
ಪ್ರಗತಿವಾಹಿನಿ ಸುದ್ದಿ: “ಶೃಂಗೇರಿ ಮರು ಎಣಿಕೆ ಫಲಿತಾಂಶವು ಇಡೀ ದೇಶಕ್ಕೇ ಮಾರಕ. ಬಿಜೆಪಿಯಲ್ಲಿ ಇಷ್ಟರಮಟ್ಟಿಗಿನ ಕ್ರಿಮಿನಲ್ ಗಳಿದ್ದಾರೆ ಎಂದು ನಾನು ಎಣಿಸಿರಲಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಸೋಮವಾರ ಅವರು ಪ್ರತಿಕ್ರಿಯೆ ನೀಡಿದರು.
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಆದರೆ ಇಲ್ಲಿ ನಡೆದಿರುವುದು ಷಡ್ಯಂತ್ರ. ಅತ್ಯಂತ ಆಘಾತಕಾರಿ ವಿಚಾರ. ನಾವು ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ತನಿಖೆ ಮಾಡಿಸುತ್ತೇವೆ. ಕಾನೂನಾತ್ಮಕವಾಗಿಯೂ ಹೋರಾಟ ಮಾಡುತ್ತೇವೆ” ಎಂದು ಹೇಳಿದರು.
“ಇದೊಂದು ಅಂತಾರಾಷ್ಟ್ರೀಯ ಸಂಚಿನ ರೀತಿ ನಡೆದಿದ. ನಮಗೆ ಅನುಮಾನ ಇದ್ದರೆ ಸುಪ್ರೀಂ ಕೋರ್ಟಿಗೆ ಹೋಗುತ್ತಿದ್ದೆವು. ಇಲ್ಲಿ ಮತ ಎಣಿಕೆ ಬಾಕ್ಸ್ ಗಳನ್ನು ತೆರೆಯಲಾಗಿದೆ. ಕೆಲವರನ್ನು ಉಪಯೋಗಿಸಿಕೊಂಡು ನಮಗೆ ಮತ ಬಿದ್ದ ಬ್ಯಾಲೆಟ್ ಪೇಪರ್ ಗಳ ಮೇಲೆ ಮತ್ತೊಂದು ಗುರುತು ಹಾಕಲಾಗಿದೆ. ಎಲ್ಲಾ ಬಂಡಲ್ ಗಳು ಮಾನ್ಯ ಎಂದು ತೀರ್ಮಾನ ಆದ ಮೇಲೆ ಈ ತಿದ್ದುಪಡಿ ಹೇಗಾಯಿತು” ಎಂದರು.
“ಇಂತಹವರಿಗೆ ಮತ ಬಿದ್ದಿದೆ ಎಂದು ಪ್ರತಿ ಮತಗಳನ್ನು ಎಲ್ಲರಿಗೂ ತೋರಿಸಿರುತ್ತಾರೆ. ಇದನ್ನು ಕ್ಯಾಮೆರಾದಲ್ಲಿಯೂ ದಾಖಲೀಕರಣ ಮಾಡಿಕೊಳ್ಳಲಾಗಿರುತ್ತದೆ. ಎಲ್ಲಾ ಎಣಿಕೆಯಾದ ಮೇಲೆ ಬಂಡಲ್ ಗಳನ್ನು ಒಳಗೆ ಹಾಕಿ ಸೀಲ್ ಮಾಡಲಾಗಿರುತ್ತದೆ. ಇದಾದ ನಂತರ ಬಂಡಲ್ ತೆಗೆದು ಮತ್ತೊಂದು ಗುರುತು ಮಾಡಲಾಗಿದೆ. ಈಗ ಅದು ಮಾತ್ರ ಎಣಿಕೆಯಾಗಬೇಕು ಎಂದು ನ್ಯಾಯಲಯದ ಮೂಲಕ ಆದೇಶ ತಂದು ಈ ರೀತಿ ಮಾಡಲಾಗಿದೆ” ಎಂದರು.
“ಇದರ ಬಗ್ಗೆ ದೊಡ್ಡ ತನಿಖೆ ಅವಶ್ಯಕತೆಯಿದೆ. ಈ ಹಿಂದೆ ಫಲಿತಾಂಶ ಸರಿಯಾಗಿತ್ತು ಎಂದು ಎಲ್ಲರೂ ಸಹಿ ಮಾಡಿದ್ದಾರೆ. ಚುನಾವಣಾ ಆಯೋಗದ ಬಳಿಯೂ ದಾಖಲೆಯಿದೆ. ಆದರೆ ಮರುಎಣಿಕೆಯಲ್ಲಿ ಬದಲಾವಣೆಯಾಗಿದೆ. ಒಬ್ಬರಿಗೆ ಮತ ಬಿದ್ದ ಕಡೆ ಇನ್ನೊಬ್ಬರಿಗೂ ಗುರುತು ಹಾಕಲಾಗಿದೆ. ಇದರ ಬಗ್ಗೆ ದೂರನ್ನು ಸಹ ನೀಡಲಾಗಿದೆ” ಎಂದರು.
“ಫಲಿತಾಂಶದ ಬಗ್ಗೆ ರಿಟರ್ನಿಂಗ್ ಆಫೀಸರ್ ನ್ಯಾಯಲಯಕ್ಕೆ ಕಳುಹಿಸಬೇಕಿತ್ತು. ಸಂಬಂಧಿಸಿದ ಅಧಿಕಾರಿ ಇದನ್ನೆಲ್ಲಾ ಗಮನಿಸಿದ್ದಾರೆ. ಇದು ಇಡೀ ರಾಜ್ಯಕ್ಕೆ ಕಳಂಕದ ಪ್ರಕರಣ” ಎಂದರು.
“ಈ ಹಿಂದೆ ನಾಯಕರೊಬ್ಬರು ಸಹಕಾರಿ ಚುನಾವಣೆ ವೇಳೆ ಮತಪತ್ರವನ್ನೇ ನುಂಗಿದ್ದರು. ಈಗ ಇಲ್ಲಿಯೂ ಹೆಚ್ಚಿನ ಗುರುತು ಮಾಡಿ, ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಅಕ್ರಮ ಎಸಗಲಾಗಿದೆ. ಗಾಯತ್ರಿ ಶಾಂತನಗೌಡ ಅವರ ವಿಚಾರವನ್ನು ನ್ಯಾಯಲಯದಲ್ಲಿ ಬ್ಲಾಕ್ ಮಾಡಿಕೊಂಡೆ ಬರುತ್ತಿದ್ದಾರೆ. ಸೌಮ್ಯ ರೆಡ್ಡಿ ಅವರು 12 ಮತಗಳ ಅಂತರದಲ್ಲಿ ಸೋತಿದ್ದಾರೆ. ಅದು ಇನ್ನು ಎಣಿಕೆಯಾಗಿಲ್ಲ. ಇದು ಹೇಗೆ ಎಣಿಕೆಯಾಗುತ್ತದೆ” ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರಗಳ ಬಳಕೆ ಮಾಡಿದರೆ ದರುಪಯೋಗವಾಗುತ್ತದೆ ಎನ್ನುವ ಜೆಡಿಎಸ್ ಆರೋಪದ ಬಗ್ಗೆ ಕೇಳಿದಾಗ, “ಅವರು ಮೊದಲು ಚುನಾವಣೆಗೆ ನಿಲ್ಲುತ್ತಾರೋ ಅಥವಾ ಬಿಜೆಪಿ ಜೊತೆ ವಿಲೀನ ಆಗುತ್ತಾರೋ ಎಂಬುದನ್ನು ಮೊದಲು ನೋಡೋಣ” ಎಂದರು.

