
ಪ್ರಗತಿವಾಹಿನಿ ಸುದ್ದಿ: ನಿನ್ನೆ (ಭಾನುವಾರ) ಎಲ್ಲಡೆ ತಾಯಿಂದರ ದಿನ ಆಚರಿಸಲಾಗಿದೆ. ಆದರೆ ಅಂದೆ ಆಸ್ತಿ ವಿಚಾರವಾಗಿ ಪಾಪಿ ಮಗ ತಾಯಿಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.
ಘಟನೆ ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ರಾಜ್ಕಿಶೋರ್ ಗುಪ್ತಾ ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ಮನೆಯೊಳಗೆ ಗುಂಡಿನ ಸದ್ದು ಕೇಳಿ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ಘಟನೆ ಬಹಿರಂಗವಾಗಿದೆ.
ಕುಟುಂಬದ ಪಿತ್ರಾರ್ಜಿತ ಆಸ್ತಿಯನ್ನು ಆರೋಪಿಯ ತಂದೆ ಮಾರಾಟ ಮಾಡಿದ್ದರು. ಆದರೆ ಈ ವಿಚಾರಕ್ಕೆ ರಾಜ್ಕಿಶೋರ್ ವಿರೋಧ ವ್ಯಕ್ತಪಡಿಸಿದ್ದ. ಇದೇ ವಿಷಯವಾಗಿ ಮನೆಯಲ್ಲಿ ತಾಯಿ ಮತ್ತು ತಮ್ಮನೊಂದಿಗೆ ಜಗಳ ನಡೆದಿದೆ.
ಜಗಳ ತೀವ್ರವಾಗುತ್ತಿದ್ದಂತೆ ಆರೋಪಿ ಬಂದೂಕು ತೆಗೆದು ತಾಯಿ ಮತ್ತು ತಮ್ಮನ ಮೇಲೆ ಗುಂಡು ಹಾರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಯನ್ನು ಬಂಧಿಸಲು ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

