
ಪ್ರಗತಿವಾಹಿನಿ ಸುದ್ದಿ: “ನಗರಗಳತ್ತ ಜನರು ವಲಸೆ ಬರುವುದನ್ನು ತಪ್ಪಿಸಲು ನಮ್ಮ ಸರ್ಕಾರ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಉದ್ಯಮಗಳ ಸೃಷ್ಟಿಗೆ ಉತ್ತೇಜನ ನೀಡಲು ತೀರ್ಮಾನಿಸಿದೆ. ಜೊತೆಗೆ ಗ್ರಾಮೀಣ ಭಾಗಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಿಎಸ್ಆರ್ ಶಾಲೆಗಳ ನಿರ್ಮಾಣಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಕಲಬುರ್ಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಬಳಿಕ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಂಗಳವಾರ ಮಾತನಾಡಿದರು.
“ನಿನ್ನೆ ನಮ್ಮ ಸಹೋದ್ಯೋಗಿಗಳ ಜೊತೆಗೆ ಬಸವಕಲ್ಯಾಣಕ್ಕೆ ಭೇಟಿ ನೀಡಿ ಅನುಭವ ಮಂಟಪಕ್ಕೆ ಭೇಟಿ ನೀಡಿ, ಸರ್ವರನ್ನೂ ಒಳಗೊಳ್ಳುವ ಅಭಿವೃದ್ಧಿ ನನ್ನ ಗುರಿ ಎನ್ನುವ ಉದ್ದೇಶದಿಂದಾಗಿ ಬಸವಣ್ಣನವರ ನಾಡು ಬಸವಕಲ್ಯಾಣದಿಂದ ನಮ್ಮ ಪ್ರವಾಸ ಆರಂಭಿಸಿದ್ದೇವೆ” ಎಂದರು.
ಉದ್ಯೋಗ ಸೃಷ್ಟಿಸಲು ಉದ್ಯಮಗಳ ಆಕರ್ಷಣೆಗೆ ಕ್ರಮ
“ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಉದ್ಯಮ ಸೃಷ್ಟಿಸಲು ಉತ್ತೇಜನ ನೀಡಿ ಉದ್ಯೋಗ ಸೃಷ್ಟಿಸುವುದು ನಮ್ಮ ಗುರಿ. ಉದ್ಯೋಗಕ್ಕಾಗಿ ಗ್ರಾಮೀಣ ಭಾಗದ ಜನರು ನಗರಗಳತ್ತ ವಲಸೆ ಹೋಗುವುದನ್ನು ತಪ್ಪಿಸಿ ಅವರು ಇರುವ ಜಾಗದಲ್ಲೇ ಉದ್ಯೋಗ ಸೃಷ್ಟಿಸಬೇಕು ಎಂಬ ಉದ್ದೇಶದಿಂದ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ಕಲಬುರ್ಗಿ ನಗರ ಸೇರಿದಂತೆ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಉದ್ಯಮದವರನ್ನು ಆಕರ್ಷಿಸಲು 0.6ರಷ್ಟು ಪ್ರಿಮಿಯಂ ಎಫ್ಎಆರ್ ಹಾಗೂ 2 ಪಟ್ಟು ಎಫ್ಎಆರ್ ನೀಡಲು ತೀರ್ಮಾನಿಸಿದೆ. ಇದರಿಂದ ಕಡಿಮೆ ದರದಲ್ಲಿ ಉದ್ಯಮದವರಿಗೆ ಜಾಗ ಸಿಗುವಂತಾಗುತ್ತದೆ. ಇದಕ್ಕೆ ಅಗತ್ಯ ತಿದ್ದುಪಡಿಯನ್ನು ನಗರಾಭಿವೃದ್ಧಿ ಸಚಿವಾಲಯದಿಂದ ತರಲಾಗುವುದು” ಎಂದು ತಿಳಿಸಿದರು.
ಗುಣಮಟ್ಟದ ಶಿಕ್ಷಣಕ್ಕಾಗಿ ಸಿಎಸ್ಆರ್ ಶಾಲೆಗಳ ನಿರ್ಮಾಣ:
“ಶಿಕ್ಷಣಕ್ಕಾಗಿ ಗ್ರಾಮೀಣ ಭಾಗದ ಮಕ್ಕಳು ನಗರಗಳತ್ತ ವಲಸೆ ಹೋಗುವುದನ್ನು ತಪ್ಪಿಸಲು ಸಿಎಸ್ಆರ್ ಶಾಲೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರಂಭಿಸಲು ತೀರ್ಮಾನಿಸಿದ್ದೇವೆ. ಕಂಪನಿಗಳು 10-15 ಕೋಟಿ ಬಂಡವಾಳ ಹಾಕಿ ನಮಗೆ ಶಾಲೆ ಕಟ್ಟಡ ಹಾಗೂ ಮೂಲಸೌಕರ್ಯ ಒದಗಿಸಿದರೆ ಸಾಕು. ಈ ರೀತಿ 2 ಸಾವಿರ ಶಾಲೆಗಳನ್ನು ನಿರ್ಮಿಸಲಾಗುವುದು. ಈ ಕಂಪನಿಗಳು ನಮಗೆ ಹಣ ನೀಡುವುದು ಬೇಡ. ಅವರೇ ಶಾಲೆ ನಿರ್ಮಿಸಿಕೊಡಬೇಕು. ಶಿಕ್ಷಕರ ನೇಮಕ ಪ್ರಕ್ರಿಯೆಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು” ಎಂದು ಮಾಹಿತಿ ನೀಡಿದರು.
ಖಾಸಗಿ ಉದ್ಯೋಗ ವಿನಿಮಯಕ್ಕೆ ಯುವ ಸೇತು ಕಾರ್ಯಕ್ರಮ
“ಖಾಸಗಿ ವಲಯದಲ್ಲಿ ಉದ್ಯೋಗ ನೇಮಕಾತಿ ವಿನಿಮಯ ವ್ಯವಸ್ಥೆಯನ್ನು ರೂಪಿಸಲು ಯುವ ಸೇತು ಯೋಜನೆ ರೂಪಿಸಲಾಗಿದೆ. ಯಾವುದೇ ಕಂಪನಿಗಳಲ್ಲಿ ನೇಮಕಾತಿ ಮಾಡಿಕೊಳ್ಳಬೇಕಾದರೆ ಈ ಉದ್ಯೋಗ ಸೇತು ಮೂಲಕ ಕೌಶಲ್ಯಾಧಾರಿತ ಯುವಕರನ್ನು ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಅವರಿಗೆ ಅಗತ್ಯ ತರಬೇತಿ ನೀಡಲಾಗುವುದು. ಸ್ಥಳೀಯರಿಗೆ ಇಂತಿಷ್ಟು ಪ್ರಮಾಣದಲ್ಲಿ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಲಾಗುವುದು. ಇದರ ಹೊರತಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಇದರ ಪ್ರಮಾಣವನ್ನು ಕಂಪನಿಗಳ ಆಡಳಿತ ಮಂಡಳಿ ಸದಸ್ಯರ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು” ಎಂದು ತಿಳಿಸಿದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪವಿಲ್ಲ:
“ರಾಜ್ಯದಲ್ಲಿ ಎಸ್ಐಆರ್ ನಡೆಯುತ್ತಿದ್ದು, ನಮ್ಮ ಸರ್ಕಾರ ಪಾರದರ್ಶಕವಾಗಿ ಮತದಾರರ ಹಕ್ಕು ಉಳಿಸಲು ತೀರ್ಮಾನಿಸಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡುವ ಅಗತ್ಯ ನಮಗಿಲ್ಲ. ಅದರಲ್ಲಿ ಆಸಕ್ತಿಯೂ ಇಲ್ಲ. ಬೇರೆಯವರು ಏನಾದರೂ ಟೀಕೆ ಮಾಡಿಕೊಳ್ಳಲಿ. ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಮತದಾನದ ಹಕ್ಕು ಉಳಿಸುವುದು ನಮ್ಮ ಸರ್ಕಾರದ ಬದ್ಧತೆ. ಆಮೂಲಕ ಸರ್ಕಾರದ ಯೋಜನೆಗಳು ಜನರಿಗೆ ತಲುಪುವಂತೆ ಮಾಡಬೇಕು. ಎಸ್ಐಆರ್ ವಿಚಾರವಾಗಿ ನಮ್ಮ ಆಕ್ಷೇಪಗಳನ್ನು ನಾವು ನ್ಯಾಯಾಲಯದಲ್ಲಿ ಮಂಡಿಸುತ್ತಿದ್ದೇವೆ. ವಿರೋಧ ಪಕ್ಷದವರು ನಮ್ಮ ಸರ್ಕಾರದ ಎಸ್ಐಆರ್ ಗೆ ಸಹಕಾರ ನೀಡುವುದಿಲ್ಲ ಎಂದು ಭಾವಿಸಿದ್ದರು. ನಮಗೆ ಭಿನ್ನಾಭಿಪ್ರಾಯವಿದೆ ಎಂಬ ಕಾರಣಕ್ಕೆ ಜನರ ಮತದಾನದ ಹಕ್ಕು ಕಳೆದುಕೊಳ್ಳಲು ಅವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಸರ್ಕಾರ ದೇಶದ ಬೇರೆ ಯಾವುದೇ ರಾಜ್ಯದಲ್ಲಿ ನೀಡದ ಸಹಕಾರವನ್ನು ನೀಡುತ್ತಿದೆ. ಕಾನೂನು ಹೊರತಾಗಿ ಪ್ರಕ್ರಿಯೆ ನಡೆಸಲು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ಬಿಎಲ್ಓಗಳು ಪ್ರತಿ ಮನೆಗೆ ಮೂರು ಬಾರಿ ಸಂಪರ್ಕ ಮಾಡಬೇಕು. ಈ ಅರ್ಜಿ ತುಂಬುವ ಪ್ರಕ್ರಿಯೆಯಲ್ಲಿ ಜನರಿಗೆ ನೆರವು ನೀಡಲು ಬಿಎಲ್ಎ2ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಪ್ರಕ್ರಿಯೆಯನ್ನು ಬಿಎಲ್ಓಗಳು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು” ಎಂದು ತಿಳಿಸಿದರು.
“ಜನರಿಗೆ ಅಗತ್ಯ ದಾಖಲೆ ಒದಗಿಸಬೇಕು ಎಂಬ ಉದ್ದೇಶದಿಂದ ಉಚಿತವಾಗಿ ನಿವಾಸ ದೃಢೀಕರಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರ ನೀಡಲಾಗುವುದು. ಕುಡಿಯುವ ನೀರಿನ ಸಮಸ್ಯೆ ನಿರ್ವಹಿಸಲು ಕಾರ್ಯಪಡೆ ರಚಿಸಲಾಗಿದೆ. ಎಲ್ಲಾ ಆರ್ ಓ ಕುಡಿಯುವ ನೀರಿನ ಕೇಂದ್ರಗಳ ಪರಿಶೀಲನೆ ಹಾಗೂ ನೀರಿನ ಗುಣಮಟ್ಟದ ಪರೀಕ್ಷೆ ಮಾಡಲು ಸೂಚಿಸಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಗೆ ಪ್ರತಿ ವರ್ಷ 5 ಸಾವಿರ ಕೋಟಿ ವಿಶೇಷ ಅನುದಾನ ನೀಡುತ್ತಿದ್ದೇವೆ” ಎಂದು ತಿಳಿಸಿದರು.
ಆಸ್ತಿ ದಾಖಲೆಗಳ ಸರಿಪಡಿಸಲು ಕ್ರಾಂತಿಕಾರಿ ಕಾರ್ಯಕ್ರಮ:
“ಕಂದಾಯ ಇಲಾಖೆಯಲ್ಲಿ ಇ ಖಾತೆ ವಿತರಣೆ ಮೂಲಕ ಕ್ರಾಂತಿಕಾರಿ ಹೆಜ್ಜೆ ಇರಿಸಲಾಗಿದೆ. ಜನರು ಸಂಪಾದನೆ ಮಾಡಿರುವ ಆಸ್ತಿಗಳಿಗೆ ದಾಖಲೆಗಳನ್ನು ಸರಿಪಡಿಸುವುದು, ಪೋಡಿ ಮಾಡಿಕೊಡುವುದು, ಇ ಸ್ವತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ದಾಖಲೆಗಳನ್ನು ಉಚಿತವಾಗಿ ಒದಗಿಸಿಕೊಡಲು ಮುಂದಾಗಿದ್ದೇವೆ. ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಮುಂದಾಗಿದ್ದೇವೆ” ಎಂದು ಹೇಳಿದರು.
“ಲಂಚ ಇಲ್ಲದೆ ಬಡವರಿಗೆ ಖಾತೆ ಮಾಡಿಕೊಡಬೇಕು ಎನ್ನುವುದು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ. ಪೋಡಿ, ಇ-ಖಾತೆ ಸೇರಿ ಯಾವುದೇ ಸಮಸ್ಯೆ ಇದ್ದರೂ ಸರಿಯಾಗಿ ಪರಿಹಾರ ನೀಡಬೇಕು. ನಾನೇ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಬಂದು ಖಾತೆ ಪತ್ರ ಹಂಚಿಕೆ ಮಾಡುತ್ತೇನೆ. ಬಡವರಿಗೆ ಸಹಾಯ ಆಗುವ ಕೆಲಸಕ್ಕೆ ಅಡೆ ತಡೆ ಇರದಂತೆ ನೋಡಿಕೊಳ್ಳಲು ನಿರ್ದೇಶನ ನೀಡಲಾಗಿದೆ” ಎಂದರು.
“ಜನರ ಸಮಸ್ಯೆ ಆಲಿಸಲು ಪ್ರಜಾಸೇವೆ ಇಲಾಖೆ ಆರಂಭಿಸಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 15 ದಿನಕ್ಕೊಮ್ಮೆ ಜನರ ಕುಂದುಕೊರತೆ ಆಲಿಸಲು ಪ್ರಜಾಸೇವೆ ಅಭಿಯಾನ ಮಾಡಬೇಕು. ಶಾಸಕರು ಪಂಚಾಯ್ತಿ ಹಾಗೂ ಹೊಬಳಿ ಮಟ್ಟದಲ್ಲಿ ಈ ಅಭಿಯಾನ ಮಾಡಬೇಕು” ಎಂದರು.
ಆಗಸ್ಟ್ 15ರ ವೇಳೆಗೆ ಭಾರತ ಜೋಡೋ ಯುವಕರ ಸಂಘ ನೋಂದಣಿ ಪ್ರಕ್ರಿಯೆ:
“ಯುವಕರಲ್ಲಿ ಸಾಮರಸ್ಯ ಮೂಡಿಸಿ ಅವರ ಕಲೆ, ಕ್ರೀಡೆ, ನಾಯಕತ್ವ ಬೆಳಸಿಕೊಳ್ಳಲು ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ 10 ಸಾವಿರ ಭಾರತ ಜೋಡೋ ಯುವಕರ ಸಂಘ ಮಾಡಲು ತೀರ್ಮಾನಿಸಲಾಗಿದೆ. ಪ್ರತಿ ಸಂಘಕ್ಕೆ ವಾರ್ಷಿಕ 10 ಲಕ್ಷ ಅನುದಾನ ನೀಡಲಿದೆ. ಮುಂದಿನ ತಿಂಗಳು 15ರ ಒಳಗೆ ಸಂಘಗಳ ನೋಂದಣಿ ಮಾಡಲು ಪ್ರಕ್ರಿಯೆ ಮಾಡಲಾಗುವುದು. ಒಸಿ ಸಿಸಿ ವಿಚಾರದಲ್ಲಿ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಹಾಕಲು ಆಗಸ್ಟ್ 15ರವರೆಗೆ ಅವಕಾಶ ನೀಡಲಾಗಿದೆ. ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ನೀಡಲಾಗಿದೆ. ಪ್ರತಿ ಠಾಣೆಗಳಲ್ಲಿ ರೌಡಿ ನಿಗ್ರಹ ಪಡೆ ರಚಿಸಬೇಕು. ಡ್ರಗ್ಸ್ ನಿಯಂತ್ರಣದಲ್ಲಿ ಝೀರೋ ಟಾಲರೆನ್ಸ್ ಇರಲಿ. ಡ್ರಗ್ ನಿಂದ ನಾಡಿನ ಮಕ್ಕಳು ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. ಜಿಲ್ಲಾ ರಕ್ಷಣಾಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು” ಎಂದು ತಿಳಿಸಿದರು.
ಇತರೆ ಘೋಷಣೆಗಳು:
• ಪ್ರತಿ ಕ್ಷೇತ್ರದಲ್ಲಿ ಕಂದಾಯ ಇಲಾಖೆ ಜಾಗದಲ್ಲಿ ಬಡವರಿಗಾಗಿ ಸುಮಾರು 10 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಉಪ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ.
• 320 ಕೋಟಿ ಅನುದಾನದಲ್ಲಿ ಜವಳಿ ಪಾರ್ಕ್ ಅನ್ನು ಕಲಬುರ್ಗಿಯಲ್ಲಿ ಆರಂಭಿಸಲಾಗುತ್ತಿದೆ.
• ಬೆಳೆ ವಿಮೆ ವಿಚಾರದಲ್ಲಿ ರೈತರಲ್ಲಿ ಆತಂಕ ಮೂಡಿದ್ದು, ಮುಂಗಾರು ಕೊರತೆ ಬೆಳೆ ಪರಿಹಾರ ವಿಮೆ 580 ಕೋಟಿ ಅಂದಾಜು ಮಾಡಲಾಗಿದ್ದು, 243 ಕೋಟಿ ರೂ. ಇತ್ಯರ್ಥ ಮಾಡಲಾಗಿದ್ದು, 225 ಕೋಟಿ ರೂ. ಬಿಡುಗಡಗೆ ಆದೇಶ ನೀಡಲಾಗಿದೆ. ಉಳಿದ ವಿಮೆ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮಕೈಗೊಳ್ಳುತ್ತೇವೆ.
ಪ್ರಶ್ನೋತ್ತರ:
ಸಾಲಮನ್ನಾ ಸುಲಭದ ಕೆಲಸವಲ್ಲ
ಸಾಲಮನ್ನಾ ಮಾಡಬೇಕು ಎಂಬ ಬೇಡಿಕೆ ರೈತರಿಂದ ವ್ಯಕ್ತವಾಗುತ್ತಿದೆ ಎಂದು ಕೇಳಿದಾಗ, “ಬೇಡಿಕೆಗಳು ಬರುತ್ತಿವೆ. ಆದರೆ ಸಾಲಮನ್ನಾ ಅಷ್ಟು ಸುಲಭವಾದ ಕೆಲಸವಲ್ಲ. ಬೇರೆ ರಾಜ್ಯಗಳು ಮಾಡದೇ ಇದ್ದಾಗಲೂ ನಾವು ಸಾಲ ಮನ್ನಾ ಮಾಡಿದ್ದೇವೆ. ಮನಮೋಹನ್ ಸಿಂಗ್ ಅವರ ಸರ್ಕಾರ ಇದ್ದಾಗಲೂ ಮಾಡಿದ್ದೇವೆ. ಈ ವಿಚಾರವನ್ನು ಪರಿಶೀಲನೆ ಮಾಡುತ್ತೇವೆ” ಎಂದು ತಿಳಿಸಿದರು.
ಕೃಷಿ ಇಲಾಖೆ ಹುದ್ದೆಗಳು ಖಾಲಿ ಇದ್ದು, ರೈತರಿಗೆ ನೆರವು ಸಿಗುತ್ತಿಲ್ಲ ಎಂದು ಕೇಳಿದಾಗ, “ಈ ಕಾರಣಕ್ಕೆ 72 ಸಾವಿರ ಖಾಲಿ ಹುದ್ದೆಗಳ ನೇಮಕಕ್ಕೆ ಸರ್ಕಾರ ಮುಂದಾಗಿದೆ. ಗೃಹ, ಕೃಷಿ, ಕಂದಾಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯಲ್ಲಿ ಹುದ್ದೆಗಳ ಭರ್ತಿಗೆ 6 ತಿಂಗಳ ಗಡವು ನೀಡಲಾಗಿದೆ” ಎಂದರು.
ಎಸ್ಐಆರ್ ಪ್ರಕ್ರಿಯೆಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂಬ ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ, “ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಅವರು ಕೆಲಸ ಮಾಡುತ್ತಿದ್ದು, ಇದರಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ಸಿಬ್ಬಂದಿ ಒದಗಿಸುವುದು ನಮ್ಮ ಜವಾಬ್ದಾರಿ ಅದನ್ನು ಮಾಡುತ್ತಿದ್ದೇವೆ” ಎಂದು ತಿಳಿಸಿದರು.



