Kannada NewsKarnataka NewsLatestPolitics

*ಘೋರ ಅಪಚಾರವಾಗಿದೆ ಎನ್ನಲಾಗುತ್ತಿದೆ; ತಪ್ಪು ನಡೆದಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು: ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ*

ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ನಲ್ಲಿ ದೇಣಿಗೆ ಹಾಗೂ ಕಾಣಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.

ಅಯೋಧ್ಯೆ ರಾಅಮ ಮಂದಿರ ಟ್ರಸ್ಟ್ ಸದಸ್ಯರಾಗಿರುವ ಶ್ರೀಗಳು, ಜುಲೈ 11ರಂದು ನಡೆಯುವ ಟ್ರಸ್ಟ್ ಸಭೆಯಲ್ಲಿ ಈ ವಿಷಯ ಚರ್ಚೆಯಾಗಲಿದ್ದು, ಸಂಪೂರ್ಣ ಮಾಹಿತಿ ಪಡೆದ ಬಳಿಕವೇ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ. ಘೋರ ಅಪಚಾರವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ತಪ್ಪು ನಡೆದಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ತಿಳಿಸಿದ್ದಾರೆ.

ರಾಮಮಂದಿರ ಟ್ರಸ್ಟ್‌ನಲ್ಲಿ ನಡೆದಿತ್ತೆನ್ನಲಾದ ಅವ್ಯವಹಾರದ ಆರೋಪದ ಬಗ್ಗೆ ಮಾಧ್ಯಮ ವರದಿಗಳ ಆಧಾರದ ಮೇಲೆ ಅಭಿಪ್ರಾಯ ವ್ಯಕ್ತಪಡಿಸುವುದು ಸೂಕ್ತವಲ್ಲ. ಜುಲೈ 11ರಂದು ಟ್ರಸ್ಟ್ ಸಭೆ ನಡೆಯಲಿದ್ದು, ಅಲ್ಲಿ ವಿಷಯ ಚರ್ಚೆಗೆ ಬರಲಿದೆ. ಸಭೆಯಲ್ಲಿ ಭಾಗವಹಿಸಿ ಸತ್ಯಾಸತ್ಯತೆ ತಿಳಿದು ಬಳಿಕವೇ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.

ಸಿಂಧಿ ಸಮುದಾಯ 200 ಕೆ.ಜಿ. ಬೆಳ್ಳಿ ದೇಣಿಗೆ ನೀಡಿದ್ದರೂ ಗೌರವ ನೀಡಿಲ್ಲ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು, ದೇಣಿಗೆ ನೀಡುವವರು ಕಡ್ಡಾಯವಾಗಿ ರಶೀದಿ ಪಡೆಯಬೇಕು. ರಶೀದಿ ನೀಡದಿರುವುದು ಗಂಭೀರ ತಪ್ಪಾಗಿದ್ದು, ಕೇವಲ ಬಾಯಿಮಾತಿನ ಹೇಳಿಕೆಗಳಿಗಿಂತ ದಾಖಲೆಗಳಿಗೆ ಮಹತ್ವವಿದೆ ಎಂದು ತಿಳಿಸಿದರು.

ಅಯೋಧ್ಯೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಸ್ವಾಗತಿಸಿದ ಶ್ರೀಗಳು, ಆರೋಪಗಳಲ್ಲಿ ಸತ್ಯವಿದ್ದರೆ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ದೇಶ-ವಿದೇಶದ ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರವಾಗಿರುವ ರಾಮ ಮಂದಿರದಲ್ಲಿ ಇಂತಹ ಘಟನೆ ನಡೆಯಬಾರದು ಎಂದರು.

‌ ಟ್ರಸ್ಟ್ ಸದಸ್ಯನಾಗಿ ತಾವು ಹಲವು ಸಲಹೆಗಳನ್ನು ನೀಡಿದ್ದಾಗಿ ತಿಳಿಸಿದ ಶ್ರೀಗಳು, ಸಂಬಂಧಪಟ್ಟವರು ವಿಶ್ವಾಸಾರ್ಹರಾಗಿರಬೇಕಿತ್ತು ಎಂದು ಹೇಳಿದರು. ಟ್ರಸ್ಟ್‌ನಲ್ಲಿ ಸೇವಾ ಪಟ್ಟಿ ಪ್ರಕಟಿಸದಿರುವ ಕುರಿತು ಈಗಾಗಲೇ ನಿರ್ಧಾರವಾಗಿತ್ತು ಎಂದೂ ವಿವರಿಸಿದರು.

ಇದೇ ವೇಳೆ, ರಾಮಮಂದಿರಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡುವ ಬದಲು ಬಡವರಿಗೆ ಮನೆ ನಿರ್ಮಿಸಿಕೊಡುವಂತಹ ಸಮಾಜಸೇವೆ ಮಾಡುವುದೇ ನಿಜವಾದ ರಾಮಸೇವೆ ಎಂದು ಶ್ರೀಗಳು ಕರೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button