
ಕೆಲಸ ಮಾಡುವವರಿಗೆ ಬಿಜೆಪಿಯಲ್ಲಿ ಬೆಲೆಯಿಲ್ಲ ಎಂದ ಮಾಜಿ ಶಾಸಕ ಕಾಂಗ್ರೆಸ್ ಸೇರಲು ನಿರ್ಧಾರ
ಪ್ರಗತಿವಾಹಿನಿ ಸುದ್ದಿ: ಬಿಜೆಪಿ ನಾಯಕ, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಬಿಜೆಪಿ ಧೋರಣೆಗಳಿಗೆ ಬೇಸತ್ತು ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.
ಬಿಜೆಪಿಗೆ ರಾಜೀನಾಮೆ ನೀಡಿರುವ ನೆ.ಲ.ನರೇಂದ್ರ ಬಾಬು ನಾಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸಮ್ಮುಖದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ನೆ.ಲ.ನರೇಂದ್ರ ಬಾಬು, ಬಿಜೆಪಿ ಅಪ್ಪ-ಮಕ್ಕಳ ಪಕ್ಷವಾಗಿದೆ. ಹತ್ತು ವರ್ಷಗಳಿಂದ ಬಿಜೆಪಿಗೆ ನನ್ನನ್ನು ಸಮರ್ಪಿಸಿಕೊಂಡಿದ್ದೆ. ಅದಕ್ಕೆ ಯಾವುದೇ ಬೆಲೆ ಸಿಗದೇ ಇದ್ದುದ್ದರಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ. ಅಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳಿಗೆ ನೆಲ ಇಲ್ಲ ಎಂದರು.
ನಾನು ಬಿಜೆಪಿಯ ಹಿಂದುಳಿದ ವರ್ಗ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದು, ಇದೀಗ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯನಾಗಿ ಮೂರು ಬಾರಿ ಮತ್ತು ಎರಡು ಬಾರಿ ಶಾಸಕನಾಗಿ 40 ವರ್ಷಗಳಿಂದ ಸಾರ್ವಜನಿಕರ ಬೆಂಬಲದಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ ಎಂದರು.
ರಾಜಾಜಿನಗರ ಮತ್ತು ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಮತ್ತು ನನ್ನ ಕಾರ್ಯಕರ್ತರನ್ನು ದೂರ ಮಾಡಿದರು. ನನ್ನ ವಿರುದ್ದ ಪಿತೂರಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಿಲ್ಲ, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಸುರೇಶ್ ಕುಮಾರ್, ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಗೋಪಾಲಯ್ಯರವರ ಪರ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇ ಎಂದು ತಿಳಿಸಿದರು.
ಬಿಜೆಪಿ ಅಪ್ಪ-ಮಕ್ಕಳ ಪಕ್ಷವಾಗಿದೆ. ಗೋಪಾಲಯ್ಯ ಸೇರಿದಂತೆ 17ಮಂದಿ ಶಾಸಕರು ಬಿಜೆಪಿ ಸೇರಿದಾಗ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನೀವು ಸಹಕಾರ ನೀಡಬೇಕೆಂದು ಅಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಆರೆಸ್ಸೆಸ್ ಮುಖಂಡ ಬಿ.ಎಲ್.ಸಂತೋಷ್ ತಮ್ಮನ್ನು ಮನವೊಲಿಸಿದರು.
ಪಕ್ಷಕ್ಕಾಗಿ ತ್ಯಾಗ ಮಾಡಿದ ತಮಗೆ ನಂತರ ಜವಾಬ್ದಾರಿ ನೀಡುವ ವಿಚಾರದಲ್ಲಿ ಬಿಜೆಪಿ ನಾಯಕರು ಜಾಣ ಮೌನ ವಹಿಸಿದ್ದಾರೆ. ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಮ್ಮ ಕಡೆ ನೋಡಲಿಲ್ಲ. ಕೆಲಸ ಮಾಡುವವರಿಗೆ ಬಿಜೆಪಿಯಲ್ಲಿ ಬೆಲೆಯಿಲ್ಲ. ಹಿಂಬಾಲಕರಿಗೆ ಮಾತ್ರ ಅವಕಾಶ. ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನಲ್ಲಿ ನನ್ನ ಶ್ರಮವಿದೆ. ನಿಗಮ, ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶ ಕೊಡಿ ಎಂಬ ಮನವಿಗೆ ಕಿವಿಗೊಡಲಿಲ್ಲ. ಕಾಂಗ್ರೆಸ್ ಪಕ್ಷ ನನಗೆ ಹೆಚ್ಚಿನ ಅವಕಾಶ ನೀಡಿತ್ತು. ಆದರೂ ಬಿಜೆಪಿ ಸೇರಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೀಗ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಉತ್ತಮ ಸರಕಾರವಿದ್ದು, ಬಿ.ಕೆ.ಹರಿಪ್ರಸಾದ್ ಸಾರಥ್ಯದಲ್ಲಿ ಪಕ್ಷ ಸಂಘಟನೆ ರಾಜ್ಯಾದ್ಯಂತ ಬಿರುಸಿನಿಂದ ಸಾಗುತ್ತಿದೆ. ಆದರೆ ಬಿಜೆಪಿಯಲ್ಲಿ ಆರೆಸ್ಸೆಸ್ ತೀರ್ಮಾನವೇ ಅಂತಿಮವಾಗಿದೆ. ನಿಷ್ಟಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ. ರಾಜ್ಯದ ಸಮಸ್ಯೆಗಳಿಗೆ ಬಿಜೆಪಿ ಸಂಸದರು ಸ್ಪಂದಿಸುವುದಿಲ್ಲ. ಹೀಗಾಗಿ ನನ್ನ ಮತ್ತು ಜೊತೆಯಲ್ಲಿ ಇರುವ ಸ್ನೇಹಿತರು, ಕಾರ್ಯಕರ್ತರ ಜೊತೆಯಲ್ಲಿ ನಾಳೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದು ಹೇಳಿದರು.



