Belagavi NewsBelgaum NewsKarnataka NewsLatestPolitics

*ಮಳೆಯಲ್ಲೂ ಕರ್ತವ್ಯಕ್ಕೆ ಆದ್ಯತೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ*

ವಿವಿಧ ಕಾಲುವೆಗಳ ಪರಿಶೀಲನೆ ನಡೆಸಿದ ಸಚಿವರು-ರೈತ ಮುಖಂಡರಿಂದ ಗೋಕಾಕ ಸಾಹುಕಾರ್‌ಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ನಿರಂತರ ಸುರಿಯುತ್ತಿರುವ ಮಳೆಯ ನಡುವೆಯೂ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಅವರು ವಿವಿಧ ಕಾಲುವೆಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಹೌದು..ರಾಜ್ಯ ರಾಜಕೀಯದಲ್ಲಿ ಡಿಸಿಎಂ ಸ್ಥಾನದ ಕುರಿತ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ರೈತರ ಹಿತದೃಷ್ಟಿಯಿಂದ ನೀರಾವರಿ ವ್ಯವಸ್ಥೆಗೆ ಆದ್ಯತೆ ನೀಡಿದರು. ರವಿವಾರ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಬಲದಂಡೆ ಕಾಲುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಕಾಲುವೆಯ ಮೂಲಕ ರೈತರಿಗೆ ಸಮರ್ಪಕವಾಗಿ ನೀರು ತಲುಪುವ ವ್ಯವಸ್ಥೆ ಹಾಗೂ ನೀರಾವರಿ ಕಾಮಗಾರಿಗಳ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ರೈತರಿಗೆ ಯಾವುದೇ ರೀತಿಯ ನೀರಿನ ಕೊರತೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ನೀರಾವರಿ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ನಿರ್ದೇಶನ ನೀಡಿದರು.

Home add -Advt


ನಿನ್ನೆಯ ದಿನ ಯರಗಟ್ಟಿ ತಾಲೂಕಿನ ಕೊಡ್ಲಿವಾಡ, ಗೋಕಾಕ ತಾಲೂಕಿನ ಕೌಜಲಗಿ (ಜಿ.ಆರ್.ಬಿ.ಸಿ. ಮುಖ್ಯ ಕಾಲುವೆ), ರಾಯಬಾಗ ತಾಲೂಕಿನ ಮುಗಳಖೋಡ ಚೌಕಿ (ಜಿ.ಎಲ್.ಬಿ.ಸಿ. ಮುಖ್ಯ ಕಾಲುವೆ) ಹಾಗೂ ರಾಯಬಾಗ–ಮೇಖಲಿ ಕೆರೆಗಳಿಗೆ ಭೇಟಿ ನೀಡಿ ಸಚಿವರು ಇಂದು ಬೆಳಂಬೆಳಗ್ಗೆ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಬಲದಂಡೆ ಕಾಲುವೆಗೆ ಬರುವ ಗೊಡಚಿನಮಲ್ಕಿ, ಗೊಡಗೇರಿ, ಮೇಲ್ಮಟ್ಟಿ ಕಾಲುವೆಗಳಿಗೆ ಭೇಟಿ ನೀಡಿ ಕಾಲುವೆಗಳಲ್ಲಿನ ನೀರಿನ ಹರಿವು, ನಿರ್ವಹಣಾ ಕಾರ್ಯಗಳು, ದುರಸ್ತಿ ಅಗತ್ಯವಿರುವ ಭಾಗಗಳು ಹಾಗೂ ರೈತರಿಗೆ ನೀರು ಸಮರ್ಪಕವಾಗಿ ತಲುಪುವ ವ್ಯವಸ್ಥೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಅಗತ್ಯವಿರುವ ಸ್ಥಳಗಳಲ್ಲಿ ತ್ವರಿತವಾಗಿ ದುರಸ್ತಿ ಹಾಗೂ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದ ಸಚಿವರು, ಜಲಾಶಯಗಳಿಂದ ನೀರು ಹರಿಬಿಡುವ ಮುನ್ನವೇ ಕಾಲುವೆಗಳ ಹೂಳೆತ್ತುವಿಕೆ ಮತ್ತು ಜಂಗಲ್ ಕಟಿಂಗ್ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ಅಲ್ಲದೇ ಕಾಲುವೆಯ ಕೊನೆಯ ಭಾಗದಲ್ಲಿರುವ ರೈತರ ಜಮೀನುಗಳಿಗೂ ನೀರು ತಲುಪುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈಗಾಗಲೇ ಮುಂಗಾರು ಮಳೆ ಕೊರತೆಯಿಂದ ಸಾಕಷ್ಟು ನಷ್ಟ ಅನುಭವಿಸಿರುವ ರೈತರು ಕಾಲುವೆ ನೀರನ್ನೇ ಅವಲಂಬಿಸಿ ಬಿತ್ತನೆ ಮಾಡಿದ್ದು, ಅಧಿಕಾರಿಗಳು ಹೆಚ್ಚಿನ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಸ್ಥಳೀಯ ರೈತ ಮುಖಂಡರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಹಿಡಕಲ್ ಡ್ಯಾಮ್ ಕೆಎನ್‌ಎನ್‌ಎಲ್ ಜಿಆರ್‌ಬಿಸಿಸಿಸಿ ವೃತ್ತದ ಅಧೀಕ್ಷಕ ಇಂಜಿನಿಯರ್ ಮಕರಂದ ಬಿ. ಪೇಡನೆಕರ, ಗೋಕಾಕ ಕೆಎನ್‌ಎನ್‌ಎಲ್ ಜಿಆರ್‌ಬಿಸಿಸಿಸಿ ವಿಭಾಗ ಸಂಖ್ಯೆ 3ರ ಕಾರ್ಯಪಾಲಕ ಇಂಜಿನಿಯರ್ ಹೆಚ್. ಎಸ್. ಕಾಖಂಡಕಿ, ಗೋಕಾಕ್ ಕೆಎನ್‌ಎನ್‌ಎಲ್ ಜಿಆರ್‌ಬಿಸಿಸಿಸಿ ಉಪವಿಭಾಗ ಸಂಖ್ಯೆ 6ರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಶ್ವಿನ್ ಹೆಚ್. ಜೆ., ಹಿಡಕಲ್ ಡ್ಯಾಮ್ ಕೆಎನ್‌ಎನ್‌ಎಲ್ ಸಿಬಿಸಿ ಉಪವಿಭಾಗ ಸಂಖ್ಯೆ 1ರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಹೊಸಮನಿ ಹಾಗೂ ಮುಖಂಡರಾದ ನಿಂಗಪ್ಪ ಕುರಬೇಟ, ಶಿವು ಪಾಟೀಲ, ಅಶೋಕ್ ಖಂಡ್ರಟ್ಟಿ, ಸುಧಾಕರ ಶೆಟ್ಟಿ, ಬಸವರಾಜ ಪಾಟೀಲ, ಶಿವು ಮುಗಲಿ ಸೇರಿದಂತೆ ಇತರ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.

Related Articles

Back to top button