*ಇಂದಿನ ಯುವಜನಾಂಗದಲ್ಲಿ ರಾಷ್ಟ್ರಪ್ರಜ್ಞೆ ಮೂಡಬೇಕು: ಡಾ. ಎಚ್.ಬಿ. ರಾಜಶೇಖರ*

ಲಿಂಗರಾಜ ಕಾಲೇಜಿನಲ್ಲಿ ‘ಹೊಸಗನ್ನಡ ಸಾಹಿತ್ಯದಲ್ಲಿ ರಾಷ್ಟ್ರೀಯ ಪ್ರಜ್ಞೆ’ ರಾಜ್ಯಮಟ್ಟದ ವಿಚಾರಸಂಕಿರಣ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶದಲ್ಲಿ ರಾಷ್ಟ್ರಾಭಿಮಾನ ದಟ್ಟವಾಗಿದ್ದ ಪರಿಣಾಮವಾಗಿಯೇ ಭಾರತೀಯರು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯವನ್ನು ಗಳಿಸಿದರು. ಅಕ್ಷರಾಭ್ಯಾಸವಿಲ್ಲದವರಲ್ಲಿಯೂ ದೇಶಪ್ರೇಮ ಮಡುಗಟ್ಟಿತ್ತು. ‘ದೇಶ ಮೊದಲು’ ಎಂಬ ಭಾವನೆ ಪ್ರತಿಯೊಬ್ಬರಲ್ಲಿಯೂ ಗಟ್ಟಿಯಾಗಿತ್ತು. ಆದರೆ ಇಂದು ದೇಶಾಭಿಮಾನವನ್ನು ಬೆಳೆಸಬೇಕಾದ ಸಂದರ್ಭದಲ್ಲಿ ಜನರನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿರುವುದು ವಿಷಾದನೀಯ ಎಂದು ಖ್ಯಾತ ವೈದ್ಯರಾದ ಡಾ. ಎಚ್.ಬಿ. ರಾಜಶೇಖರ ಹೇಳಿದರು.
ಲಿಂಗರಾಜ ಕಾಲೇಜಿನ ಕನ್ನಡ ವಿಭಾಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ‘ಹೊಸಗನ್ನಡ ಸಾಹಿತ್ಯದಲ್ಲಿ ರಾಷ್ಟ್ರೀಯ ಪ್ರಜ್ಞೆ’ ಒಂದು ದಿನದ ರಾಜ್ಯಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಜನಾಂಗ ದೇಶವನ್ನು ಪ್ರೀತಿಸಿ, ದೇಶದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ದುಡಿದಾಗ ಮಾತ್ರ ರಾಷ್ಟ್ರ ಬಲಿಷ್ಠವಾಗುತ್ತದೆ. ನಮ್ಮೊಳಗೆ ಸಂಘಟಿತ ಮನೋಭಾವ ಮತ್ತು ಸೌಹಾರ್ದತೆ ಇಲ್ಲದಿದ್ದರೆ ದೇಶ ದುರ್ಬಲವಾಗುತ್ತದೆ. ಎಡಪಂಥೀಯ–ಬಲಪಂಥೀಯ ಸಂಘರ್ಷಗಳನ್ನು ಬದಿಗಿಟ್ಟು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಸ್ವಾತಂತ್ರ್ಯಕ್ಕಾಗಿ ತಮ್ಮ ರಕ್ತವನ್ನೇ ಅರ್ಪಿಸಿದ ಅನೇಕ ಹೋರಾಟಗಾರರ ತ್ಯಾಗದ ಕಥೆಗಳು ಇಂದಿಗೂ ಸಾಹಿತ್ಯದ ಮೂಲಕ ನಮ್ಮ ಮುಂದಿವೆ. ಹೊಸಗನ್ನಡ ಸಾಹಿತ್ಯವು ಕೇವಲ ಮನರಂಜನೆಯ ಮಾಧ್ಯಮವಾಗಿರದೆ, ಸಮಾಜದ ಜಾಗೃತಿ, ರಾಷ್ಟ್ರೀಯ ಏಕತೆ, ನಾಡು-ನುಡಿ ಪ್ರೀತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಯುತ ಸಾಧನವಾಗಿದೆ. ಕುವೆಂಪು, ದ.ರಾ. ಬೇಂದ್ರೆ, ಡಿ.ಎಸ್. ಕರ್ಕಿ, ಎಸ್.ಡಿ. ಇಂಚಲ ಮೊದಲಾದ ಅನೇಕ ಸಾಹಿತಿಗಳು ತಮ್ಮ ಕಾವ್ಯ, ಸಾಹಿತ್ಯ ಮತ್ತು ಚಿಂತನೆಗಳ ಮೂಲಕ ಕನ್ನಡಿಗರಲ್ಲಿ ನಾಡು-ನುಡಿ ಹಾಗೂ ದೇಶಪ್ರೇಮದ ಭಾವನೆಯನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಇಂತಹ ಸಾಹಿತ್ಯವನ್ನು ಇಂದಿನ ಯುವಜನತೆ ಓದಿ, ಅದರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಮಾತನಾಡಿ, ಬಂಗಾಳಿ ಸಾಹಿತ್ಯವು ಭಾರತದ ಆಧುನಿಕ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ತೋರಿಸಿತು. ‘ಜನಗಣಮನ’ ಹಾಗೂ ‘ವಂದೇ ಮಾತರಂ’ನಂತಹ ರಾಷ್ಟ್ರೀಯ ಭಾವನೆ ಮೂಡಿಸುವ ಗೀತೆಗಳು ಬಂಗಾಳದ ಸಾಹಿತ್ಯ ಪರಂಪರೆಯಿಂದ ಬಂದವು. ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಿದ ಅನೇಕ ಕಾವ್ಯ, ಸಾಹಿತ್ಯ ಕೃತಿಗಳು ಸ್ವಾತಂತ್ರ್ಯ ಚಳವಳಿಗೆ ಪ್ರೇರಣೆಯಾದವು. ಅವುಗಳ ಪ್ರಭಾವ ಕನ್ನಡ ಸಾಹಿತ್ಯದ ಮೇಲೆಯೂ ಬೀರಿದೆ ಎಂದರು.
ಕನ್ನಡ ಸಾಹಿತ್ಯ ತನ್ನದೇ ಆದ ಶ್ರೀಮಂತ ಪರಂಪರೆ ಮತ್ತು ವೈವಿಧ್ಯಮಯ ಅಭಿವ್ಯಕ್ತಿಯಿಂದ ವಿಶ್ವಮಾನ್ಯತೆ ಪಡೆದಿದೆ. ಪಂಪನಿಂದ ಆರಂಭಗೊಂಡ ಕನ್ನಡ ಸಾಹಿತ್ಯ ಪರಂಪರೆ ಆಧುನಿಕ ಕಾಲದಲ್ಲಿ ಹೊಸಗನ್ನಡ ಸಾಹಿತ್ಯದ ಮೂಲಕ ಸಾಮಾಜಿಕ ಪರಿವರ್ತನೆ, ಸಮಾನತೆ, ಸ್ವಾತಂತ್ರ್ಯ, ರಾಷ್ಟ್ರಪ್ರೇಮ ಹಾಗೂ ಮಾನವೀಯತೆಯ ವಿಚಾರಗಳನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ನಮ್ಮ ಸಾಹಿತ್ಯವನ್ನು ನಾವು ಅರಿತು, ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕು. ಯುವಜನತೆಯಲ್ಲಿ ದೇಶಾಭಿಮಾನ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಮನೋಭಾವ ಬೆಳೆಸುವಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ಪಂಪನಿಂದ ಹಿಡಿದು ಆಧುನಿಕ ಕಾಲದವರೆಗೂ ಕನ್ನಡ ಸಾಹಿತ್ಯದಲ್ಲಿ ನಾಡು, ನುಡಿ, ನೆಲ ಮತ್ತು ದೇಶಪ್ರೇಮದ ಭಾವನೆ ನಿರಂತರವಾಗಿ ವ್ಯಕ್ತವಾಗಿದೆ. ಸಾಹಿತ್ಯವು ಕೇವಲ ಬರಹವಲ್ಲ; ಅದು ನಮ್ಮ ಅಸ್ಮಿತೆ, ಸಂಸ್ಕೃತಿ ಮತ್ತು ಸಾಮಾಜಿಕ ಚಿಂತನೆಯ ಪ್ರತಿಬಿಂಬವಾಗಿದೆ. ಹೊಸಗನ್ನಡ ಸಾಹಿತ್ಯವು ಕಾಲದ ಬದಲಾವಣೆಗಳಿಗೆ ಸ್ಪಂದಿಸುತ್ತಾ ರಾಷ್ಟ್ರೀಯತೆ, ಸಾಮಾಜಿಕ ನ್ಯಾಯ, ಸಮಾನತೆ, ಮಹಿಳಾ ಸಂವೇದನೆ ಹಾಗೂ ಸಾಮಾನ್ಯ ಜನರ ಆಶೋತ್ತರಗಳಿಗೆ ಧ್ವನಿಯಾಗಿದೆ. ಈ ಸಾಹಿತ್ಯ ಪರಂಪರೆಯನ್ನು ಯುವಜನತೆ ಅರಿತುಕೊಳ್ಳುವುದು ಅತ್ಯಂತ ಅಗತ್ಯ ಎಂದರು.
ಪ್ರಾಚಾರ್ಯ ಡಾ. ಎಚ್.ಎಸ್. ಮೇಲಿನಮನಿ, ಡಾ. ನಿರ್ಮಲ ಬಟ್ಟಲ, ಎಚ್.ಆರ್. ಹರೀಶ ಹಾಗೂ ಡಾ. ಸಾಹುಕಾರ ಕಾಂಬಳೆ ಮಾತನಾಡಿದರು.
ಡಾ. ಎಚ್.ಎಂ. ಚನ್ನಪ್ಪಗೋಳ ಸ್ವಾಗತಿಸಿದರು. ಡಾ. ವಿನಯ ನಂದಿಹಾಳ ವಂದಿಸಿದರು. ಅಕ್ಷಯ ಪಾಟೀಲ ಹಾಗೂ ಶಬರಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಡಾ. ಮಹೇಶ ಗುರನಗೌಡರ ಸೇರಿದಂತೆ ಕನ್ನಡ ಸಾಹಿತ್ಯಾಸಕ್ತರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




