*ಅಮೆರಿಕಾದಿಂದ ಬರುತ್ತಿದ್ದಂತೆ ದೇಶವೇ ಅಲ್ಲೋಲ ಕಲ್ಲೋಲ ಆಗುವ ವಿಷಯ ಹೇಳುತ್ತೇನೆ: ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ: ಇಡೀ ದೇಶವೇ ಅಲ್ಲೋಲ ಕಲ್ಲೋಲವಾಗುವ ಸುದ್ದಿ ಹೇಳುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಅಕ್ಕ ಸಮ್ಮೇಳನ ಹಿನ್ನೆಲೆಯಲ್ಲಿ ಅಮೆರಿಕಾಗೆ ತೆರಳುತ್ತಿದ್ದು, ಅಲ್ಲಿಂದ ಬಂದ ಬಳಿಕ ದೇಶವೇ ಅಲ್ಲೋಲ ಕಲ್ಲೋಲ ಆಗುವ ವಿಷಯ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಯ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಾಮಾಣಿಕವಾಗಿ ಜನರ ಮುಂದೆ ಹಲವು ದಾಖಲೆ ಇಡ್ತೇನೆ. ನಿಮಗೆ ದಿನಕ್ಕೊಂದು ಸುದ್ದಿ ಕೊಡುತ್ತೇನೆ. ಆಗ ಹೆಚ್.ಡಿ.ಕುಮಾರಸ್ವಾಮಿ ಏನು ಎಂದು ಗೊತ್ತಾಗುತ್ತೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಸದನದಲ್ಲಿ ಕೆಪಿಎಸ್‌ಸಿ ಅಕ್ರಮದ ಬಗ್ಗೆ ಸಿಎಂ ಉತ್ತರಿಸಿದ್ದ ದಾಖಲೆ ಬಿಡುಗಡೆ ಮಾಡಿದ ಹೆಚ್ಡಿಕೆ, ಆರ್ಡರ್ ಕಾಪಿ ಕೊಡಬೇಡಿ ಅಂತಲೇ ಕೆಪಿಎಸ್‌ಸಿ ಸೆಕ್ರೆಟರಿ ಹೇಳಿದ್ದರು. ಆದರೂ ಇದರ ಬಗ್ಗೆ ಸರ್ಕಾರ ಯಾವುದೇ ಅಪೀಲು ಮಾಡಿಲ್ಲ. ನೀವು ಯಾರನ್ನು ಕಾಪಾಡಲು ಮುಂದಾಗಿದ್ದೀರಿ? OMR ತಿದ್ದಿ ಪರೀಕ್ಷೆ ಪಾಸ್ ಆಗಿರುವವರಿಗೆ ರಕ್ಷಣೆ ಕೊಡ್ತಿದ್ದೀರಾ? ಇದಕ್ಕೆ ಉತ್ತರಿಸಿ, ಆಮೇಲೆ ಆರ್ಎಸ್ಎಸ್ ಬಗ್ಗೆ ಟೀಕೆ ಮಾಡಿ ಎಂದರು.
ಕೆಪಿಎಸ್‌ಸಿ ಸಂಸ್ಥೆ ಈಗ ಬೀದಿಯಲ್ಲಿ ಹರಾಜಿಗೆ ಬಂದಿದೆ. ಈ ಸಂಸ್ಥೆಯನ್ನ ಪರಿಶುದ್ಧ ಮಾಡಲು ಹೋಗಿ ಅಧ್ಯಕ್ಷರನ್ನ ತಂದರು. ನಾನು ಕಡಿಮೆ ಅವಧಿಯ ಸಿಎಂ ಆಗಿರಬಹುದು. ಆದರೆ ಕಾನೂನುಬಾಹಿರವಾಗಿ ಯಾವುದೇ ಸೂಚನೆ ಯಾರಿಗೂ ಕೊಟ್ಟಿಲ್ಲ. ನಾನು ಸಿಎಂ ಆಗಿದ್ದಾಗ ದಲಿತರನ್ನು ಕೆಪಿಎಸ್‌ಸಿ ಅಧ್ಯಕ್ಷರಾಗಿ ಮಾಡಿದ್ದೆ. ನನ್ನ ಸಂಬಂಧಿಕರನ್ನಾಗಲಿ, ಆಪ್ತರಿಗಾಗಲಿ ಅಧ್ಯಕ್ಷರನ್ನಾಗಿ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.




