*ಡಿಜಿಟಲ್ ಹೆಲ್ತ್‌ಕೇರ್ ಕ್ಷೇತ್ರಕ್ಕೆ ಲಗ್ಗೆಯಿಟ್ಟ ‘ಹ್ಯಾಪಿಯೆಸ್ಟ್ ಹೆಲ್ತ್’, ನೂತನ ಸಿಇಒ ಆಗಿ ರವಿ ಜೋಶಿ ನೇಮಕ*

ಪ್ರಗತಿವಾಹಿನಿ ಸುದ್ದಿ: ದೇಶದ ಪ್ರಮುಖ ಆರೋಗ್ಯ ಮತ್ತು ಸ್ವಾಸ್ಥ್ಯ ಸಂಸ್ಥೆಯಾದ ‘ಹ್ಯಾಪಿಯೆಸ್ಟ್ ಹೆಲ್ತ್’ ತನ್ನ 5ನೇ ಉದ್ಯಮ ವಿಭಾಗವಾಗಿ ಹೊಸ ‘ಡಿಜಿಟಲ್ ಹೆಲ್ತ್‌ಕೇರ್’ ಅನ್ನು ಆರಂಭಿಸಿದೆ. ಈ ಹೊಸ ವಿಭಾಗದ ಅಧ್ಯಕ್ಷ ಮತ್ತು ಸಿಇಒ ಆಗಿ ರವಿ ಜೋಶಿ ಅವರನ್ನು ಸಂಸ್ಥೆ ನೇಮಕ ಮಾಡಿದೆ.
ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ದೇಶ ಹಾಗೂ ವಿದೇಶಗಳಲ್ಲಿರುವ ತನ್ನ ಗ್ರಾಹಕರಿಗೆ ಅತ್ಯುತ್ತಮ ಹಾಗೂ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವುದು ಈ ಹೊಸ ವಿಭಾಗದ ಮುಖ್ಯ ಉದ್ದೇಶವಾಗಿದೆ.
ವರ್ಚುವಲ್ ಡಾಕ್ಟರ್ ಅಪಾಯಿಂಟ್‌ಮೆಂಟ್
ರವಿ ಜೋಶಿ ಅವರು ಈ ಹಿಂದೆ ಹ್ಯಾಪಿಯೆಸ್ಟ್ ಹೆಲ್ತ್‌ನ ನಾಲೆಡ್ಜ್ ಬಿಸಿನೆಸ್ ವಿಭಾಗದಲ್ಲಿ ಕೋ-ಸಿಇಒ ಆಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದರು. ಇದೀಗ ಅವರ ನಾಯಕತ್ವದಲ್ಲಿ ಡಿಜಿಟಲ್ ಹೆಲ್ತ್‌ಕೇರ್ ವಿಭಾಗವು ‘ವರ್ಚುವಲ್ ಡಾಕ್ಟರ್ ಅಪಾಯಿಂಟ್‌ಮೆಂಟ್’ ಸೌಲಭ್ಯದೊಂದಿಗೆ ತನ್ನ ಮೊದಲ ಹೆಜ್ಜೆಯನ್ನಿಡುತ್ತಿದೆ.
ಇದರಿಂದಾಗಿ ಗ್ರಾಹಕರು ತಾವು ಎಲ್ಲಿದ್ದರೂ, ಯಾವುದೇ ಭೌಗೋಳಿಕ ಗಡಿಗಳ ಹಂಗಿಲ್ಲದೆ ಸುಲಭವಾಗಿ ಪರಿಣತ ವೈದ್ಯರನ್ನು ಆನ್‌ಲೈನ್ ಮೂಲಕವೇ ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದು.
ಬರಲಿದೆ ಎಐ ಚಾಲಿತ ಹೆಲ್ತ್ ಪ್ಲಾಟ್‌ಫಾರ್ಮ್
ಹ್ಯಾಪಿಯೆಸ್ಟ್ ಹೆಲ್ತ್ ಕೇವಲ ಆನ್‌ಲೈನ್ ಕನ್ಸಲ್ಟೇಶನ್‌ಗೆ ಮಾತ್ರ ಸೀಮಿತವಾಗಿಲ್ಲ. ರೋಗಿಗಳಿಗೆ ಅವರ ಆರೋಗ್ಯದ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುವ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ (ಎಐ) ಆಧಾರಿತ ಅತ್ಯಾಧುನಿಕ ಹೆಲ್ತ್ ಪ್ಲಾಟ್‌ಫಾರ್ಮ್ ಒಂದನ್ನು ಸಂಸ್ಥೆ ಸಿದ್ಧಪಡಿಸುತ್ತಿದೆ.
ಹೃದಯ ಸಂಬಂಧಿ (ಕಾರ್ಡಿಯೋ), ಮಕ್ಕಳ ವೈದ್ಯಕೀಯ (ಪೀಡಿಯಾಟ್ರಿಕ್) ಮತ್ತು ಲೈಫ್‌ಸ್ಟೈಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್‌ನಂತಹ ಹೊಸ ಡಿಜಿಟಲ್ ಉತ್ಪನ್ನಗಳು ಇದೇ ವರ್ಷದ ಅಂತ್ಯದೊಳಗೆ ಗ್ರಾಹಕರ ಬಳಕೆಗೆ ಸಿಗಲಿವೆ.
ಹೊಸ ವಿಭಾಗದ ಆರಂಭದ ಬಗ್ಗೆ ವಿವರ ನೀಡಿರುವ ಹ್ಯಾಪಿಯೆಸ್ಟ್ ಹೆಲ್ತ್‌ನ ಚೇರ್ಮನ್ ಅಶೋಕ್ ಸೂಟಾ, “ಡಿಜಿಟಲ್ ಹೆಲ್ತ್‌ಕೇರ್ ಕ್ಷೇತ್ರವು ನಮಗೆ ದೊಡ್ಡ ಅವಕಾಶಗಳನ್ನು ತೆರೆದಿಟ್ಟಿದೆ. ನಮ್ಮ ಸಂಸ್ಥೆಯ ಒಳಗಿನ ಪ್ರತಿಭೆಯನ್ನೇ ಗುರುತಿಸಿ ಈ ಜವಾಬ್ದಾರಿ ನೀಡಿರುವುದು ನಮಗೆ ಹೆಮ್ಮೆಯ ವಿಷಯ. ರವಿ ಜೋಶಿ ಅವರಿಗೆ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಅದ್ಭುತ ಸಾಮರ್ಥ್ಯವಿದೆ. ಅವರು ಈ ನೂತನ ಉದ್ಯಮಕ್ಕೆ ಭದ್ರ ಬುನಾದಿ ಹಾಕಲಿದ್ದಾರೆ ಎನ್ನುವ ನಂಬಿಕೆ ನನಗಿದೆ. ನಮ್ಮ ದೀರ್ಘಾವಧಿಯ ಗುರಿ ಹಾಗೂ ಐಪಿಒ ಪ್ರಯಾಣದ ಕಡೆಗೆ ಹೆಜ್ಜೆ ಇಡುತ್ತಿರುವ ಈ ಸಂದರ್ಭದಲ್ಲಿ, ಈ ನೇಮಕಾತಿಯು ಸಂಸ್ಥೆಯ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೂತನ ಸಿಇಒ ರವಿ ಜೋಶಿ ಪ್ರತಿಕ್ರಿಯಿಸಿ, “ಪ್ರತಿಯೊಬ್ಬರು ಜೀವನದ ಪ್ರತಿ ಹಂತದಲ್ಲೂ ನಂಬಬಹುದಾದ ಹೆಲ್ತ್ ಪಾರ್ಟ್ನರ್ ಆಗುವುದು ನಮ್ಮ ಗುರಿ. ಆರೋಗ್ಯ ಸೇವೆ ಎನ್ನುವುದು ಕೇವಲ ಕಾಯಿಲೆ ಬಂದಾಗ ಪಡೆಯುವ ಚಿಕಿತ್ಸೆಯಾಗದೆ, ಜೀವನಪರ್ಯಂತ ಒಡನಾಡಿಯಾಗಿರಬೇಕು ಎಂದು ನಾವು ಬಯಸುತ್ತೇವೆ. ನಮ್ಮ ‘ಡಾಕ್ಟರ್ಸ್ ಪ್ರೋಗ್ರಾಂ’ ಮೂಲಕ ಈ ಹೊಸ ಪ್ರಯಾಣವನ್ನು ಆರಂಭಿಸುತ್ತಿದ್ದೇವೆ. ಹ್ಯಾಪಿಯೆಸ್ಟ್ ಹೆಲ್ತ್‌ನ ಮುಖ್ಯ ಉದ್ದೇಶವಾದ ‘ಸಮಗ್ರ ಆರೋಗ್ಯ ರಕ್ಷಣೆ’ಗೆ ಪೂರಕವಾಗಿರುವಂತಹ ಅತ್ಯುತ್ತಮ ಡಿಜಿಟಲ್ ಪರಿಹಾರಗಳನ್ನು ನಾವು ಜನರಿಗೆ ನೀಡಲಿದ್ದೇವೆ,” ಎಂದು ಭರವಸೆ ನೀಡಿದರು.
ಅಶೋಕ್ ಸೂಟಾ ಅವರಿಂದ ಸ್ಥಾಪಿತವಾದ ಹ್ಯಾಪಿಯೆಸ್ಟ್ ಹೆಲ್ತ್ ಕೇವಲ ಆಸ್ಪತ್ರೆಯ ವಾತಾವರಣಕ್ಕೆ ಸೀಮಿತವಾಗದೆ ವೆಲ್‌ನೆಸ್ ಸೆಂಟರ್ ಮತ್ತು ಕ್ಲಿನಿಕ್‌ಗಳ ಮೂಲಕ ಜನರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಬೆಂಗಳೂರಿನ ವಿವಿಧೆಡೆ ಡೆಂಟಲ್, ಆಯುರ್ವೇದ ಮತ್ತು ಫಿಸಿಯೋಥೆರಪಿ ಸೇವೆಗಳನ್ನು ನೀಡುತ್ತಿರುವ ಸಂಸ್ಥೆ, ಶೀಘ್ರದಲ್ಲೇ ಮೂಳೆ ರೋಗ, ಸ್ತ್ರೀರೋಗ, ಇಎನ್‌ಟಿ, ಕಾರ್ಡಿಯಾಲಜಿಯಂತಹ ಬಹುತೇಕ ಎಲ್ಲಾ ವೈದ್ಯಕೀಯ ವಿಭಾಗಗಳನ್ನು ಆರಂಭಿಸಲಿದೆ.
ಸುಧಾರಿತ ಲ್ಯಾಬ್‌ಗಳ ಮೂಲಕ ಮುನ್ನೆಚ್ಚರಿಕಾ ರೋಗಪತ್ತೆ ಪರೀಕ್ಷೆಗಳು ಹಾಗೂ ಹೆಲ್ತ್ ಮ್ಯಾಗಜೀನ್, ಪಾಡ್‌ಕ್ಯಾಸ್ಟ್‌ಗಳ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದೆ.



