Belagavi NewsBelgaum NewsKannada NewsKarnataka News

*ಶಿವಾನಂದ ನೀಲಣ್ಣವರ ವಂಚನೆಯ ರಹಸ್ಯ ಬಿಚ್ಚಿಟ್ಟ ಸಿಐಡಿ ಡಿಐಜಿಪಿ ಭೀಮಾಶಂಕರ್ ಗುಳೇದ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಶಿವಂ ಅಸೋಸಿಯೇಟ್ ಕಂಪನಿಯು ಸಾವಿರಾರು ಕೋಟಿ ರೂಪಾಯಿ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಮಹತ್ವದ ಮಾಹಿತಿ ಬಹಿರಂಗಪಡಿಸಿದೆ. ಹೆಚ್ಚಿನ ಲಾಭದ ಆಮಿಷವೊಡ್ಡಿ 2,400 ಕೋಟಿ ಸಂಗ್ರಹಿಸಿ, ಹೊಸಬರ ಹಣವನ್ನು ಹಳಬರಿಗೆ ಬಡ್ಡಿಯಾಗಿ ನೀಡುತ್ತಿದ್ದ ವಂಚನೆಯ ರಹಸ್ಯವನ್ನು ಸಿಐಡಿ ಡಿಐಜಿಪಿ ಭೀಮಾಶಂಕರ್ ಗುಳೇದ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇಂದು ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು,  ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಾಗಿ ಮಾಲೀಕನನ್ನು ಬಂಧಿಸಲಾಗಿದ್ದರೂ, ಸಾರ್ವಜನಿಕರು ಇಂದಿಗೂ ಈ ಸಂಸ್ಥೆಗೆ ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು ಜನರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳು ಈ ಸುದ್ದಿಗೋಷ್ಠಿ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಆರೋಪಿ ಶಿವಾನಂದ ನೀಲಣ್ಣವ‌ರ್ ಇದುವರೆಗೆ ಸುಮಾರು 40,700 ಜನರಿಂದ ಒಟ್ಟು 2,400 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸಂಗ್ರಹಿಸಿದ್ದಾನೆ. ಈ ವಂಚನೆಗೆ ಆತ ಅಳವಡಿಸಿಕೊಂಡಿದ್ದ ತಂತ್ರ ಎಂದರೆ, ಹೊಸದಾಗಿ ಬರುತ್ತಿದ್ದ ಹೂಡಿಕೆದಾರರ ಹಣವನ್ನೇ ಹಳಬರಿಗೆ ಬಡ್ಡಿಯ ರೂಪದಲ್ಲಿ ಹಂಚುತ್ತಿದ್ದನು. ಆದರೆ, ದಿನಕಳೆದಂತೆ ಹೊಸದಾಗಿ ಸಂಗ್ರಹವಾಗುತ್ತಿದ್ದ ಹಣಕ್ಕಿಂತ ಹಳಬರಿಗೆ ಕೊಡಬೇಕಾದ ಬಡ್ಡಿಯ ಮೊತ್ತವೇ ಹೆಚ್ಚಾದಾಗ ಇಡೀ ವ್ಯವಸ್ಥೆ ಕುಸಿದುಬಿದ್ದಿದೆ. 

ಸಂಗ್ರಹಿಸಿದ ಹಣದ ಪೈಕಿ 540 ಕೋಟಿ ರೂಪಾಯಿಯನ್ನು ಈತ ಷೇರು ಮಾರುಕಟ್ಟೆಯಲ್ಲಿ (ಸ್ವಾಕ್ ಮಾರ್ಕೆಟ್) ಹೂಡಿಕೆ ಮಾಡಿದ್ದು, ಅಲ್ಲಿ ಭಾರಿ ನಷ್ಟ ಅನುಭವಿಸಿ 170 ಕೋಟಿ ರೂಪಾಯಿ ಕಳೆದುಕೊಂಡಿದ್ದಾನೆ. ಸದ್ಯದ ತನಿಖೆಯ ಪ್ರಕಾರ 660 ಕೋಟಿ ರೂಪಾಯಿ ಕೊರತೆ ಕಂಡುಬಂದಿದ್ದು, ಅದರಲ್ಲಿ 330 ಕೋಟಿ ರೂಪಾಯಿ ಶೀಘ್ರದಲ್ಲೇ ರಿಕವರಿ ಆಗಲಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

Home add -Advt

ಈ ವಂಚನೆ ಜಾಲದಲ್ಲಿ ಶಿವಾನಂದನಿಗೆ ಮತ್ತೊಬ್ಬ ಪಾಲುದಾರ ಸಾಥ್ ನೀಡಿದ್ದು ಕಂಪನಿಯ ಹಣದಿಂದಲೇ ನೀಲಣ್ಣವರ್ ತನ್ನ ಸ್ವಂತಕ್ಕೆ 55 ಕೋಟಿ ರೂಪಾಯಿ ಬಳಸಿಕೊಂಡಿದ್ದಾನೆ. ತನಿಖಾ ತಂಡ ಈಗಾಗಲೇ ಆರೋಪಿಗೆ ಸೇರಿದ 5 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದು, ಆತ ಖರೀದಿಸಿರುವ ಇನ್ನುಳಿದ 11 ವೋಲ್ಲೋ ಎಕ್ಸ್‌ಸಿ90 ಕಾರುಗಳನ್ನು ಶೀಘ್ರದಲ್ಲೇ ವಶಪಡಿಸಿಕೊಳ್ಳಲಿದೆ. ಹೂಡಿಕೆದಾರರಿಗೆ ಇದುವರೆಗೆ ಹೋಗಿರುವ 400 ಕೋಟಿ ರೂ. ಹೆಚ್ಚುವರಿ ಹಣವನ್ನೂ ವಾಪಸ್ ಪಡೆದು ಬಾಕಿ ಇರುವ ಸಂತ್ರಸ್ತರಿಗೆ ಹಂಚಲು ನಿರ್ಧರಿಸಲಾಗಿದೆ. ಇನ್ನು ಈ ವಂಚನೆಯ ಕಪ್ಪು ಹಣ ಸಿನಿಮಾ ಸ್ಟಾರ್‌ಗಳಿಗೆ ವರ್ಗಾವಣೆಯಾಗಿದೆಯೇ ಎಂಬ ಸಂಶಯವಿದ್ದು ಒಂದು ವೇಳೆ ಹಣ ಹೋಗಿರುವುದು ಸಾಬೀತಾದರೆ ಅವರಿಗೂ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆಯಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲೂ ಈ ಸಂಸ್ಥೆ ಭಾರಿ ಹೂಡಿಕೆ ಮಾಡಿಸಿಕೊಂಡಿದ್ದು ಅಲ್ಲಿನ ಪೊಲೀಸರ ಸಹಕಾರದೊಂದಿಗೆ ತನಿಖೆ ಚುರುಕುಗೊಳಿಸಲಾಗಿದೆ. ವಂಚನೆಗೆ ಬಳಸಲಾದ ಪ್ರಮುಖ 30 ಬ್ಯಾಂಕ್ ಖಾತೆಗಳನ್ನು ಪತ್ತೆಹಚ್ಚಲಾಗಿದ್ದು, ಒಂದೇ ಒಂದು ಖಾತೆಯಲ್ಲಿ ಬರೋಬ್ಬರಿ 36,200 ಪುಟಗಳಷ್ಟು ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಕಂಪನಿ ಸಂಪೂರ್ಣ ಮುಳುಗುವ ಮುನ್ನವೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಕಾಲದಲ್ಲಿ ದಾಳಿ ನಡೆಸಿರುವುದರಿಂದ ಭಾರಿ ಪ್ರಮಾಣದ ಹಣ ಉಳಿದಂತಾಗಿದೆ. ಸದ್ಯ ಜಪ್ತಿ ಮಾಡಲಾಗುವ ಎಲ್ಲಾ ಹಣವನ್ನು ಕಾನೂನಿನ ಪ್ರಕಾರ ಬಡ್ಸ್ ಕಾಯ್ದೆಯ ಮುಖ್ಯಸ್ಥರಾದ ಆದಿತ್ಯ ಆಮ್ಹಾನ್ ಬಿಸ್ವಾಸ್ ಅವರಿಗೆ ಹಸ್ತಾಂತರಿಸಲಾಗುವುದು ಮತ್ತು ತದನಂತರ ಅವರು ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಹಣವನ್ನು ವಾಪಸ್ ಮಾಡಲಿದ್ದಾರೆ ಎಂದು ಸಿಐಡಿ ಡಿಐಜಿಪಿ ಸ್ಪಷ್ಟಪಡಿಸಿದ್ದಾರೆ.

Related Articles

Back to top button