CrimeKarnataka NewsLatest

*ಆಸ್ಪತ್ರೆಯ ಶವಾಗಾದರಲ್ಲಿದ್ದ ಸತ್ತ ಮಹಿಳೆಯರ ಬೆತ್ತಲೆ ಫೋಟೋ ಕ್ಲಿಕ್ಕಿಸುತ್ತಿದ್ದ ಅಟೆಂಡರ್: ಆರೋಪಿ ವಿರುದ್ಧ ಕ್ರಮ ಕೈಗೊಂಡು ವರದಿ ನೀಡುವಂತೆ ಮಹಿಳಾ ಆಯೋಗ ಆದೇಶ*

ಪ್ರಗತಿವಾಹಿನಿ ಸುದ್ದಿ: ಆಸ್ಪತ್ರೆಯ ಶವಾಗಾರದಲ್ಲಿ ಅಟೇಂಡರ್ ಓರ್ವ ಸತ್ತ ಮಹಿಳೆಯರ ಬೆತ್ತಲೆ ಫೋಟೋ ಕ್ಲಿಕ್ಕಿಸುತ್ತಿದ್ದ ಘಟನೆ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು, ಈ ಬಗ್ಗೆ ರಾಜ್ಯ ಮಹಿಳಾ ಆಯೋಗ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.

ಬೀದರ್‌ ಜಿಲ್ಲೆಯ ಬ್ರಿಮ್ಸ್‌ ಆಸ್ಪತ್ರೆಯ ಶವಾಗಾರದಲ್ಲಿ ಅಟೆಂಡರ್‌ ಮುನೀರ್‌ ಅಹಮದ್‌ ಎಂಬಾತ ಸತ್ತ ಮಹಿಳೆಯರ ಬೆತ್ತಲೆ ಫೋಟೋಗಳನ್ನ ಶೂಟ್‌ ಮಾಡಿ ವಿಕೃತಿ ಮೆರೆದಿರುವ ಅಮಾನುಷ ಕೃತ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ಈ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಮುನೀರ್‌ ಅಹಮದ್‌ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದೆ ಎಂದು ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶವಾಗಾರ ಕೋಣೆಯ ಅಟೆಂಡರ್ ಮುನೀರ್ ಅಹ್ಮದ್ ಎಂಬಾತ ಸತ್ತ ಮಹಿಳೆಯರ ಬೆತ್ತಲೆ ಫೋಟೋ ಶೂಟ್ ಮಾಡಿ ವಿಕೃತಿ ಮೆರೆದಿದ್ದಾನೆ. ಪಿಎಂಇ ಮಾಡುವ ಕಾಲಕ್ಕೆ ಅನುಮತಿ ಇಲ್ಲದೇ ತನ್ನ ಮೊಬೈಲ್‌ನಲ್ಲಿ ಮುನ್ನಿರ್ ಸತ್ತ ಮಹಿಳೆಯರ ಶವದ ಮೇಲಿನ ಬಟ್ಟೆ ತೆಗೆದು ಫೋಟೋ ತೆಗೆದುಕೊಳ್ತಿದ್ದನಂತ್ತೆ. ಮಹಿಳೆಯರ ಬೆತ್ತಲೆ ಫೋಟೋ ಕ್ಲಿಕ್ಕಿಸಿಕೊಂಡು ಮೊಬೈಲ್‌ನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದನಂತೆ.

ಕೃತ್ಯದಿಂದ ಮಹಿಳೆಯರ ಘನತೆ, ಕುಟುಂಬಸ್ಥರ ಗೌರವ, ವೈದ್ಯಕೀಯ ಗೌಪ್ಯತೆಗೆ ಧಕ್ಕೆಯಾಗಿದೆ. ಸದ್ಯ ಆರೋಪಿ ಮುನೀರ್‌ ವಿರುದ್ಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ 301, 62 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Home add -Advt

Related Articles

Back to top button