Film & EntertainmentKannada NewsLatest

*ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ನಟ ಸಲೀಂ ಕುಮಾರ್ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ: ಮಲಯಾಳಂ ಖ್ಯಾತ ಹಾಸ್ಯ ಕಲಾವಿದ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಲೀಂ ಕುಮಾರ್ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ನ್ಯುಮೋನಿಯಾ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಶನಿವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್‌ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ 10.43ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.

ಸಲೀಂ ಕುಮಾರ್ ಅವರು ಪತ್ನಿ ಸುನಿತಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಪುತ್ರ ಚಂದು ಇತ್ತೀಚೆಗೆ ಸೂಪರ್ ಹಿಟ್ ಆದ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದಲ್ಲಿ ನಟಿಸಿದ್ದರು. ಸಲೀಂ ಕುಮಾರ್ ನಿಧನಕ್ಕೆ ಮಾಲಿವುಡ್ ಚಿತ್ರರಂಗದ ದಿಗ್ಗಜರು ಕಂಬನಿ ಮಿಡಿದಿದ್ದಾರೆ.

ಸೂಪರ್ ಸ್ಟಾರ್ ಮಮ್ಮುಟ್ಟಿ ಅವರು ತಮ್ಮ ಎಕ್ಸ್ ( ಖಾತೆಯಲ್ಲಿ ಅತ್ಯಂತ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ‘ಬೇರೆಯವರನ್ನು ನಗಿಸುತ್ತಾ, ಯೋಚಿಸುವಂತೆ ಮಾಡುತ್ತಾ, ಕೆಲವೊಮ್ಮೆ ತಾವೂ ಅತ್ತು ಬೇರೆಯವರನ್ನೂ ಅಳಿಸುತ್ತಿದ್ದ ಸಲೀಂ. ಈಗ ನೀನು ಕೇವಲ ನನ್ನನ್ನು ಕಣ್ಣೀರಿಡುವಂತೆ ಮಾಡಿ ಹೊರಟುಹೋಗಿದ್ದೀಯ. ನಿನ್ನ ಈ ಅಗಲಿಕೆ ಎಂದಿಗೂ ಮುಗಿಯದ ಮೌನ ಮತ್ತು ಅಪಾರ ದುಃಖವನ್ನು ತಂದಿದೆ ಸಹೋದರ’ ಎಂದು ಕಂಬನಿ ಮಿಡಿದಿದ್ದಾರೆ.

Home add -Advt

ಮಿಮಿಕ್ರಿ ಮತ್ತು ಹಾಸ್ಯ ಕಲಾವಿದರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಸಲೀಂ ಕುಮಾರ್, ಕೇವಲ ಕಾಮಿಡಿ ಪಾತ್ರಗಳಿಗೆ ಸೀಮಿತವಾಗದೆ ಅದ್ಭುತ ಪೋಷಕ ನಟನಾಗಿ ಗುರುತಿಸಿಕೊಂಡರು. 2005ರಲ್ಲಿ ‘ಅಚ್ಚನುರಂಗತ ವೀಡು’ ಚಿತ್ರದ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಇನ್ನು 2010ರಲ್ಲಿ ತೆರೆಕಂಡ ‘ಆದಾಮಿಂತೆ ಮಕನ್ ಅಬು’ ಚಿತ್ರದ ಅಭಿನಯಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಒಲಿದಿತ್ತು.

ಕೇರಳದ ಸಿಎಂ ವಿ.ಡಿ. ಸತೀಶನ್ ಸೇರಿದಂತೆ ಹಲವು ಗಣ್ಯರು ಸಲೀಂ ಕುಮಾರ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ‘ಅವರು ಕೇವಲ ಒಬ್ಬ ಚಿತ್ರನಟನಷ್ಟೇ ಅಲ್ಲ, ನಮಗೆ ಕುಟುಂಬದ ಸದಸ್ಯರಂತಿದ್ದರು’ ಎಂದು ಸತೀಶನ್ ಸ್ಮರಿಸಿದ್ದಾರೆ.

Related Articles

Back to top button