿನ್ನಾಭರಣಗಳನ್ನು ತರಬೇಕು ಎಂದು ಸಲಹೆ ನೀಡಿದ್ದ. ಅವನ ಮಾತನ್ನು ನಂಬಿದ ಐಟಿ ಅಧಿಕಾರಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 194 ಗ್ರಾಂ ಚಿನ್ನಾಭರಣ ಮತ್ತು 1 ಕೆಜಿ 300 ಗ್ರಾಂ ಬೆಳ್ಳಿಯನ್ನು ತೆಗೆದುಕೊಂಡು ಹೋಗಿ ನೀಡಿದ್ದರು.

ಒಂದೇ ದಿನದಲ್ಲಿ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದ ಶೇಖರ್, ನಂತರ ಪೂಜೆ ಇನ್ನೂ ಮುಗಿದಿಲ್ಲ ಎಂದು ಹೇಳಿ ಸುಮಾರು ಒಂದು ವಾರ ಕಾಲ ಅಧಿಕಾರಿಯನ್ನು ಸತಾಯಿಸಿದ್ದಾನೆ. ಅಧಿಕಾರಿ ಆತ ಇದ್ದ ಭಾರತಿನಗರದ ಶ್ರೀ ಸರ್ಕಲ್ ಬಳಿ ಹೋಗಿ ನೋಡಿದಾಗ ಅಲ್ಲಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಕಾಣುತ್ತಿರಲಿಲ್ಲ. ಇದರಿಂದ ಗಾಬರಿಯಾಗಿ ಅಕ್ಕಪಕ್ಕ ವಿಚಾರಿಸಿದಾಗ ಆತನ ನಾಪತ್ತೆಯಾಗಿರುವುದು ಗೊತ್ತಾಗಿದೆ.

ತಾನು ವಂಚನೆಗೊಳಗಾದ ವಿಚಾರ ಅರಿವಾಗುತ್ತಿದ್ದಂತೆ ಐಟಿ ಅಧಿಕಾರಿ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.


Related Articles

Back to top button