Belagavi NewsBelgaum NewsKannada NewsKarnataka News

*ಶಿವಾನಂದ ನೀಲಣ್ಣವರ ಕಚೇರಿ, ಫ್ಲಾಟ್‌‌ ಸೀಜ್: ಮುಂದುವರೆದ ತನಿಖೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣವ‌ರ್ ಎಂಬುವವರಿಗೆ ಸೇರಿದ ಕಚೇರಿಗಳ ಮೇಲೆ ನಡೆದ ದಾಳಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ವ್ಯವಹಾರದ ನಡೆದಿರುವುದು ಬೆಳಕಿಗೆ ಬಂದಿದ್ದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

ಅಧಿಕಾರಿಗಳು ಸತತವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಶಿವಾನಂದ ನೀಲಣ್ಣವರ್‌ಗೆ ಸಂಬಂಧಿಸಿದ ಮೂರು ಕಚೇರಿಗಳು ಹಾಗೂ ಅಪಾರ್ಟ್‌ಮೆಂಟ್‌ನಲ್ಲಿದ್ದ ಕೆಲವು ಫ್ಲಾಟ್‌ಗಳನ್ನು ಈಗಾಗಲೇ ಸೀಜ್ ಮಾಡಿದ್ದಾರೆ. ದಾಳಿಯ ವೇಳೆ ಕಚೇರಿಯಲ್ಲಿದ್ದ ಕಂಪ್ಯೂಟರ್, ಲ್ಯಾಪ್ಟಾಪ್ ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

Home add -Advt

ದಾಳಿಯ ವೇಳೆ ನೂರಾರು ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳು ಅಧಿಕಾರಿಗಳ ಕೈಗೆ ಸಿಕ್ಕಿದ್ದು ಪ್ರಕರಣದ ಗಾಂಭೀರ್ಯವನ್ನು ಹೆಚ್ಚಿಸಿವೆ. ನೀಲಣ್ಣನವ‌ರ್ ಬಳಸುತ್ತಿದ್ದ ಮೊಬೈಲ್ ಫೋನ್ ಕೂಡ ವಶಕ್ಕೆ ಪಡೆಯಲಾಗಿದ್ದು, ಅವರ ಡಿಜಿಟಲ್ ವ್ಯವಹಾರಗಳ ಜಾಲವನ್ನು ಭೇದಿಸಲು ತಾಂತ್ರಿಕ ಪರಿಶೀಲನೆ ಆರಂಭಿಸಲಾಗಿದೆ.

ತಡರಾತ್ರಿವರೆಗೆ ನಡೆದ ಸುದೀರ್ಘ ವಿಚಾರಣೆಯಲ್ಲಿ ಶಿವಾನಂದ ನೀಲಣ್ಣವ‌ರ್ ನೀಡಿರುವ ಹೇಳಿಕೆ ಅಧಿಕಾರಿಗಳನ್ನೇ ದಂಗಾಗಿಸಿದೆ. “ನನ್ನ ಬಳಿ ಸುಮಾರು 35 ಸಾವಿರ ಹೂಡಿಕೆದಾರರು ಇದ್ದಾರೆ ಮತ್ತು ಒಟ್ಟು 2,500 ಕೋಟಿ ರೂಪಾಯಿಗಳಷ್ಟು ಹಣಕಾಸಿನ ವ್ಯವಹಾರ ನಡೆದಿದೆ” ಎಂದು ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಈ ಬೃಹತ್ ಮೊತ್ತದ ಹಣಕಾಸು ವ್ಯವಹಾರಕ್ಕೆ ಆರ್‌ಬಿಐ ಅಥವಾ ಸೆಬಿ  ನಿಂದ ಯಾವುದೇ ಅಧಿಕೃತ ಅನುಮತಿ ಪಡೆದಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆನ್‌ಲೈನ್ ಮೂಲಕವೇ ಈ ಎಲ್ಲಾ ವರ್ಗಾವಣೆಗಳು ನಡೆದಿದ್ದು ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ಇರುವುದರಿಂದ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ  ವರ್ಗಾಯಿಸುವ ಸಾಧ್ಯತೆಗಳು ದಟ್ಟವಾಗಿವೆ. ಶುಕ್ರವಾರ ಬೆಳಿಗ್ಗೆ ಸಿಐಡಿ ಅಧಿಕಾರಿಗಳ ತಂಡ ಬೆಳಗಾವಿಗೆ ಎಂಟ್ರಿ ಕೊಡುವ ನಿರೀಕ್ಷೆಯಿದೆ. ಇನ್ನು ಆರೋಪಿಯ ನಾಲ್ಕು ಬ್ಯಾಂಕ್ ಖಾತೆಗಳನ್ನು ಈಗಾಗಲೇ ಫ್ರೀಜ್ ಮಾಡಲಾಗಿದ್ದು, ಅದರಲ್ಲಿ 400 ಕೋಟಿ ರೂಪಾಯಿ ಠೇವಣಿ ಇರುವುದು ಪತ್ತೆಯಾಗಿದೆ. ಉಳಿದ ಭಾರಿ ಮೊತ್ತದ ಹಣ ಎಲ್ಲಿಗೆ ಹೋಯಿತು? ಯಾರ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂಬುದು ಈಗ ತನಿಖಾಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ.

ಸದ್ಯ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಶಿವಬಸವ ನಗರದಲ್ಲಿರುವ ಶಿವಾನಂದ ನೀಲಣ್ಣವರ್ ನಿವಾಸ ಹಾಗೂ ಕಚೇರಿಗಳ ಬಳಿ ಬಿಗಿ ಪೊಲೀಸ್‌ ಭದ್ರತೆ ನಿಯೋಜಿಸಲಾಗಿದೆ. ಅಧಿಕಾರಿಗಳು ಅವರಿಗೆ ಮತ್ತೊಮ್ಮೆ ನೋಟಿಸ್ ನೀಡಿದ್ದು, ಇಂದಿನ ವಿಚಾರಣೆಯಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬರುವ ಸಾಧ್ಯತೆಯಿದೆ.

Related Articles

Back to top button