*BREAKING: ಹಿರಿಯ ನಟ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಭಾರತೀಯ ಚಿತ್ರರಂಗ, ಪ್ರಮುಖವಾಗಿ ಕನ್ನಡ ಚಿತ್ರರಂಗಕ್ಕೆ ಅನಂತ್ ನಾಗ್ ಅವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅನಂತ್ ನಾಗ್ ಅವರನ್ನು ಆಯ್ಕೆ ಮಾಡಿದೆ.
ಸೆಪ್ಟೆಂಬರ್ 22ರಂದು ಗುಜರಾತ್ ನ ಕೆವಾಡಿಯಲ್ಲಿ 72ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅನಂತ್ ನಾಗ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಕನ್ನಡ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ 1995ರ ಸಾಲಿನ (43ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ) ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ವರನಟ ಡಾ. ರಾಜ್‌ಕುಮಾರ್ ಅವರಿಗೆ ನೀಡಿ ಗೌರವಿಸಲಾಗಿತ್ತು. ಅವರು ಈ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಲ್ಲಿಂದ ಇಲ್ಲಿಯವರೆಗೆ ಕನ್ನಡದ ಬೇರೆ ಯಾವ ನಟರು ಕೂಡ ಈ ಪ್ರಶಸ್ತಿಗೆ ಭಾಜನರಾಗಿರಲಿಲ್ಲ. ಇದೀಗ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವಕ್ಕೆ ಅನಂತ್ ನಾಗ್ ಅವರನ್ನು ಆಯ್ಕೆ ಮಾಡಲಾಗಿದೆ.
ನಟ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ. ಇದು ಸಂತಸದ ವಿಷಯ. ಹತ್ತಾರು ವರ್ಷಗಳಿಂದ ತಮ್ಮ ಸಹಜ ಅಭಿನಯ, ಅದ್ಭುತ ವೈವಿಧ್ಯತೆ ಹಾಗೂ ಪ್ರತಿಭೆಯ ಮೂಲಕ ಅವರು ಭಾರತೀಯ ಚಿತ್ರರಂಗ, ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗದ ಮೇಲೆ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಅವರು ನಿರ್ವಹಿಸಿದ ಪ್ರತಿಯೊಂದು ಪಾತ್ರಕ್ಕೂ ಅಪರೂಪದ ಆಳ ಮತ್ತು ನೈಜತೆಯನ್ನು ತುಂಬಿದ್ದಾರೆ. ನಿಜಕ್ಕೂ, ಅತ್ಯಂತ ಶ್ರೇಷ್ಠ ಕಲಾವಿದರೊಬ್ಬರಿಗೆ ಸಂದಿರುವ ಈ ಗೌರವ ಸಂಪೂರ್ಣವಾಗಿ ಅರ್ಹವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.


