Belagavi NewsBelgaum NewsKarnataka NewsLatest

*ವಿಟಿಯು ಖಜಾನೆಯಲ್ಲಿ ಪಾಲು ಕೇಳಿದ ಸರ್ಕಾರ: ಸರ್ಕಾರದ ಪತ್ರಕ್ಕೆ ‘ನೋ’ ಎಂದು ಉತ್ತರಿಸಿದ ಆಡಳಿತ ಮಂಡಳಿ*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಸುದೀರ್ಘ ಕಾನೂನು ಹೋರಾಟದ ಬಳಿಕ ಆದಾಯ ತೆರಿಗೆ ಇಲಾಖೆಯಿಂದ ಮರಳಿ ಪಡೆದಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ₹610 ಕೋಟಿ ನಿಧಿ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. 

ವಿಟಿಯು ಖಜಾನೆಗೆ ₹610 ಕೋಟಿ ಜಮೆಯಾಗುತ್ತಿದ್ದಂತೆ, ಅದರಲ್ಲಿ ₹250 ಕೋಟಿ ನೀಡುವಂತೆ ರಾಜ್ಯ ಸರ್ಕಾರವೇ ಪತ್ರ ಬರೆದಿದೆ. ಬೆಂಗಳೂರಿನ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್‌ (UVCE) ಅಭಿವೃದ್ಧಿ ಕಾಮಗಾರಿಗಳಿಗೆ ₹250 ಕೋಟಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಕುಲಪತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ಸ್ವಾಮ್ಯದಲ್ಲಿರುವ UVCE ಅಭಿವೃದ್ಧಿಗೆ ಸರ್ಕಾರದಿಂದಲೇ ಅನುದಾನ ನೀಡಬೇಕಿರುವ ಸಂದರ್ಭದಲ್ಲಿ, ವಿಟಿಯು ತನ್ನ ಖಜಾನೆಯಲ್ಲಿರುವ ಹಣದಿಂದಲೇ ₹250 ಕೋಟಿ ನೀಡುವಂತೆ ಕೇಳಿರುವುದು ಇದೀಗ ಚರ್ಚೆಯ ಕೇಂದ್ರಬಿಂದುವಾಗಿದೆ.

ಹಣ ಬಂದ ತಕ್ಷಣವೇ ₹250 ಕೋಟಿಗೆ ಬೇಡಿಕೆ!

ಸುಮಾರು 14 ವರ್ಷಗಳ ಕಾನೂನು ಹೋರಾಟದ ಬಳಿಕ ವಿಟಿಯು ತನ್ನ ನಿಧಿಯನ್ನು ಮರಳಿ ಪಡೆದಿದೆ. ಹಣ ಮರಳಿದ ಬೆನ್ನಲ್ಲೇ ಸರ್ಕಾರದಿಂದ ₹250 ಕೋಟಿ ಬೇಡಿಕೆ ಬಂದಿರುವುದು ಗಮನ ಸೆಳೆದಿದೆ. ಸರ್ಕಾರದ ಮನವಿಯನ್ನು ವಿಟಿಯು ಆಡಳಿತ ಮಂಡಳಿ ಒಪ್ಪಿಕೊಂಡಿಲ್ಲ. ವಿಶ್ವವಿದ್ಯಾಲಯದ ಮುಂದಿನ ಆರ್ಥಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಿಧಿಯನ್ನು ಸಂರಕ್ಷಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕುಲಪತಿ ಪ್ರೊ. ವಿದ್ಯಾಶಂಕರ್ ಸ್ಪಷ್ಟಪಡಿಸಿದ್ದಾರೆ.

₹500 ಕೋಟಿ ಫಿಕ್ಸ್‌ಡ್ ಡೆಪಾಸಿಟ್‌, ಬಡ್ಡಿಯಿಂದ ಸಿಬ್ಬಂದಿಗೆ ವೇತನ?

ವಿಟಿಯು ಪಡೆದಿರುವ ₹610 ಕೋಟಿಯಲ್ಲಿ ಸುಮಾರು ₹500 ಕೋಟಿಯನ್ನು ದೀರ್ಘಾವಧಿಯ ನಿಶ್ಚಿತ ಠೇವಣಿಯಲ್ಲಿ ಇರಿಸುವ ಯೋಜನೆ ರೂಪಿಸಲಾಗಿದೆ.

ಠೇವಣಿಯಿಂದ ಬರುವ ಬಡ್ಡಿ ಆದಾಯವನ್ನು ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿ ವೇತನ ಸೇರಿದಂತೆ ಅಗತ್ಯ ವೆಚ್ಚಗಳಿಗೆ ಬಳಸುವ ಉದ್ದೇಶವಿದೆ. ಸರ್ಕಾರದಿಂದ ಅನುದಾನ ದೊರೆಯದ ಸಂದರ್ಭದಲ್ಲೂ ವಿಟಿಯು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಕುಲಪತಿ ತಿಳಿಸಿದ್ದಾರೆ.

₹610 ಕೋಟಿಯ ಹಿಂದೆ 14 ವರ್ಷಗಳ ಹೋರಾಟ

ವಿಟಿಯು ಖಜಾನೆಯಲ್ಲಿರುವ ₹610 ಕೋಟಿ ಸಾಮಾನ್ಯವಾಗಿ ದೊರೆತ ಹಣವಲ್ಲ. ಸುಮಾರು 14 ವರ್ಷಗಳ ಹಿಂದೆ ಆದಾಯ ತೆರಿಗೆ ಇಲಾಖೆಯು ವಿಟಿಯು ವಿರುದ್ಧ ತೆರಿಗೆ ಸಂಬಂಧಿತ ಕ್ರಮ ಕೈಗೊಂಡು ದೊಡ್ಡ ಮೊತ್ತದ ಹಣವನ್ನು ಜಪ್ತಿ ಮಾಡಿತ್ತು.

ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ 12-ಎ ಅರ್ಜಿ ಸಲ್ಲಿಸದಿರುವುದನ್ನು ಆಧರಿಸಿ ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಂಡಿತ್ತು ಎಂದು ತಿಳಿಸಲಾಗಿದೆ. ಬಳಿಕ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಕಾನೂನು ಹೋರಾಟ ನಡೆಸಿದ ವಿಟಿಯು, ಬಡ್ಡಿ ಸಹಿತ ₹610 ಕೋಟಿ ಹಣವನ್ನು ಮರಳಿ ಪಡೆದಿದೆ ಎಂದು ಪ್ರೊ. ವಿದ್ಯಾಶಂಕರ್ ತಿಳಿಸಿದ್ದಾರೆ.

ಇನ್ನೂ ಸುಮಾರು ₹90 ಕೋಟಿ ಹಣ ಆದಾಯ ತೆರಿಗೆ ಇಲಾಖೆಯಿಂದ ವಿಟಿಯುಗೆ ಬರಬೇಕಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಸರ್ಕಾರ ಅನುದಾನ ನೀಡಬೇಕು; ವಿಟಿಯು ನಿಧಿ ಉಳಿಯಬೇಕು’

ವಿಟಿಯುಗೆ ಸೇರಿದ ನಿಧಿಯನ್ನು ವಿಶ್ವವಿದ್ಯಾಲಯದ ಭವಿಷ್ಯದ ಆರ್ಥಿಕ ಭದ್ರತೆಗಾಗಿ ಬಳಸಿಕೊಳ್ಳುವ ಉದ್ದೇಶವಿದೆ. ಸಿಬ್ಬಂದಿ ವೇತನ ಸೇರಿದಂತೆ ಮುಂದಿನ ವರ್ಷಗಳ ಆರ್ಥಿಕ ಹೊಣೆಗಾರಿಕೆಗಳನ್ನು ನಿರ್ವಹಿಸಲು ನಿಧಿಯನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಕುಲಪತಿ ಹೇಳಿದ್ದಾರೆ.

ಹೀಗಾಗಿ, ಒಂದೆಡೆ ಸರ್ಕಾರದಿಂದ ₹250 ಕೋಟಿ ಬೇಡಿಕೆ, ಮತ್ತೊಂದೆಡೆ ವಿಟಿಯು ಆಡಳಿತ ಮಂಡಳಿಯಿಂದ ನಿರಾಕರಣೆ ₹610 ಕೋಟಿ ನಿಧಿಯ ವಿಚಾರ ಇದೀಗ ರಾಜ್ಯದ ಶಿಕ್ಷಣ ವಲಯದಲ್ಲಿ ಕುತೂಹಲ ಮೂಡಿಸಿದೆ.

Related Articles

Back to top button