
ಆಸ್ಪತ್ರೆಯ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿಗಳಿಗೆ ತರಾಟೆ
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ವೇಳೆ ಆಸ್ಪತ್ರೆಯಲ್ಲಿ ಕಂಡುಬಂದ ತೀವ್ರ ನಿರ್ಲಕ್ಷ್ಯ ಹಾಗೂ ಅವ್ಯವಸ್ಥೆಯನ್ನು ಕಂಡು ಉಪಲೋಕಾಯುಕ್ತರು ವೈದ್ಯಾಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಆಸ್ಪತ್ರೆಯ ಆಡಳಿತ ಮಂಡಳಿ, ವೈದ್ಯಕೀಯ ಸೇವೆಗಳು ಹಾಗೂ ರೋಗಿಗಳಿಗೆ ಕಲ್ಪಿಸಲಾಗಿರುವ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದ ವೈದ್ಯರು ಹಾಗೂ ನಿರ್ಲಕ್ಷ್ಯ ತೋರಿದ ಸಿಬ್ಬಂದಿಗಳ ವಿರುದ್ಧ ಕಿಡಿಕಾರಿದರು.
ಆಸ್ಪತ್ರೆಯಲ್ಲಿನ ಔಷಧ ಮಳಿಗೆಗಳು, ಪುರುಷರು, ಮಹಿಳೆಯರು ಮತ್ತು ವಿಕಲಚೇತನರಿಗಾಗಿ ಇರುವ ಪ್ರತ್ಯೇಕ ಕೌಂಟರ್ಗಳು ಹಾಗೂ ಸಾರ್ವಜನಿಕ ಸೌಲಭ್ಯಗಳ ಸ್ಥಿತಿಗತಿಗಳನ್ನು ಅವರು ಹತ್ತಿರದಿಂದ ವೀಕ್ಷಿಸಿದರು. ಒಂದೇ ಕಡೆ ಹಲವು ಫಲಕಗಳನ್ನು ಅಳವಡಿಸಿ ಗೊಂದಲ ಮೂಡಿಸಿರುವುದರ ಕುರಿತು ಪ್ರಶ್ನಿಸಿದರು.
ಇದೇ ವೇಳೆ ಚಿಕ್ಕೋಡಿ ಪುರಸಭೆ ಕಚೇರಿಗೂ ಭೇಟಿ ನೀಡಿದ ಉಪಲೋಕಾಯುಕ್ತರು, ಅಧಿಕಾರಿಗಳ ಫೋನ್ಪೇ ಖಾತೆಗಳನ್ನು ತಪಾಸಣೆ ನಡೆಸಿ ಸಂಬಳಕ್ಕಿಂತ ಹೆಚ್ಚಿನ ಹಣ ಇರುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು.




