Kannada NewsKarnataka NewsLatest

*ಸ್ವರ್ಣವಲ್ಲಿ ಶ್ರೀಗಳೊಂದಿಗೆ ಎ. ರವೀಂದ್ರ ಸುದೀರ್ಘ ಸಮಾಲೋಚನೆ*

ಪ್ರಗತಿವಾಹಿನಿ ಸುದ್ದಿ: ಶಿರಸಿ: ಸೊಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಮಠಾಧೀಶ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳೊಂದಿಗೆ ಅರಣ್ಯ ಅತಿಕ್ರಮಣದಾರರ ವೇದಿಕೆಯ ಅಧ್ಯಕ್ಷ, ಹೋರಾಟಗಾರ ಎ. ರವೀಂದ್ರ ನಾಯ್ಕ್ ಅವರು ಒಂದು ಗಂಟೆಗೂ ಅಧಿಕ ಕಾಲ ಮಹತ್ವದ ಸಮಾಲೋಚನೆ ನಡೆಸಿದರು.


ಅರಣ್ಯವಾಸಿಗಳ ಹಕ್ಕುಗಳು, ಅರಣ್ಯ ಅತಿಕ್ರಮಣದಾರರ ಸಮಸ್ಯೆಗಳು, ಬೆಟ್ಟದ ಹಕ್ಕು, ಕೇಂದ್ರ ಸರ್ಕಾರದ ಅರಣ್ಯ ಹಾಗೂ ಭೂ ಸಂಬಂಧಿತ ಕಾನೂನುಗಳ ಅನುಷ್ಠಾನ, ಪರಿಸರ ಸಂರಕ್ಷಣೆ, ನದಿ ಜೋಡಣೆ ಯೋಜನೆಗಳು ಹಾಗೂ ಪಶ್ಚಿಮ ಘಟ್ಟದ ಪರಿಸರ ಸಮತೋಲನಕ್ಕೆ ಸಂಬಂಧಿಸಿದ ಹಲವು ವಿಷಯಗಳು ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದವು.


ಅರಣ್ಯ ಭೂಮಿಯಲ್ಲಿ ಹಲವು ದಶಕಗಳಿಂದ ವಾಸಿಸುತ್ತಿರುವ ಕುಟುಂಬಗಳ ಹಕ್ಕುಗಳ ರಕ್ಷಣೆ, ಅವರಿಗೆ ಕಾನೂನಿನಡಿ ದೊರೆಯಬೇಕಾದ ಸೌಲಭ್ಯಗಳು, ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನದಲ್ಲಿರುವ ಅಡೆತಡೆಗಳು ಹಾಗೂ ಬೆಟ್ಟದ ಹಕ್ಕುಗಳಿಗೆ ಸಂಬಂಧಿಸಿದ ಗೊಂದಲಗಳ ಕುರಿತು ಎ. ರವೀಂದ್ರ ನಾಯ್ಕ್ ಅವರು ಮಹಾಸ್ವಾಮಿಗಳ ಗಮನಕ್ಕೆ ತಂದರು. ಈ ವಿಷಯದಲ್ಲಿ ಕಾನೂನಿನ ಚೌಕಟ್ಟಿನೊಳಗೆ ನ್ಯಾಯಯುತ ಪರಿಹಾರ ದೊರಕುವಂತೆ ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸಬೇಕೆಂಬ ಅಭಿಪ್ರಾಯಗಳು ವ್ಯಕ್ತವಾದವು.

Home add -Advt


ಇದೇ ಸಂದರ್ಭದಲ್ಲಿ ಬೇಡ್ತಿ–ಅಘನಾಶಿನಿ ನದಿ ಜೋಡಣೆ ಯೋಜನೆಯ ಪರಿಸರ ಹಾಗೂ ಸಾಮಾಜಿಕ ಪರಿಣಾಮಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಯಿತು. ಈ ಯೋಜನೆಯಿಂದ ಪಶ್ಚಿಮ ಘಟ್ಟದ ಜೀವ ವೈವಿಧ್ಯ, ಅರಣ್ಯ ಸಂಪತ್ತು, ಜಲಮೂಲಗಳು, ಕೃಷಿ ಹಾಗೂ ಸ್ಥಳೀಯ ಜನಜೀವನದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸಮಾಲೋಚನೆ ನಡೆಸಿ, ಜನ ಜೀವನಕ್ಕೆ ಇರುವ ಆತಂಕ ದೂರಮಾಡಬೇಕಾಗಿದೆ ಎಂಬ ಕುರಿತು ಚರ್ಚೆ ನಡೆಯಿತು.


ಶರಾವತಿ ಭೂಗತ ಜಲ ವಿದ್ಯುತ್ ಯೋಜನೆಯಿಂದಾಗುವ ಪರಿಸರದ ಮೇಲಿನ ದುಷ್ಪರಿಣಾಮಗಳು, ನದಿಗಳ ಸ್ವಾಭಾವಿಕ ಹರಿವು, ಪರಿಸರ ಸಮತೋಲನ ಹಾಗೂ ಭವಿಷ್ಯದ ಜಲ ಸಂಪನ್ಮೂಲಗಳ ಸಂರಕ್ಷಣೆಯ ಅಗತ್ಯತೆಯ ಕುರಿತೂ ಚರ್ಚೆ ನಡೆಯಿತು. ಅಭಿವೃದ್ಧಿ ಯೋಜನೆಗಳು ಪರಿಸರಕ್ಕೆ ಧಕ್ಕೆಯಾಗದಂತೆ ಹಾಗೂ ಸ್ಥಳೀಯ ಜನರ ಬದುಕಿಗೆ ತೊಂದರೆಯಾಗದಂತೆ ಜಿಲ್ಲೆಯ ಯೋಜನೆಗಳು ರೂಪುಗೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. ಜಿಲ್ಲೆಯ ಉಳಿವಿಗೆ ಕಾನೂನಿನ ಹೋರಾಟವೇ ಹೆಚ್ಚು‌ಮಹತ್ವದ್ದೆಂದು ರವೀಂದ್ರನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು. ಕಾನೂನು ಹೋರಾಟದ ಸಿದ್ಧತೆಯನ್ನು ಕೊಳ್ಳ ಸಂರಕ್ಷಣಾ‌ ಸಮಿತಿ ಮಾಡುತ್ತಿದೆ ಎಂದು ಶ್ರೀಗಳು ತಿಳಿಸಿದರು.


ರವೀಂದ್ರ ನಾಯ್ಕ ಅವರು ಅರಣ್ಯವಾಸಿಗಳ‌ ಮೂಲಕ ದಶಲಕ್ಷ ಗಿಡ ನೆಡಲು ಪ್ರೇರೇಪಿಸಿದ್ದು ಸಂತಸ ತಂದಿದೆ ಎಂದು ಶ್ರೀಗಳು ಅಭಿನಂದಿಸಿದರು.
ಇತ್ತೀಚಿನ ದಿನಗಳಲ್ಲಿ ಬೇಡ್ತಿ–ಅಘನಾಶಿನಿ ಕಣಿವೆ ಸಂರಕ್ಷಣಾ ಹೋರಾಟದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಗೌರವಾಧ್ಯಕ್ಷರಾಗಿ ಮಾರ್ಗದರ್ಶನ ನೀಡುತ್ತಿದ್ದು, ಎ. ರವೀಂದ್ರ ನಾಯ್ಕ್ ಅವರು ಪರಿಸರ ಸಂರಕ್ಷಣೆ, ಅರಣ್ಯ ಅತಿಕ್ರಮಣದಾರರ ಹಕ್ಕುಗಳು ಹಾಗೂ ಬೆಟ್ಟದ ಹಕ್ಕುಗಳ ಕುರಿತಂತೆ ನಿರಂತರ ಹೋರಾಟ ನಡೆಸುತ್ತಿದ್ದ ಕಾರಣಕ್ಕೆ ಈ ಭೇಟಿ ಪರಿಸರ ಮತ್ತು ಜನಜೀವನಕ್ಕೆ ಸಂಬಂಧಿಸಿ ಮಹತ್ವದ್ದಾಗಿದೆ. ಈ ವೇಳೆ ಸುರೇಶ ಹಕ್ಕಿಮನೆ ಇತರರು ಇದ್ದರು.

Related Articles

Back to top button