*ಸಿಎಂ ಡಿ.ಕೆ.ಶಿವಕುಮಾರ್ ಮನೆಯಿಂದಲೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಚಾಲನೆ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಸಿಎಂ ಅವರಿಂದ ಗಣತಿ ನಮೂನೆ ಭರ್ತಿ ಮಾಡಿಸುವ ಮೂಲಕ ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 (SIR) ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಂದ ಗಣತಿ ನಮೂನೆ ಪಡೆದು, ಭರ್ತಿ ಮಾಡಿದರು. ಈ ಮೂಲಕ ಸಿಎಂ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ಮತದಾರರಿಗೆ ಪ್ರೇರಣೆ ನೀಡಿದ್ದಾರೆ. ಈ ವೇಳೆ ಸಿಎಂ ಅವರ ತವರೂರು ಕನಕಪುರ ಒಳಗೊಂಡ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಉಪಸ್ಥಿತರಿದ್ದರು.
ಈ ವೇಳೆ ಮಾತನಡಿದ ಸಿಎಂ ಡಿ.ಕೆ.ಶಿವಕುಮಾರ್, ಇಂದಿನಿಂದ ಅಧಿಕೃತವಾಗಿ ಎಸ್ ಐಆರ್ ಆರಂಭವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಅಧಿಕಾರಿಗಳೊಂದಿಗೆ ಸಹಕರಿಸಿ,7 ದಿನಗಳಲ್ಲೇ ಎಲ್ಲರಿಗೂ ಫಾರ್ಮ್ ಕೊಡುತ್ತಾರೆ. ದಯವಿಟ್ಟು ನಿಮ್ಮ ಫೋನ್ ನಂಬರ್, ಆಧಾರ್ ಕಾರ್ಡ್ ಮಾಹಿತಿಗಾಗಿ ಕೊಡಬೇಕು. ಬೇರೆ ರಾಜ್ಯದಲ್ಲಿ ಗ್ಯಾರಂಟಿ ನಿಲ್ಲಿಸುತ್ತಿದ್ದಾರೆ. ಮತದಾನ ಇಲ್ಲದೆ ಇದ್ರೆ ನಾವು ಯಾಕೆ ಗ್ಯಾರಂಟಿ ಕೊಡಬೇಕು? ಹೀಗಾಗಿ ಈ ಅಭಿಯಾನದಲ್ಲಿ ಭಾಗಿಯಾಗಿ ನಿಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಿ ಎಂದು ಕರೆ ನೀಡಿದರು.




