
ಪ್ರಗತಿವಾಹಿನಿ ಸುದ್ದಿ: ನವದೆಹಲಿ: UPI ಮತ್ತು ರುಪೇ ಡೆಬಿಟ್ ಕಾರ್ಡ್ ಪಾವತಿದಾರರಿಗೆ ಕೇಂದ್ರ ಸರ್ಕಾರ ಕೆಲ ಸ್ಪಷ್ಟ ಮಾಹಿತಿಗಳ್ನನು ನೀಡಿದೆ. 2,000 ರೂ. ವರೆಗೆ ನಡೆಯುವ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ) ವಹಿವಾಟುಗಳಿಗೆ ಯಾವುದೇ ನೇರ ಅಥವಾ ಪರೋಕ್ಷ ಶುಲ್ಕ ವಿಧಿಸುವಂತಿಲ್ಲ ಎಂದು ತಿಳಿಸಿದೆ.
ಇದೇ ನಿಯಮ ರೂಪೇ ಡೆಬಿಟ್ ಕಾರ್ಡ್ ಮೂಲಕ ನಡೆಯುವ ಪಾವತಿಗಳಿಗೂ ಅನ್ವಯವಾಗಲಿದೆ. ರುಪೇ ಕಾರ್ಡ್ ಹೊಂದಿರುವ ಡೆಬಿಟ್ ಕಾರ್ಡ್ಗಳ ಮೂಲಕ ಮಾಡುವ 2,000 ರೂಪಾಯಿ ವರೆಗಿನ ಪಾವತಿಗಳಿಗೂ ಯಾವುದೇ ಶುಲ್ಕ ವಿಧಿಸುವಂತಿಲ್ಲ ಎಂದು ಸರ್ಕಾರದ ಗೆಜೆಟ್ ಅಧಿಸೂಚನೆ ತಿಳಿಸಿದೆ.
ಬ್ಯಾಂಕ್ಗಳು ಅಥವಾ ಪಾವತಿ ವ್ಯವಸ್ಥೆ ಒದಗಿಸುವ ಸಂಸ್ಥೆಗಳು ಇಂತಹ ವಹಿವಾಟುಗಳಿಗೆ ಗ್ರಾಹಕರಿಂದ ಯಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲ. ಕೇಂದ್ರ ಹಣಕಾಸು ಸಚಿವಾಲಯವು ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ (Payment and Settlement Systems Act) 2007ರ ತಿದ್ದುಪಡಿ ನಿಯಮಗಳ ಅಡಿಯಲ್ಲಿ ಈ ಅಧಿಸೂಚನೆ ಹೊರಡಿಸಿದೆ.
2,000 ರೂ.ವರೆಗೆ ಯುಪಿಐ ಮೂಲಕ ಹಣ ಪಾವತಿಸುವವರು ಮಾತ್ರವಲ್ಲದೆ, ಹಣ ಸ್ವೀಕರಿಸುವವರ ಮೇಲೂ ಯಾವುದೇ ನೇರ ಅಥವಾ ಪರೋಕ್ಷ ಶುಲ್ಕ ವಿಧಿಸಲು ಅವಕಾಶವಿಲ್ಲ. ರೂಪೇ ಡೆಬಿಟ್ ಕಾರ್ಡ್ ಪಾವತಿಗಳಿಗೂ ಇದೇ ರೀತಿಯ ಶುಲ್ಕ ವಿನಾಯಿತಿ ಮುಂದುವರಿಯಲಿದೆ.

