Belagavi NewsBelgaum NewsKannada NewsKarnataka News

*ಅಧರ್ಮದ ನಡುವೆ ಧರ್ಮದ ಉದಯವೇ ಶ್ರೀ ಕೃಷ್ಣನ ಆಗಮನ: ಡಾ. ಮಹೇಶ್ ವಾಘಣ್ಣವರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶ್ರೀ ಕೃಷ್ಣನ ಜನ್ಮವನ್ನು ಕೇವಲ ಒಂದು ಪೌರಾಣಿಕ ಘಟನೆ ಎಂದು ನೋಡುವುದಕ್ಕಿಂತ, ಅಧರ್ಮದ ನಡುವೆ ಧರ್ಮದ ಉದಯ ಎಂಬ ಅರ್ಥದಲ್ಲಿ ನೋಡುವುದು ಸೂಕ್ತ ಎಂದು ವೈದ್ಯರಾದ ಡಾ. ಮಹೇಶ್ ವಾಘಣ್ಣವರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ (ಸೆ.04) ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜರುಗಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Home add -Advt

ಮಥುರೆಯ ಕಾರಾಗೃಹದಲ್ಲಿ ಕಂಸನ ದೌರ್ಜನ್ಯ ಹೆಚ್ಚಾಗಿದ್ದ ಕತ್ತಲೆಯ ಕಾಲದಲ್ಲಿ ದೇವಕಿ ಮತ್ತು ವಸುದೇವರ ಮಗನಾಗಿ ಕೃಷ್ಣನ ಆಗಮನವಾಯಿತು. ಕೃಷ್ಣನ ಜನ್ಮವು ಬೆಳಕಿನ ಸಂಕೇತವಾಗಿದೆ. ಮಹಾಭಾರತದ ನಿರ್ಣಾಯಕ ಸಂದರ್ಭದಲ್ಲಿ ಅರ್ಜುನನಿಗೆ ಜೀವನದ ಸತ್ಯವನ್ನು ಬೋಧಿಸಿ ಮಾರ್ಗದರ್ಶಕನಾದವನು ಶ್ರೀ ಕೃಷ್ಣ. ಕೃಷ್ಣನ ಬಾಲ್ಯದಲ್ಲಿ ಮುಗ್ಧತೆ, ಸ್ನೇಹದ ಆತ್ಮೀಯತೆ, ರಾಜನೀತಿಯ ಪ್ರೌಢಿಮೆ ಹಾಗೂ ಜ್ಞಾನದ ಆಳವಿತ್ತು ಎಂದು ಹೇಳಿದರು.

ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ಕೃಷ್ಣ ನೀಡಿದ ಗೀತೋಪದೇಶ ಇಂದಿಗೂ ಪ್ರಸ್ತುತ. ಫಲದ ಬಗ್ಗೆ ಅತಿಯಾದ ಚಿಂತೆ ಮಾಡದೆ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂಬ ಸಂದೇಶ ಪ್ರತಿಯೊಬ್ಬರ ಬದುಕಿಗೂ ದಾರಿದೀಪ.

ಸ್ಪರ್ಧೆ, ಒತ್ತಡ, ನಿರಾಶೆ ಮತ್ತು ಗೊಂದಲಗಳಿಂದ ತುಂಬಿರುವ ಇಂದಿನ ಜೀವನದಲ್ಲಿ ಕೃಷ್ಣನ ಈ ಸಂದೇಶಕ್ಕೆ ಇನ್ನಷ್ಟು ಮಹತ್ವವಿದೆ. ನಮ್ಮೊಳಗಿನ ಅಹಂಕಾರವೆಂಬ ಕಂಸನನ್ನು ಸೋಲಿಸಿ, ಪ್ರೀತಿ, ಸತ್ಯ, ಧರ್ಮ ಮತ್ತು ಕರ್ತವ್ಯವೆಂಬ ಕೃಷ್ಣ ತತ್ವವನ್ನು ಬೆಳೆಸಿಕೊಳ್ಳಬೇಕು. ಮನಸ್ಸಿನಲ್ಲಿ ಸತ್ಯದ ಬೆಳಕು ಹುಟ್ಟುವ ಪ್ರತಿಯೊಂದು ಕ್ಷಣವೂ ಒಂದು ಜನ್ಮಾಷ್ಟಮಿಯೇ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಹಣಬರ ಯಾದವ ಸಂಘದ ಮಾಜಿ ಅಧ್ಯಕ್ಷ ಅರವಿಂದ ತೆನಗಿ, ಶ್ರೀ ಕೃಷ್ಣನ ಭಗವದ್ಗೀತೆಯು ಇಡೀ ಜೀವನಕ್ಕೆ ಮಾರ್ಗದರ್ಶನವಾಗಿದೆ. ಕ್ಷಣಾರ್ಧದಲ್ಲಿ ಯುದ್ಧವನ್ನು ಮುಗಿಸುವ ಶಕ್ತಿ ಇದ್ದರೂ ಕೃಷ್ಣನು ಸಾಮಾನ್ಯ ಸಾರಥಿಯಾಗಿ ಅರ್ಜುನನಿಗೆ ಉತ್ತಮ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದವನು. ಸಮಾಜವು ಒಗ್ಗಟ್ಟಿನಿಂದ ಬಾಳಬೇಕು ಹಾಗೂ ಯಾದವ ಸಮಾಜವು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಡಾ. ಸಂಜಯ ಶಿಂದಿಹಟ್ಟಿ ಅವರು ಬರೆದ ‘ಕಿತ್ತೂರು ಕಲಿ ಹಣಬರ ಹುಲಿ’ ಅಮಟೂರು ಬಾಳಪ್ಪ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಬಿ.ಎಲ್. ಪಾಟೀಲ, ಸಮಾಜದ ಮುಖಂಡರಾದ ಶಿವಲಿಂಗ ಪೂಜಾರಿ, ಸಾಹಿತಿ ಸಂಜಯ ಶಿರಹಟ್ಟಿ, ನಿವೃತ್ತ ಉಪ ತಹಶೀಲ್ದಾರ್ ಎನ್.ಎನ್. ಪಾಟೀಲ ಹಾಗೂ ಎಸ್.ಬಿ. ಪಾಟೀಲ ಸೇರಿದಂತೆ ಸಮಾಜದ ಗಣ್ಯರು ಉಪಸ್ಥಿತರಿದ್ದರು.

ಭವ್ಯ ಮೆರವಣಿಗೆ

ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸೆ.04 ರಂದು ಬೆಳಿಗ್ಗೆ 11 ಗಂಟೆಗೆ ಅಶೋಕ ವೃತ್ತದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಗೂ ಸಮಾಜದ ಹಿರಿಯರು ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಅಶೋಕ ವೃತ್ತದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ವಿವಿಧ ಕಲಾ ಮೇಳಗಳೊಂದಿಗೆ ಕುಮಾರ ಗಂಧರ್ವ ರಂಗಮಂದಿರವನ್ನು ತಲುಪಿತು.

Related Articles

Back to top button