*ಯಶವಂತರಾಯಗೌಡ ರಾಜೀನಾಮೆ ಬೆನ್ನಲ್ಲೇ ಇಂಡಿ ಸೇರಿ 29 ತಾಲೂಕುಗಳು ಬರಪಟ್ಟಿಗೆ ಸೇರ್ಪಡೆ*

ಪ್ರಗತಿವಾಹಿನಿ: ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಕೈಬಿಟ್ಟಿದ್ದಕ್ಕೆ ಅಸಮಾಧಾನಗೊಂಡು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇಂಡಿ ತಾಲೂಕನ್ನು ಸೇರಿದಂತೆ ಒಟ್ಟು 29 ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸದಿರುವುದಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ್ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರು. ತಮ್ಮ ಮನವಿಗೆ ಹಾಗೂ ಕ್ಷೇತ್ರದ ಜನರ ಭಾವನೆಗಳಿಗೆ ಬೆಲೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಅವರು ಬುಧವಾರ ವಿಧಾನಸಭೆ ಸ್ಪೀಕರ್ ಅವರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಅವರ ರಾಜೀನಾಮೆಯನ್ನು ಸ್ಪೀಕರ್ ಇನ್ನೂ ಅಂಗೀಕರಿಸಿಲ್ಲ.
ಶಾಸಕರ ರಾಜೀನಾಮೆ ವಿಚಾರ ವಿಧಾನಸಭೆಯಲ್ಲೂ ಚರ್ಚೆಗೆ ಬಂದಿತ್ತು. ಇದರ ಬೆನ್ನಲ್ಲೇ ಸ್ಥಳ ಸತ್ಯಶೋಧನಾ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರ 29 ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. ಈ ಪಟ್ಟಿಯಲ್ಲಿ ಇಂಡಿ ಹಾಗೂ ಚಡಚಣ ತಾಲೂಕುಗಳೂ ಸೇರಿವೆ.
ಸರ್ಕಾರದ ಹೊಸ ಅಧಿಸೂಚನೆಯ ಪ್ರಕಾರ ಔರಾದ್, ಗೋಕಾಕ್, ರಾಮದುರ್ಗ, ಸವದತ್ತಿ, ಕಾಗವಾಡ, ಇಂಡಿ, ಚಡಚಣ, ಕಲಘಟಗಿ, ಕುಂದಗೋಳ, ಅಳ್ನಾವರ, ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ, ಸೊರಬ, ತೀರ್ಥಹಳ್ಳಿ, ಚಿಕ್ಕಮಗಳೂರು, ಕಳಸ, ಮಡಿಕೇರಿ, ಕುಶಾಲನಗರ, ಬೆಳ್ತಂಗಡಿ, ಬಂಟ್ವಾಳ, ಉಳ್ಳಾಲ, ಉಡುಪಿ, ಬೈಂದೂರು, ಅಂಕೋಲಾ, ಭಟ್ಕಳ, ಹಳಿಯಾಳ ಹಾಗೂ ಶಿರಸಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲಾಗಿದೆ.
ಇಂಡಿ ತಾಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿರುವುದರಿಂದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ರಾಜೀನಾಮೆ ನಿರ್ಧಾರವೂ ಇದೀಗ ಮತ್ತಷ್ಟು ಗಮನ ಸೆಳೆದಿದೆ. ರಾಜೀನಾಮೆ ಕುರಿತು ಅಂತಿಮ ನಿರ್ಧಾರವನ್ನು ವಿಧಾನಸಭೆ ಸ್ಪೀಕರ್ ಕೈಗೊಳ್ಳಬೇಕಿದೆ.


