
ಪ್ರಗತಿವಾಹಿನಿ ಸುದ್ದಿ: ಹಲವು ಚೆಕ್ ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಲಿವುಡ್ ನ ಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಶಾಕ್ ನೀಡಿದ್ದು, ಜೈಲು ಶಿಕ್ಷೆ ಎತ್ತಿ ಹಿಡಿದಿದೆ.
ರಾಜ್ ಪಾಲ್ ಯಾದವ್ ಗೆ ವಿಧಿಸಲಾಗಿದ್ದ ಮೂರು ತಿಂಗಳ ಜೈಲು ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ. ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರಿದ್ದ ಪೀಠವು ಈ ತೀರ್ಪು ನೀಡಿದ್ದು, ರಾಜ್‌ಪಾಲ್ ಯಾದವ್ ವಿರುದ್ಧದ 7 ಪ್ರಕರಣಗಳಲ್ಲಿ ತಲಾ 3 ತಿಂಗಳ ಸಾದಾ ಜೈಲು ಶಿಕ್ಷೆಯನ್ನು ವಿಧಿಸಿದೆ.
ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಚಾಲ್ತಿಯಲ್ಲಿರಲಿವೆ ಎಂದು ಕೋರ್ಟ್ ತಿಳಿಸಿದೆ. ಇದರೊಂದಿಗೆ, ಪ್ರತಿ ಪ್ರಕರಣದಲ್ಲೂ ದೂರುದಾರರಿಗೆ ತಲಾ 1.05 ಕೋಟಿ ರೂಪಾಯಿ ಪಾವತಿಸುವಂತೆ ನಟನಿಗೆ ಆದೇಶಿಸಲಾಗಿದೆ.
ರಾಜ್‌ಪಾಲ್ ಯಾದವ್ ಮಾತ್ರವಲ್ಲದೆ, ಅವರ ಪತ್ನಿ ರಾಧಾ ಯಾದವ್ ಅವರಿಗೂ ಕೋರ್ಟ್ ಭಾರಿ ಮೊತ್ತದ ದಂಡ ವಿಧಿಸಿದೆ. ಪ್ರತಿ ಪ್ರಕರಣದಲ್ಲೂ ದೂರುದಾರರಿಗೆ ತಲಾ 5 ಕೋಟಿ 51 ಲಕ್ಷದ 380 ರೂಪಾಯಿಗಳನ್ನು ಪಾವತಿಸುವಂತೆ ರಾಧಾ ಯಾದವ್ ಅವರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಹಿಂದೆ ರಾಜ್‌ಪಾಲ್ ಯಾದವ್ ಪಾವತಿಸಿದ್ದ 2.25 ಕೋಟಿ ರೂಪಾಯಿಗಳನ್ನು ಬಾಕಿ ಮೊತ್ತದಲ್ಲಿ ಕಡಿತಗೊಳಿಸಿ ಹೊಂದಾಣಿಕೆ ಮಾಡಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.



