*IVF ತಂತ್ರಜ್ಞಾನದ ಮೂಲಕ ಪಡೆದಿದ್ದ ಅವಳಿ ಮಕ್ಕಳನ್ನು ಕೊಂದ ತಾಯಿ*

ಪ್ರಗತಿವಾಹಿನಿ ಸುದ್ದಿ: IVF ತಂತ್ರಜ್ಞಾನದ ಮೂಲಕ ಮಕ್ಕಳನ್ನು ಪಡೆದಿದ್ದ ಮಹಿಳೆ ತನ್ನಿಬ್ಬರು ಅವಳಿ ಹೆಣ್ಣುಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ತಲಘಟ್ಟಪುರ ಠಾಣಾ ವ್ಯಾಪ್ತಿಯ ವಾಜರಹಳ್ಳಿಯಲ್ಲಿ ಅತ್ಯಂತ ದಾರುಣ ಘಟನೆಯೊಂದು ನಡೆದಿದೆ. 42 ವರ್ಷದ ಉಮಾದೇವಿ ಎಂಬಾಕೆ ಮಕ್ಕಳನ್ನು ಕೊಂದ ಆರೋಪಿ.
ಹೆರಿಗೆಯ ನಂತರ ಉಮಾದೇವಿ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು ಎಂದು ಹೇಳಲಾಗಿದೆ. ಬುಧವಾರ ಸಂಜೆ ಈ ಕೃತ್ಯ ಎಸಗಿದ್ದು, ಅದೇ ವೇಳೆಗೆ ಮನೆಗೆ ಬಂದ ಪತಿ, ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಪತ್ನಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮುಗ್ಧ ಮಕ್ಕಳಿಬ್ಬರು ಪ್ರಾಣ ಕಳೆದುಕೊಂಡಿದ್ದರು.
ಸದ್ಯ ಆರೋಪಿ ತಾಯಿಯನ್ನು ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ತಲಘಟ್ಟಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪತಿಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



