*ಮನದ ಕತ್ತಲನ್ನು ಅಳಿಸಿ, ಅರಿವಿನ ಬೆಳಕನ್ನು ಮೂಡಿಸುವವರೆ ಗುರು : ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗುರು ನಮಗೆ ಒಳ್ಳೆಯ ನಡವಳಿಕೆ, ವಿನಯ ಮತ್ತು ನೈತಿಕತೆಯನ್ನು ಕಲಿಸಿ ಉತ್ತಮ ಮನುಷ್ಯನನ್ನಾಗಿ ರೂಪುಗೊಳಿಸುತ್ತಾರೆ. ಅದಲ್ಲದೇ ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ ಸುಜ್ಞಾನವೆಂಬ ಬೆಳಕನ್ನು ಮೂಡಿಸುತ್ತಾರೆ. ಹೀಗೆ ಮನದ ಕತ್ತಲನ್ನು ಅಳಿಸಿ ಅರಿವಿನ ಬೆಳಕನ್ನು ನೀಡುವ ಗುರುವಿಗೆ ಸಮಾಜದಲ್ಲಿ ಉನ್ನತ ಸ್ಥಾನವಿದೆ ಎಂದು ನಾಗನುರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಶಿವಬಸವ ನಗರದ ಕುಮಾರೇಶ್ವರ ಉಚಿತ ವಿದ್ಯಾರ್ಥಿ ಪ್ರಸಾದ ನಿಲಯದಲ್ಲಿ ಜರುಗಿದ ಗುರುಪೂರ್ಣಿಮಾ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್. ಪಿ. ಹಿರೇಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ನಾಗನೂರು ರುದ್ರಾಕ್ಷಿ ಮಠದ ಪ್ರಸಾದ ನಿಲಯದ ವಿದ್ಯಾರ್ಥಿಗಳಾದ ಕಾರ್ತಿಕ ಗೌಡರ ಹಾಗೂ ಶ್ರೇಯಾ ವಾರಿ ನಿರೂಪಿಸಿದರು. ಮಂಜುನಾಥ ಗಾಣಿಗೇರ ಸ್ವಾಗತಿಸಿದರು. ಶ್ರಾವಣಿ ನಾಯಕ ಪ್ರಸ್ತಾವಿಕ ನುಡಿಗಳನ್ನಾಡಿದರು. ಕೊನೆಯಲ್ಲಿ ಸಾಕ್ಷಿ ಸುಳಷಿ ವಂದಿಸಿದರು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಡಿ. ಶಿವನಾಯ್ಕರ, ಉಪಪ್ರಾಚಾರ್ಯೆ ಶಿವಲೀಲಾ ಪೂಜಾರ ಸೇರಿದಂತೆ ಪ್ರಸಾದ ನಿಲಯದ ವ್ಯವಸ್ಥಾಪಕರು, ನಿಲಯ ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


