Kannada NewsKarnataka NewsLatestPolitics

*ಸಿಇಸಿ ಜ್ಞಾನೇಶ್ ಕುಮಾರ್‌ರನ್ನು ಬಂಧಿಸಿ, ಬಂಗಾಳದಲ್ಲಿ ಮರುಚುನಾವಣೆ ನಡೆಸಿ*: ಮಮತಾ ಬ್ಯಾನರ್ಜಿ ಆಗ್ರಹ

ಪ್ರಗತಿವಾಹಿನಿ ಸುದ್ದಿ: ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯನ್ನು ರದ್ದುಗೊಳಿಸಿ ಹಳೆಯ ಮತದಾರರ ಪಟ್ಟಿಯ ಆಧಾರದ ಮೇಲೆ ಮರುಚುನಾವಣೆ ನಡೆಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಬಂಧಿಸಿ ಅವರ ವಿರುದ್ಧ ಕ್ರಿಮಿನಲ್‌ ಕ್ರಮ ಕೈಗೊಳ್ಳಬೇಕು ಎಂದು ತೃಣಮೂಲ ಕಾಂಗ್ರೆಸ್‌ (TMC) ಮುಖ್ಯಸ್ಥೆ ಹಾಗೂ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. ಸೆಪ್ಟೆಂಬರ್‌ 23ರಂದು ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯದ ಕುರಿತು ಪ್ರಕಟವಾದ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಮಮತಾ ಬ್ಯಾನರ್ಜಿ, SIR ಮೂಲಕ ಪಶ್ಚಿಮ ಬಂಗಾಳದ ಮತದಾರರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದಿದ್ದಾರೆ. SIR ಆರಂಭಕ್ಕೂ ಮುನ್ನವೇ ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ಕೃತಕ ಬುದ್ಧಿಮತ್ತೆ (AI) ಬಳಸಲಾಗಿದೆ ಎಂದು ಆರೋಪಿಸಿದ ಅವರು, 58 ಲಕ್ಷ ಹೆಸರುಗಳನ್ನು ಆರಂಭದಲ್ಲಿ ತೆಗೆದುಹಾಕಲಾಗಿತ್ತು. ಬಳಿಕ 27 ಲಕ್ಷ ಹಾಗೂ ಮತ್ತೊಂದು ಹಂತದಲ್ಲಿ 7 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ. ತಮ್ಮ ಲೆಕ್ಕಾಚಾರದ ಪ್ರಕಾರ ಒಟ್ಟು 92 ಲಕ್ಷ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

SIR ಪ್ರಕ್ರಿಯೆಯನ್ನು ಪ್ರಶ್ನಿಸಿರುವ ಮಮತಾ ಬ್ಯಾನರ್ಜಿ, ಬಿಜೆಪಿ ಹಾಗೂ ಚುನಾವಣಾ ಆಯೋಗದ ನಡುವೆ ಹೊಂದಾಣಿಕೆ ಇದೆ. “ಬಿಜೆಪಿ ಮತ್ತು ಜ್ಞಾನೇಶ್ ಕುಮಾರ್ ಜಂಟಿ ಉದ್ಯಮದಂತೆ ಕಾರ್ಯನಿರ್ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.  ಜೊತೆಗೆ ಬಂಗಾಳದ ಚುನಾವಣೆಯನ್ನು ‘ದೋಚಲಾಗಿದೆ’ ಎಂದು ಹೇಳಿರುವ ಅವರು, ಹಳೆಯ ಮತದಾರರ ಪಟ್ಟಿಯನ್ನು ಮರುಸ್ಥಾಪಿಸಿ ಮತ್ತೊಮ್ಮೆ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದಾರೆ.

ಚುನಾವಣಾ ಆಯೋಗದೊಳಗೆ SIR ಸೇರಿದಂತೆ ಹಲವು ನಿರ್ಧಾರಗಳ ಕುರಿತು ಇಬ್ಬರು ಚುನಾವಣಾ ಆಯುಕ್ತರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವರದಿಯ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದಾರೆ. ವರದಿಯ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಕೆಲವು ನಿರ್ಧಾರಗಳು ಮತ್ತು ಆದೇಶಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು.

ಮಮತಾ ಬ್ಯಾನರ್ಜಿ, “ಜ್ಞಾನೇಶ್ ಕುಮಾರ್ ಅವರನ್ನು ಬಂಧಿಸಿ, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು” ಎಂದು ಆಗ್ರಹಿಸಿದ್ದು, ತಮ್ಮ ಪಕ್ಷ ಸೇರಿದಂತೆ ಪ್ರತಿಪಕ್ಷಗಳು ಈ ವಿಚಾರದಲ್ಲಿ ಒಟ್ಟಾಗಿ ಹೋರಾಡಲಿವೆ ಎಂದು ಹೇಳಿದ್ದಾರೆ. ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವವರೆಗೆ ದೇಶಾದ್ಯಂತ ಪ್ರತಿಭಟನೆ ನಡೆಸುವ ಬಗ್ಗೆಯೂ ಅವರು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ಮಮತಾ ಬ್ಯಾನರ್ಜಿ ಮಾಡಿರುವ ಆರೋಪಗಳಿಗೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸಮ್ಮಿಕ್ ಭಟ್ಟಾಚಾರ್ಯ ಅವರು ಜ್ಞಾನೇಶ್ ಕುಮಾರ್ ಅವರನ್ನು ಬೆಂಬಲಿಸಿದ್ದು, ಮಮತಾ ಅವರ ಆರೋಪಗಳನ್ನು ತಳ್ಳಿಹಾಕಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ SIR ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ವಿಚಾರವಾಗಿ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ನಡುವಿನ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

Related Articles

Back to top button