

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕರ್ನಾಟಕದ ಯೋಜನೆ ಮತ್ತು ಅಂಕಿಅಂಶ ಇಲಾಖೆ ಸಚಿವರಾಗಿದ್ದ ಡಿ.ಸುಧಾಕರ ನಿಧನರಾಗಿದ್ದಾರೆ.
D. Sudhakar ಕಳೆದ ಕೆಲವು ವಾರಗಳಿಂದ ಶ್ವಾಸಕೋಶದ ಸೋಂಕಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನಜಾವ 3.15 ಗಂಟೆಗೆ ಅವರು ಕೊನೆಯುಸಿರೆಳೆದಿದ್ದಾರೆ.
ಅವರು ಮಣಿಪಾಲ್ ಆಸ್ಪತ್ರೆಯಿಂದ ಏಪ್ರಿಲ್ 20ರಂದು ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಗೊಂಡು, ಇಸಿಎಲ್ಎಸ್ (Extracorporeal Life Support) ನೆರವಿನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದರು.
ವೈದ್ಯರ ಪ್ರಕಾರ, ಮೊಣಕಾಲು ಶಸ್ತ್ರಚಿಕಿತ್ಸೆಯ ಬಳಿಕ ಉಂಟಾದ ಗಂಭೀರ ಶ್ವಾಸಕೋಶದ ಸೋಂಕಿನಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಕೆಲ ದಿನಗಳ ಕಾಲ ವೆಂಟಿಲೇಟರ್ ಹಾಗೂ ಪೂರ್ಣ ಲೈಫ್ ಸಪೋರ್ಟ್ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಮುಖ್ಯಮಂತ್ರಿ Siddaramaiah ಹಾಗೂ ಉಪ ಮುಖ್ಯಮಂತ್ರಿ D. K. Shivakumar ಸೇರಿದಂತೆ ಹಲವು ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬ ಸದಸ್ಯರು ಮತ್ತು ವೈದ್ಯರಿಂದ ಆರೋಗ್ಯ ಮಾಹಿತಿ ಪಡೆದಿದ್ದರು.
ಚಳ್ಳಕೆರೆ ಮೂಲದ ಡಿ. ಸುಧಾಕರ್ ಅವರು ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಸಮಾಜ ಕಲ್ಯಾಣ ಮತ್ತು ಯುವಜನ ಸೇವಾ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಯೋಜನೆ ಮತ್ತು ಅಂಕಿಅಂಶ ಖಾತೆಯನ್ನು ನಿರ್ವಹಿಸುತ್ತಿದ್ದರು.
ವೈಯಕ್ತಿಕ ಜೀವನದಲ್ಲಿ ಸರಳ ವ್ಯಕ್ತಿತ್ವದ ಇವರು ಪತ್ನಿ ಹರ್ಷಿಣಿ, ಮಗ ಸುಹಾಸ್ ಹಾಗೂ ಪುತ್ರಿ ಸ್ಫೂರ್ತಿ ಅವರನ್ನು ಅಗಲಿದ್ದಾರೆ.
ವಿವರ:
ರಾಜ್ಯ ರಾಜಕಾರಣದ ಹಿರಿಯ ನಾಯಕ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ (65) ಇಂದು ಮುಂಜಾನೆ ಬೆಂಗಳೂರಿನ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 3:15ಕ್ಕೆ ಕೊನೆಯುಸಿರೆಳೆದಿದ್ದಾರೆ.
ಮೊದಲು ಮೊಣಕಾಲು ಸಂಬಂಧ ಆಪರೇಷನ್ಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸಚಿವ ಡಿ ಸುಧಾಕರ್ ಅವರು ದಾಖಲಾಗಿದ್ದರು. ಈ ಶಸ್ತ್ರಚಿಕಿತ್ಸೆಯ ಬಳಿಕ ಅವರಿಗೆ ಶ್ವಾಸಕೋಶ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಮಣಿಪಾಲ್ ಆಸ್ಪತ್ರೆಯಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಐಸಿಯುನಲ್ಲಿಯೇ ಇದ್ದ ಸುಧಾರಕರ್ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಸಚಿವ ಡಿ. ಸುಧಾಕರ್ ಅವರು 1961 ಮಾರ್ಚ್28ರಂದು ಎನ್. ದಶರಥಯ್ಯ ಮತ್ತು ಕಾಂಚನಮಾಲಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಇವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ನಡೆದರೆ, ಪದವಿ ಶಿಕ್ಷಣವನ್ನು ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಬಿ.ಕಾಂ ಪೂರೈಸುವ ಮೂಲಕ ಮುಗಿಸಿದರು.
ವೃತ್ತಿಜೀವನದಲ್ಲಿ ತಂದೆಯಿಂದ ಬಳುವಳಿಯಾಗಿ ಬಂದಿದ್ದ ಕೃಷಿ ಮತ್ತು ಲಿಕ್ಕರ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಇವರು, ನಂತರ ರಾಜಕೀಯದತ್ತ ಆಕರ್ಷಿತರಾದರು. ಮಾಜಿ ಶಾಸಕ ಎನ್. ಜಯಣ್ಣ ಅವರಿಂದ ರಾಜಕೀಯ ಕಲಿತ ಸುಧಾಕರ್, ಹಂತ ಹಂತವಾಗಿ ಬೆಳೆದು ಚಿತ್ರದುರ್ಗ ಜಿಲ್ಲೆಯ ಪ್ರಭಾವಿ ನಾಯಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಗುರುತಿಸಿಕೊಂಡಿದ್ದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ: ಸಚಿವ ಡಿ.ಸುಧಾಕರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಅರಣ್ಯ ಸಚಿವ ಈಶ್ವರ ಖಂಡ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಚಿವ ಡಿ.ಸುಧಾಕರ ನಿಧನಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ
ಬೆಳಗಾವಿ : ಹಿರಿಯ ಸಚಿವ ಡಿ.ಸುಧಾಕರ ಅವರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಕಷ್ಟದಿಂದ ಮೇಲೆ ಬಂದಿದ್ದ ಸುಧಾಕರ ಅವರು ಅತ್ಯಂತ ಸರಳ, ಸಜ್ಜನರಾಗಿದ್ದರು. ಎಲ್ಲರೊಂದಿಗೆ ನಗು ನಗುತ್ತ ಮಾತನಾಡುತ್ತಿರುತ್ತಿದ್ದ ಸುಧಾಕರ ಅವರ ಅಕಾಲಿಕ ನಿಧನ ರಾಜ್ಯಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ಧುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಪ್ರಾರ್ಥಿಸಿದ್ದಾರೆ.
