Belagavi NewsBelgaum NewsHealthKarnataka NewsLatest

*ಉತ್ತರ ಕರ್ನಾಟಕದ ಗ್ರಾಮಗಳ ಮಹಿಳೆಯರಿಗೆ ಕೆಎಲ್‌ಇ ಸಹಯೋಗದಲ್ಲಿ ಸಾಯಿ ಶ್ಯೂರ್‌ ವಿಸ್ತರಣೆಗೆ ಚಿಂತನೆ*

ಅನಿಮಿಯಾ ಮುಕ್ತ ಬೆಳಗಾವಿ ಜಿಲ್ಲೆ: ಸದ್ಗುರು ಶ್ರೀ ಮಧುಸೂದನ ಸಾಯಿ

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: “ಉತ್ತರ ಕರ್ನಾಟಕದ ಮಹಿಳೆಯರಲ್ಲಿ ರಕ್ತಹೀನತೆ ದೊಡ್ಡ ಸಮಸ್ಯೆಯಾಗಿದೆ. ಇದರ ನಿವಾರಣೆಗೆ ಕೆಎಲ್‌ಇ ಸಂಸ್ಥೆಯ ಸಹಯೋಗದಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಹೆಣ್ಣುಮಕ್ಕಳಿಗೆ ಪೌಷ್ಟಿಕಾಂಶ ಆಹಾರ ನೀಡುವ ಕುರಿತು ಪರಿಶೀಲಿಸಲಾಗುವುದು ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

Home add -Advt


ನಗರದಲ್ಲಿ ಮಂಗಳವಾರ (ಆಗಸ್ಟ್‌ 11) ನಡೆದ “ದಿವ್ಯ ಸಂಜೆ” ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಣ ತಜ್ಞ ಮತ್ತು ಪ್ರಾಂಶುಪಾಲ ಡಾ ಸಿ.ಎನ್.ನಾಯ್ಕರ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

“ನಮ್ಮ ಆಸ್ಪತ್ರೆ ಆರಂಭವಾದ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಒಂದೇ ಒಂದು ನವಜಾತ ಶಿಶು ಮೃತಪಟ್ಟಿಲ್ಲ, ಪ್ರಸವದ ಸಂದರ್ಭದಲ್ಲಿ ಯಾವೊಬ್ಬ ಮಹಿಳೆಯ ಸಾವು ಆಗಿಲ್ಲ. ಮುಂದಿನ ದಿನಗಳಲ್ಲಿ ಇಡೀ ಬೆಳಗಾವಿ ಈ ಹಂತಕ್ಕೆ ಬರಲಿದೆ. ಇಲ್ಲಿನ ಮಹಿಳೆಯರ ಆರೋಗ್ಯ ಸುಧಾರಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡೋಣ” ಎಂದು ಭರವಸೆ ನೀಡಿದರು.

“ಒಬ್ಬ ಮಹಿಳೆಗೆ ಪೌಷ್ಟಿಕಾಂಶ ಆಹಾರದ ಸೂತ್ರಾಧಾರಿತ ಪುಡಿ (ಸಾಯಿ ಶೂರ್) ನೀಡಲು ಒಂದು ದಿನಕ್ಕೆ ಎರಡು ರೂಪಾಯಿ ಖರ್ಚು ಬರುತ್ತದೆ. ನಾವು ಒಂದು ರೂಪಾಯಿ ಖರ್ಚು ಮಾಡುತ್ತೇವೆ. ನೀವು (ಸಮಾಜ) ಒಂದು ರೂಪಾಯಿ ಸಹಯೋಗ ಕೊಡಿ” ಎಂದು ಸದ್ಗುರುಗಳು ಮನವಿ ಮಾಡಿದರು. ಆಗ ಸಭೆಯಲ್ಲಿದ್ದ ಕೆಎಲ್‌ಇ ಗೌರವಾಧ್ಯಕ್ಷ ಪ್ರಭಾಕರ ಕೋರೆ ಅವರು, “ನಮ್ಮ ಸಂಸ್ಥೆಯಿಂದ ಒಂದು ರೂಪಾಯಿ ಕೊಡುತ್ತೇವೆ” ಎಂದು ಭರವಸೆ ನೀಡಿದರು. ಸಭೆಯಲ್ಲಿ ಭಾರೀ ಕರತಾಡನದ ಮೆಚ್ಚುಗೆ ವ್ಯಕ್ತವಾಯಿತು.


ಕೆಎಲ್‌ಇ ಸಂಸ್ಥೆ ಜತೆ ಕೆಲಸ ಮಾಡಲು ನಮಗೂ ಸಂತೋಷ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು.

“ಕೇವಲ ಗರ್ಭಿಣಿಯರಿಗಷ್ಟೇ ಪೌಷ್ಟಿಕಾಂಶದ ಪುಡಿಯನ್ನು ಕೊಟ್ಟರೆ ಹೆಚ್ಚು ಪ್ರಯೋಜನವಾಗುವುದಿಲ್ಲ. 13ನೇ ವಯಸ್ಸಿನಿಂದಲೇ ಬೆಳಗಾವಿ ಜಿಲ್ಲೆಯ ಎಲ್ಲ ಹೆಣ್ಣುಮಕ್ಕಳಿಗೆ ಈ ಸೂತ್ರಾಧಾರಿತ ಪುಡಿ ಸಿಗುವಂತೆ ಆಗಬೇಕು. ಆಗ ಅವರ ಇಡೀ ಜೀವನ ಚೆನ್ನಾಗಿರುತ್ತದೆ. ಆರೋಗ್ಯವಂತ ಮಹಿಳೆಯರು ಆರೋಗ್ಯವಂತ ಮಕ್ಕಳಿಗೆ ಜನ್ಮನೀಡುತ್ತಾರೆ. ಅರೋಗ್ಯವಂತ ಸಮಾಜ ರೂಪುಗೊಳ್ಳುತ್ತದೆ” ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಪಾಲ್ಗೊಂಡ ನೂರಾರು ನಾಗರಿಕರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ “ಒನ್ ವಲ್ಡ್ ಒನ್ ಫ್ಯಾಮಿಲಿ ಮಿಷನ್” ನಿರ್ವಹಿಸುತ್ತಿರುವ ಸೇವಾ ಚಟುವಟಿಕೆಗಳ ಅಗಾಧತೆಯ ಪರಿಚಯ ಮಾಡಿಕೊಂಡರು. ಬೆಳಗಾವಿ ಜಿಲ್ಲೆಯಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳ ವಿಡಿಯೊ ಪ್ರದರ್ಶಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ನ ಅಧ್ಯಕ್ಷ ಡಾ ಬಿ.ಎನ್.ನರಸಿಂಹಮೂರ್ತಿ, ನಮ್ಮ ಹೃದಯದಲ್ಲಿರುವ ಜೀವಕಾರಣ್ಯವು ನಿಸ್ವಾರ್ಥ ಸೇವೆಯಾಗಿ ವ್ಯಕ್ತಗೊಂಡಾಗಲೇ ಕರುಣೆಯು ಸಾರ್ಥಕವಾಗುತ್ತದೆ. ಕಳೆದ 15 ವರ್ಷಗಳಿಂದ ಇದೇ ತತ್ತ್ವದಡಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು “ಒನ್ ವರ್ಲ್ಡ್‌ ಒನ್ ಫ್ಯಾಮಿಲಿ ಮಿಷನ್” ಸೇವಾ ಅಭಿಯಾನ ಮುನ್ನಡೆಸುತ್ತಿದ್ದಾರೆ ಎಂದು ವಿವರಿಸಿದರು.

“ಯಾವುದೇ ನಿಸ್ವಾರ್ಥ ಸೇವೆಗೆ ಹಣ ಮತ್ತು ಜನ ಬೇಕು. ನಿಸ್ವಾರ್ಥ ಮನೋಭಾವದ ಜನರು ಹಣವು ಹಿಂಬಾಲಿಸುತ್ತದೆ ಎನ್ನುವುದು ಸದ್ಗುರುಗಳ ಅಭಿಮತ. ಭಗವಂತನ ಸಂಕಲ್ಪ, ನಿಸ್ವಾರ್ಥ ಪ್ರೇಮಕ್ಕೆ ಅಗಾಧವಾದ ಶಕ್ತಿಯಿದೆ. ಈ ಸೇವಾ ಅಭಿಯಾನದ ಶಕ್ತಿಯೂ ಅದೇ ಆಗಿದೆ” ಎಂದು ಅವರು ಹೇಳಿದರು.

ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನಲ್ಲಿರುವ ಶ್ರೀ ಸತ್ಯ ಸಾಯಿ ನಿತ್ಯನಿಕೇತನಂ ಗುರುಕುಲದ ವಿದ್ಯಾರ್ಥಿಗಳ ವೇದಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ಕೊನೆಯಲ್ಲಿ “ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ” ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅತ್ಯಾಕರ್ಷಕ ವಾದ್ಯಗೋಷ್ಠಿ (ಆರ್ಕೆಸ್ಟ್ರಾ) ಪ್ರಸ್ತುತಪಡಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕೆಎಲ್‌ಇ ಗೌರವಾಧ್ಯಕ್ಷ ಡಾ ಪ್ರಭಾಕರ ಕೋರೆ, ನಿರ್ದೇಶಕರಾದ ಮಹಾಂತೇಶ್ ಕವಟಗಿಮಠ, ಶಾಸಕ ಅಭಯ್ ಪಾಟೀಲ್, ಮಾಜಿ ಶಾಸಕ ಶ್ಯಾಮ್ ಘಾಟ್ಗೆ, ಬಿಜೆಪಿ ಮುಖಂಡ ಎಂ.ಬಿ.ಜಿರಲಿ, ಬೆಳಗಾವಿ ನಗರದ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಎನ್‌.ವಿ.ಬರಮನಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಪ್ರಶಾಂತಿ ಬಾಲ ಮಂದಿರ ಟ್ರಸ್ಟ್‌ನ ವಿಶ್ವಸ್ಥರಾದ ರಾಜಶೇಖರ್ ನಿರೂಪಿಸಿದರು.

Related Articles

Back to top button