Film & EntertainmentKannada NewsKarnataka NewsNationalPolitics

*ಬಾಲಿವುಡ್‌ನ ಪ್ರಸಿದ್ಧ ನಿರ್ಮಾಪಕ ಪಹ್ಲಾಜ್ ನಿಹಲಾನಿ ನಿಧನ*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್‌ನ ಪ್ರಸಿದ್ಧ ನಿರ್ಮಾಪಕ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ (76) ಅವರು ನಿಧನರಾಗಿದ್ದಾರೆ. 

ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಹಿಂದಿ ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿದ್ದ ಪಹ್ಲಾಜ್ ನಿಹಲಾನಿ ಅವರು ಪತ್ನಿ ನೀತಾ ಹಾಗೂ ವಿಶಾಲ್, ದೀಪೇಶ್, ಚಿರಾಗ್ ಎಂಬ ಮೂವರು ಪುತ್ರರನ್ನು ಅಗಲಿದ್ದಾರೆ.

ಹಿಂದಿ ಚಿತ್ರರಂಗದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ನಿಹಲಾನಿ ಅವರು ಹಲವು ಸೂಪರ್ ಹಿಟ್ ಕಮರ್ಷಿಯಲ್ ಚಲನಚಿತ್ರಗಳನ್ನು ನಿರ್ಮಿಸಿದ್ದರು. ಗೋವಿಂದ ನಟನೆಯ ‘ಆಂಖೇ’, ‘ಅಂದಾಜ್’, ‘ತಲಾಶ್’, ‘ರಂಗೀಲಾ ರಾಜಾ’ ಮತ್ತು ‘ಜೂಲಿ 2’ ಸೇರಿದಂತೆ ವಿಭಿನ್ನ ಶೈಲಿಯ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.

2017ರವರೆಗೆ ಸೆನ್ಸಾರ್ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಅಧಿಕಾರಾವಧಿಯು ಚಿತ್ರರಂಗದಲ್ಲಿ ತೀವ್ರ ಚರ್ಚೆ ಮತ್ತು ವಿವಾದಗಳಿಗೆ ಕಾರಣವಾಗಿತ್ತು. ಸಿನಿಮಾಗಳ ಸೆನ್ಸಾರ್‌ಶಿಪ್ ಹಾಗೂ ಕತ್ತರಿ ಪ್ರಯೋಗಕ್ಕೆ ಸಂಬಂಧಿಸಿದಂತೆ ಇವರು ತೆಗೆದುಕೊಂಡ ಕಠಿಣ ನಿರ್ಧಾರಗಳು ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಆಕ್ರೋಶ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದ್ದವು. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಸುದ್ದಿಯಾದ ಸೆನ್ಸಾರ್ ಮಂಡಳಿಯ ಮುಖ್ಯಸ್ಥರಲ್ಲಿ ಇವರು ಒಬ್ಬರಾಗಿದ್ದರು.

Home add -Advt

ಪಹ್ಲಾಜ್ ನಿಹಲಾನಿ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಮುಂಬೈನಲ್ಲೇ ಇಂದು (ಜೂನ್ 4) ಅಂತ್ಯಕ್ರಿಯೆ ನಡೆಯಲಿದೆ.

Related Articles

Back to top button