Kannada NewsKarnataka NewsLatest

*ಹವ್ಯಕ ಮಹಾಸಭಾದಿಂದ 50 ತಾಲೂಕುಗಳಲ್ಲಿ ಮಹಿಳಾ ವೇದಿಕೆ – ಡಾ.ಗಿರಿಧರ ಕಜೆ*

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಹವ್ಯಕ ಮಹಾಸಭಾದಿಂದ ಮೊದಲ ಹಂತದಲ್ಲಿ 50 ತಾಲೂಕುಗಳಲ್ಲಿ ಮಹಿಳಾ ವೇದಿಕೆ ಆರಂಭಿಸುವ ಗುರಿ ಹೊಂದಲಾಗಿದ್ದು, ಈಗಾಗಲೆ 5 ತಾಲೂಕುಗಳಲ್ಲಿ ರಚನೆಯಾಗಿದೆ ಎಂದು ಹವ್ಯಕ ಮಹಾಸಭಾ ರಾಜ್ಯಾಧ್ಯಕ್ಷ ಡಾ.ಗಿರಿಧರ ಕಜೆ ತಿಳಿಸಿದ್ದಾರೆ.

ಶ್ರೀ ಅಖಿಲ ಹವ್ಯಕ ಮಹಾಸಭಾ, ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹುಬ್ಬಳ್ಳಿ-ಧಾರವಾಡ ಸಹಯೋಗದಲ್ಲಿ ಭಾನುವಾರ ಹುಬ್ಬಳ್ಳಿಯ ಹವ್ಯಕ ಭವನದ ಶಂಕರ ಸಭಾಭವನದಲ್ಲಿ ಏರ್ಪಡಿಸಿದ್ದ ಪ್ರತಿಬಿಂಬ ಕಾರ್ಯಕ್ರಮದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾತೆಯರು ಇಡೀ ಸಮಾಜದ ಶಕ್ತಿ. ಅವರು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಮಹಿಳಾ ವೇದಿಕೆ ರಚಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸಂಸ್ಕಾರ ಇಲ್ಲದಿದ್ದರೆ ಯಾವುದೇ ಸಮಾಜ ಈ ರೀತಿ ಬೆಳೆಯಲು ಸಾಧ್ಯವಿಲ್ಲ. 10 ಸಾವಿರ ಶಿಕ್ಷಕರು ನಮ್ಮ ಸಮಾಜದಲ್ಲಿದ್ದಾರೆ. ಯಕ್ಷಗಾನ ಕಲೆಯನ್ನು ಹವ್ಯಕರೇ ಆಳುತ್ತಿದ್ದಾರೆ. ಎಲ್ಲರಿಗೂ ಗೌರವ ಸಲ್ಲಿಸಿ ಗೌರವ ಪಡೆಯುವ ಸಮಾಜ ಹವ್ಯಕ ಸಮಾಜ. ಹವ್ಯಕ ಸಮಾಜದವರು ಎಲ್ಲ ಕ್ಷೇತ್ರಗಳಲ್ಲೂ ಮುನ್ನುಗ್ಗಬೇಕು. ಎಲ್ಲ ವೈಮನಸ್ಸುಗಳನ್ನು ಬದಿಗಿಟ್ಟು ಸಂಘಟನೆಯಾಗಬೇಕು. ನಮ್ಮದು ಆ ಮಠ, ಈ ಮಠ ಎನ್ನುವುದನ್ನು ಬಿಡಬೇಕು. ಎಲ್ಲರೂ ಸಂಘಟಿತರಾಗುವ ಮೂಲಕ ಸಮಾಜದ ಏಳಿಗೆಗೆ ಕೊಡುಗೆ ನೀಡಬೇಕು ಎಂದು ಕಜೆ ಹೇಳಿದರು.

Home add -Advt

ಸಮಾಜಕ್ಕೆ ಬೇಕಿರುವುದು ಸಂಘಟನೆ. ಸರಕಾರ ಹವ್ಯಕ ಭಾಷೆ ಅಕಾಡೆಮಿ ಆರಂಭಿಸಿದೆ. ಇದು ಹೆಮ್ಮೆಪಡಬೇಕಾದ ಸಂಗತಿ ಇದರಿಂದ ನಮ್ಮ ಭಾಷೆಯ ವಿಶೇಷತೆ ವಿಸ್ತಾರಗೊಳ್ಳಲಿದೆ. ಹವ್ಯಕ ಸಮಾಜದವರಲ್ಲಿ ಸಂಸ್ಕಾರ, ಸಂಸ್ಕೃತಿ, ನಡೆ-ನುಡಿಯಲ್ಲಿ ವಿಶೇಷತೆ ಇದೆ. ಇದನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರತಿಬಿಂಬ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. 13 ಪ್ರಾಂತ್ಯಗಳಲ್ಲಿ ಪ್ರತಿಬಿಂಬ ಕಾರ್ಯಕ್ರಮ ನಡೆಯಲಿದೆ. 50 ತಾಲೂಕುಗಳನ್ನು ಹವ್ಯಕ ಮಹಿಳಾ ವೇದಿಕೆ ರಚನೆಯಾಗಿದೆ. ಮಹಿಳೆಯರು ಸಮಾಜದ ಕೆಲಸ ಮಾಡಲು ಮುಂದೆ ಬರುತ್ತಿರುವುದು ಸಮಾಜದ ಸಂಸ್ಕಾರಕ್ಕೆ ಉದಾಹರಣೆಯಾಗಿದೆ ಎಂದರು.

ಬ್ರಾಹ್ಮಣ ಸಮಾಜದ 43 ಉಪ ಪಂಗಡಗಳಲ್ಲಿ ಹವ್ಯಕ ಸಮಾಜದವರು ಹೆಚ್ಚಾಗಿದ್ದೇವೆ. ಬ್ರಾಹ್ಮಣ ಮಹಾಸಭಾಕ್ಕಿಂತಲೂ 30 ವರ್ಷ ಮೊದಲು ಹವ್ಯಕ ಮಹಾಸಭಾ ಆರಂಭವಾಗಿದೆ. ಹೀಗಾಗಿ ಸಮಾಜದ ಮೇಲೆ ಜವಾಬ್ದಾರಿ ಹೆಚ್ಚಿದೆ. ಸಂಸ್ಕಾರ, ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರಲ್ಲದೆ, ಪ್ರತಿ ವರ್ಷ ಗಾಯತ್ರಿ ಮಹೋತ್ಸವ, ಪ್ರತಿಬಿಂಬ, ಸಂಸ್ಕಾರೋತ್ಸವ ಮಾಡಬೇಕಿದೆ ಎಂದರು.

ಸಮಾಜದಲ್ಲಿ ಕಷ್ಟದಲ್ಲಿರುವವರು ಇದ್ದಾರೆ ಅಂತವರನ್ನು ಮೇಲೆತ್ತುವ ಕಾರ್ಯ ಹವ್ಯಕ ಸಮಾಜ ಮಾಡಬೇಕಿದೆ. ವಿದ್ಯಾರ್ಥಿಗಳಿಗೆ ವಸತಿ ನಿಲಯ, ಭವನ ನಿರ್ಮಾಣದಂತಹ ಕಾರ್ಯಗಳಿಗೆ ಮಹಾಸಭಾ ಚಿಂತನೆ ನಡೆಸಿದೆ. ಹವ್ಯಕ ಸಮುದಾಯವೆಂದರೆ ಪ್ರತಿಭೆಗಳ ಮಹಾಸಾಗರ ಹಾಗೂ ಅದ್ಭುತ ಜ್ಞಾನದ ಗಣಿಯಾಗಿದೆ. ಹವ್ಯಕ ಸಮುದಾಯದ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳಕಿಗೆ ತರುವ ಕಾರ್ಯವನ್ನು ಸಂಸ್ಥೆ ಕಳೆದ 31 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಹವ್ಯಕರ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಕಾರ್ಯಕ್ರಮಗಳ ಮೂಲಕ ಸಮಾಜವನ್ನು ಕಟ್ಟಬೇಕು. ಒಳ್ಳೆಯ ಕೆಲಸ ಮಾಡಿದರೆ ಸಮಾಜ ಜೊತೆಗಿರುತ್ತದೆ ಎನ್ನುವುದಕ್ಕೆ ಕಳೆದ 2 ವರ್ಷಗಳಿಂದ ಹವ್ಯಕ ಮಹಾಸಭಾಕ್ಕೆ ಬರುತ್ತಿರುವ ದೇಣಿಗೆಯೇ ಸಾಕ್ಷಿ. ಯಶಸ್ವಿಯಾದವರ ಬಗ್ಗೆ ಅಸೂಯೆ ಪಡಬಾರದು. ಸಾಧಕರನ್ನು ಹೆಮ್ಮೆಯಿಂದ ನೋಡಬೇಕು. ಪ್ರತಿಭೆಗಳನ್ನು ಸಂಭ್ರಮಿಸಬೇಕು ಎಂದ ಅವರು, ಹವ್ಯಕ ಮಹಾಸಭಾದಿಂದ ಶಂಕರೋತ್ಸವ ಆರಂಭಿಸಲಾಗುತ್ತಿದೆ ಎಂದರು.

ಯಲ್ಲಾಪುರದ ಸಂಕಲ್ಪ ಸೇವಾ ಸಂಸ್ಥೆಯ ಸಂಸ್ಥಾಪಕ ಪ್ರಮೋದ ಹೆಗಡೆ ಅವರು ಮಾತನಾಡಿ, ಹವ್ಯಕ ಸಮಾಜವು ಸುಸಂಸ್ಕೃತದಿಂದ ಕೂಡಿದೆ. ನಮ್ಮ ಸಮಾಜಕ್ಕೆ ಸಾವಿರಾರು ವರ್ಷದ ಇತಿಹಾಸವಿದ್ದು, ಎಲ್ಲೇ ಹೋದರೂ ನಮ್ಮನ್ನು ಗುರುತಿಸುವ ಬ್ರ‍್ಯಾಂಡ್ ಹೊಂದಿದ್ದೇವೆ. ಧನಾತ್ಮಕ ಭಾವನೆಗಳನ್ನು ನಾವು ಹೊಂದಿದ್ದೇವೆ. ವಿಶ್ವದಲ್ಲಿಯೇ ನಮ್ಮ ಸಮಾಜವು ಪ್ರತಿಭಾವಂತರಿಂದ ಕೂಡಿದ್ದು, ಮೂರನೇ ಸ್ಥಾನದಲ್ಲಿದ್ದೇವೆ. ಇದಕ್ಕೆ ನಮ್ಮ ಋಷಿ-ಮುನಿಗಳು ಹಾಕಿಕೊಟ್ಟ ಪರಂಪರೆ ಕಾರಣ ಎಂದರು.

ಎಲ್ಲ ಒಳ್ಳೆಯತನಗಳು ನಮ್ಮ ಹವ್ಯಕರಲ್ಲಿವೆ. ನಮ್ಮ ಮಕ್ಕಳು ಮಹಾನಗರ ಸಂಸ್ಕೃತಿಯ ನಡುವೆ ಕಳೆದುಹೋಗದಿರಲಿ. ಮನೆಯೊಂದಿಗಿನ ಸಂಬಂಧ ಕಡಿದುಕೊಳ್ಳದಿರಲಿ. ಸಾತ್ವಿಕ ಆಹಾರದಿಂದಾ​ಗಿ ನಮ್ಮಲ್ಲಿ ಒಳ್ಳೆಯ ಸಂಸ್ಕಾರ, ನಡತೆ ಇದೆ. ನಮ್ಮ ಸಮಾಜದವರು ಅತ್ಯುತ್ತಮ ಸಾಧನೆ ಮಾಡಿದ್ದು, ಅವರನ್ನು ಗುರುತಿಸಿ ಸನ್ಮಾನಿಸಿದ್ದೇವೆ. ಇವರು ಸಮಾಜದ ಕನ್ನಡಿ. ಇವರ ಸಾಧನೆ ನಮ್ಮ ಸಮಾಜದ ಮೇಲೆ ಪರಿಣಾಮ ಬೀರಬೇಕು. ಈ ಸಂಖ್ಯೆ ಇನ್ನೂ ಹೆಚ್ಚಬೇಕು ಎಂಬ ಸದುದ್ದೇಶ ಹೊಂದಿದ್ದೇವೆ. ಜೊತೆಗೆ ನಾವು ಬೆಳೆದು ಬಂದ ಬೇರು ಮರೆಯಬಾರದು. ನಮ್ಮ ಪೂರ್ವಜರು ಹಾಕಿಕೊಟ್ಟ ಪರಂಪರೆಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕು. ಮಕ್ಕಳನ್ನು ಉದ್ಯಮಿಗಳನ್ನಾಗಿ ಮಾಡಬೇಕು ಎಂದರು.

ಸಾಹಿತಿ ಅರುಣಕುಮಾರ ಹಬ್ಬು, ಪತ್ರಕರ್ತ ಮೋಹನ ಹೆಗಡೆ, ಗೋಸೇವಕ ದತ್ತಾತ್ರೇಯ ಭಟ್ಟ, ಸಮಾಜ ಸೇವಕ ಆರ್.ಕೆ. ಹೆಗಡೆ, ಕಲಾಸೇವಕ ಆರ್.ಜಿ. ಭಟ್ಟ ವರ್ಗಾಸರ, ಶಿಕ್ಷಣ ತಜ್ಞೆ ಮಂಗಳಾ ಭಟ್ಟ ಅವರಿಗೆ ಹವ್ಯಕ ಸಾಧಕ ಪ್ರಶಸ್ತಿ ನೀಡಿ ಸಮಾಜದಿಂದ ಸನ್ಮಾನಿಸಲಾಯಿತು.

ಹುಬ್ಬಳ್ಳಿ-ಧಾರವಾಡ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಉಪಾಧ್ಯಕ್ಷ ಶ್ರೀಕಾಂತ ಹೆಗಡೆ ಸ್ವಾಗತಿಸಿ, ಹವ್ಯಕ ಸಮಾಜದ ಪ್ರತಿಯೊಬ್ಬರೂ ಮಹಾಸಭಾದ ಸದಸ್ಯರಾಗುವಂತೆ ಕರೆ ನೀಡಿ, ವಿದ್ಯಾಕಾಶಿ ಎನಿಸಿರುವ ಧಾರವಾಡದಲ್ಲಿ ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣ ಮಾಡುವಂತೆ ಕೋರಿದರು. ಗೌರವ ಕಾರ್ಯದರ್ಶಿ ಸುದರ್ಶನ ಹೇಮಾದ್ರಿ, ಹುಬ್ಬಳ್ಳಿ- ಧಾರವಾಡ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ವಿ.ಎಂ.ಭಟ್, ಹವ್ಯಕ ಮಹಿಳಾ ಮಂಡಳ ಅಧ್ಯಕ್ಷೆ ಅನಿತಾ ಭಟ್ಟ, ಪ್ರತಿಬಿಂಬ ಸಂಚಾಲಕ ಮೂರ್ತಿ ಹೆಗಡೆ, ಡಿ. ಶಂಕರ ಭಟ್ಟ ಇತರರಿದ್ದರು. ಪ್ರಶಾಂತಕುಮಾರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.

`ಪ್ರತಿಬಿಂಬ’ ಪ್ರತಿಭಾ ಶೋಧ ಕಾರ್ಯಕ್ರಮ: ಬೆಳಿಗ್ಗೆ ಹುಬ್ಬಳ್ಳಿ -ಧಾರವಾಡ ಪ್ರಾಂತ್ಯ ಪ್ರತಿಬಿಂಬ ಪ್ರತಿಭಾ ಶೋಧ ಕಾರ್ಯಕ್ರಮ ಉದ್ಘಾಟಿಸಿದ ಹು-ಧಾ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ವಿ.ಎಂ.ಭಟ್ಟ ಅವರು, ಪ್ರತಿಬಿಂಬ ಎಂದರೆ ನಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯವಾಗಿದೆ. ಹವ್ಯಕ ಸಮಾಜದಲ್ಲಿ ಹಲವಾರು ಮಾದರಿ ಪ್ರತಿಭೆಗಳು ಇದ್ದು, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅತೀ ಅವಶ್ಯವಾಗಿದೆ ಎಂದು ಹೇಳಿದರು.

ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸದಸ್ಯ ಶಿವರಾಮ ಹೆಗಡೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಖಿಲ ಹವ್ಯಕ ಮಹಾಸಭಾದ ಮಹಿಳಾ ವೇದಿಕೆಯ ಹುಬ್ಬಳ್ಳಿ-ಧಾರವಾಡ ಶಾಖೆಗಳನ್ನು ಅಧ್ಯಕ್ಷ ಡಾ.ಗಿರಿಧರ ಕಜೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಚಾಲಕ ಮೂರ್ತಿ ಹೆಗಡೆ, ವೀಣಾ ಹೆಗಡೆ, ವಸಂತ ಭಟ್, ಶ್ರೀಕಾಂತ ಹೆಗಡೆ, ಜಿ.ಕೆ.ಹೆಗಡೆ, ಡಿ.ಜಿ.ಭಟ್, ಆದಿತ್ಯ ಹೆಗಡೆ, ಅಶೋಕ ಹೆಗಡೆ, ಮಧುರಾ ಹೆಗಡೆ, ಶಶಾಂಕ ಹೆಗಡೆ, ಬೆಳಗಾವಿ ಹವ್ಯಕ ಸಂಘದ ಅಧ್ಯಕ್ಷೆ ಪೂರ್ಣಿಮಾ ಹೆಗಡೆ, ಕಾರ್ಯಕಾರಿ ಲಮಿತಿ ಸದಸ್ಯರಾದ ಎಂ.ಕೆ.ಹೆಗಡೆ, ಸುಬ್ರಹ್ಮಣ್ಯ ಭಟ್, ಸಂಧ್ಯ ಭಟ್, ಸುಧಾ ಹೆಗಡೆ ಸೇರಿದಂತೆ ಅನೇಕರಿದ್ದರು.

`ಪ್ರತಿಬಿಂಬ’ದಲ್ಲಿ ಪ್ರತಿಭೆ ಅನಾವರಣ, ಹಬ್ಬದ ಸಂಭ್ರಮ: ಗೋಕುಲ ರಸ್ತೆಯ ಹವ್ಯಕ ಭವನದಲ್ಲಿ ಅಕ್ಷರಶಃ ಹವ್ಯಕರ ಹಬ್ಬದಂತೆ ಕಂಡು ಬಂತು ಎಂದರೆ ತಪ್ಪೇನಿಲ್ಲ. ಸ್ಪರ್ಧಾ ಸೌರಭ, ಧಾರ್ಮಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ವೈಭವದ ಪ್ರತಿಬಿಂಬ ಕಾರ್ಯಕ್ರಮ ಹಬ್ಬದ ವಾತಾವರಣಕ್ಕೆ ಎಡೆಮಾಡಿಕೊಟ್ಟಿತ್ತು. ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಲಾಗಿತ್ತು. ಹವ್ಯಕ ಸಂಪ್ರದಾಯದಂತೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಬೆಳಗ್ಗೆ ಹೋಮ-ಹವನ ಕಾರ್ಯಕ್ರಮ ನಡೆದು ಧಾರ್ಮಿಕತೆ ಮೂಡಿಸಿದರೆ, ಮಹಿಳೆಯರು ಹವ್ಯಕ ಸಂಪ್ರದಾಯದ ಮದುವೆಯಲ್ಲಿ ಹಾಡುವ ನಾಂದಿ, ಮದುಮಗಳನ್ನು ಮಂಟಪಕ್ಕೆ ಕರೆದುಕೊಂಡು ಬರುವ ಹಾಡು, ಶೋಭಾನೆ, ತೊಟ್ಟಿಲು ಹಾಡು, ಶ್ಲೋಕ ಪಠಣ, ಛದ್ಮವೇಷ, ಆಶುಭಾಷಣ, ದೇಶಭಕ್ತಿಗೀತೆ, ಭಗವದ್ಗೀತಾ ಕಂಠಪಾಠ, ಚಿತ್ರಕಲೆ, ಏಕಪಾತ್ರಾಭಿನಯ, ಹವ್ಯಕ ಸಂಪ್ರದಾಯ ಗೀತೆ, ರಂಗೋಲಿ, ಹವಿರುಚಿ, ಮಣ್ಣಿ, ಕರಕುಶಲ ವಸ್ತುಪ್ರದರ್ಶನದಲ್ಲಿ ಮಕ್ಕಳಿಂದ ಹಿರಿಯರಾದಿಯಾಗಿ ಸೇರಿ ಸಂಭ್ರಮದಿಂದ ಪಾಲ್ಗೊಂಡಿದ್ದು ಪ್ರತಿಬಿಂಬ ಕಾರ್ಯಕ್ರಮದ ಸಡಗರ ಹಿಮ್ಮಡಿಗೊಳಿಸಿತ್ತು. ಸಂಜೆ ಸರಿಗಮಪ ಖ್ಯಾತಿಯ ಕುಮಾರಿ ದಿಯಾ ಹೆಗಡೆ ಅವರ ಗಾಯನ, ಸುಪ್ರಸಿದ್ಧ ಕಲಾವಿದರಿಂದ ಸುಧನ್ವಾರ್ಜುನ ಯಕ್ಷಗಾನ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

Related Articles

Back to top button