
ಮದ್ಯ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಸಂಭವಿಸಿದ ಘಟನೆ
ಪ್ರಗತಿವಾಹಿನಿ ಸುದ್ದಿ: ಕೆಲ ದಿನಗಳ ಹಿಂದೆ ಮಧ್ಯಪ್ರದೇಶದಲ್ಲಿ ಕಳ್ಳಭಟ್ಟಿ ಸೇವಿಸಿ ಹಲವರು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಆ ಘಟನೆ ಮಾಸುವ ಮುನ್ನವೇ ಅಂತದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಕಳ್ಳಭಟ್ಟಿ ಸಾರಾಯಿ ಸೇವಿಸಿ 19 ಜನರು ಮೃತಪಟ್ಟಿರುವ ಘಟನೆ ದಾರುಣ ಘಟನೆ ವರದಿಯಾಗಿದೆ.
ನಾಗಾಲ್ಯಾಂಡ್‌ನ ಮೊಕೊಕ್ಚುಂಗ್ ಜಿಲ್ಲೆಯಲ್ಲಿ ಹಾಗೂ ಟುಯೆನ್‌ಸಾಂಗ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಕಳೆದ ಎರಡು ದಿನಗಳಲ್ಲಿ ಕಳ್ಳಭಟ್ಟಿ ಸೇವನೆಯ ಬಳಿಕ ಮೊಕೊಕ್ಚುಂಗ್ ಜಿಲ್ಲೆಯಲ್ಲಿ 8 ಮಂದಿ ಹಾಗೂ ಟುಯೆನ್‌ಸಾಂಗ್ ಜಿಲ್ಲೆಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬೆನ್ನಲ್ಲೇ ಮದ್ಯದ ಮೂಲ ಮತ್ತು ಪೂರೈಕೆ ಜಾಲವನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದಾರೆ. ತನಿಖೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಐ.ಬಂಗ್ಲಾಂಗ್ ಚಾಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಕಲಬೆರಕೆಯ ಮದ್ಯ ಎಲ್ಲಿಂದ ಪೂರೈಕೆಯಾಗುತ್ತಿತ್ತು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವೆಸುಪ್ರಾ ಕೆಜೊ ಹೇಳಿದ್ದಾರೆ.
ಮೃತರ ಸಾವಿಗೆ ನಿಖರ ಕಾರಣ ತಿಳಿಯಲು ಮದ್ಯದ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಗುವಾಹಟಿಗೆ ಕಳುಹಿಸಲಾಗಿದೆ. ತನಿಖೆಯಲ್ಲಿ ಕೆಲವು ಸುಳಿವುಗಳು ಸಿಕ್ಕಿವೆ. ಆದರೆ ಈ ಹಂತದಲ್ಲಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವುದು ಸೂಕ್ತವಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವುಗಳ ಬಳಿಕ ಪೊಲೀಸರು ಹಲವು ಕಡೆ ದಾಳಿ ನಡೆಸಿದ್ದಾರೆ. ಈ ವೇಳೆ 19 ಮಂದಿಯನ್ನು ಬಂಧಿಸಲಾಗಿದ್ದು, ಸುಮಾರು 3,000 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಗಾಲ್ಯಾಂಡ್‌ನಲ್ಲಿ 1990ರಿಂದಲೇ ಮದ್ಯ ನಿಷೇಧ ಕಾನೂನು ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ಪೂರೈಕೆಯಾಗುತ್ತಿರುವ ಮದ್ಯದ ವಿರುದ್ಧ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಈ ನಡುವೆ ಗುರುತು ಇಲ್ಲದ, ಲೇಬಲ್ ಇಲ್ಲದ ಅಥವಾ ಅಕ್ರಮವಾಗಿ ಮಾರಾಟವಾಗುತ್ತಿರುವ ಮದ್ಯ ಸೇವಿಸದಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




