*ಅಕ್ರಮ ಸಂಬಂಧದ ಹಿನ್ನೆಲೆ ಕೊಲೆ: ಮಹಿಳೆ ಸೇರಿ ಇಬ್ಬರು ಆರೋಪಿಗಳ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಕ್ರಮ ಸಂಬಂಧದ ವಿಚಾರದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿಸಿದ ಆರೋಪದ ಮೇಲೆ ಮಹಿಳೆ ಹಾಗೂ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 21ರಂದು ರಾತ್ರಿ ಬಳ್ಳಿಗೇರಿ ಗ್ರಾಮದಲ್ಲಿ ರಣವೀರ ಆನಂದಸಿಂಗ್ ರಜಪೂತ ಎಂಬಾತನನ್ನು ಕುತ್ತಿಗೆ ಹಿಚುಕಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಸೆಪ್ಟೆಂಬರ್ 22ರಂದು ಮೃತನ ಸಹೋದರ ನಾರಾಯಣ ದತ್ತಾಸಿಂಗ ರಜಪೂತ ನೀಡಿದ ದೂರಿನ ಮೇರೆಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ವೇಳೆ ಮೃತ ರಣವೀರನ ಮೇಲೆ ಶ್ರೀದೇವಿ ಹಿಂದೂಸಿಂಗ್ ರಜಪೂತ ಎಂಬ ಮಹಿಳೆ ಸಂಚು ರೂಪಿಸಿದ್ದಾಳೆ ಎಂಬ ಅನುಮಾನ ಪೊಲೀಸರಿಗೆ ವ್ಯಕ್ತವಾಗಿತ್ತು. ವಿಚಾರಣೆ ನಡೆಸಿದಾಗ, ಮೃತ ರಣವೀರ ತನಗೆ ಲೈಂಗಿಕ ಉದ್ದೇಶದಿಂದ ಕಿರುಕುಳ ನೀಡುತ್ತಿದ್ದನೆಂದು ಶ್ರೀದೇವಿ ಪೊಲೀಸರಿಗೆ ತಿಳಿಸಿದ್ದಾಳೆ ಎನ್ನಲಾಗಿದೆ.
ತನ್ನ ಹಳೆಯ ಶಾಲಾ ಗೆಳೆಯ ಬೈರು ಶ್ರೀಮಂತ ಪವಾರನಿಗೆ ಈ ವಿಚಾರ ತಿಳಿಸಿದ್ದ ಶ್ರೀದೇವಿ, ಸುಮಾರು 15 ದಿನಗಳ ಹಿಂದೆಯೇ ಆತನನ್ನು ಬಳ್ಳಿಗೇರಿಗೆ ಕರೆಸಿ ರಣವೀರನ ಮನೆ ತೋರಿಸಿದ್ದಳು ಎನ್ನಲಾಗಿದೆ. ಘಟನೆ ನಡೆದ ದಿನ ರಣವೀರ ಮನೆಯಲ್ಲಿ ಒಬ್ಬನೇ ಇರುವ ವಿಚಾರವನ್ನೂ ಬೈರು ಪವಾರನಿಗೆ ತಿಳಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 21ರಂದು ರಾತ್ರಿ ಸುಮಾರು 7.30ಕ್ಕೆ ಬೈರು ಪವಾರ ಬೈಕ್ನಲ್ಲಿ ಬಳ್ಳಿಗೇರಿಗೆ ಆಗಮಿಸಿ, ತನ್ನ ಬೈಕ್ ಸ್ಟಾರ್ಟ್ ಆಗುತ್ತಿಲ್ಲ ಎಂದು ಹೇಳಿ ರಣವೀರನನ್ನು ಮನೆಯಿಂದ ಹೊರಗೆ ಕರೆಸಿಕೊಂಡಿದ್ದಾನೆ. ಬಳಿಕ ಆತನ ಕುತ್ತಿಗೆ ಹಿಚುಕಿ ಕೊಲೆ ಮಾಡಿ, ಈ ವಿಚಾರವನ್ನು ಶ್ರೀದೇವಿಗೆ ಫೋನ್ ಮೂಲಕ ತಿಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಶ್ರೀದೇವಿಯನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾಗಿದ್ದ ಆರೋಪಿ ಬೈರು ಪವಾರನ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಗುಪ್ತ ಮಾಹಿತಿ ಆಧರಿಸಿ ಪೊಲೀಸರು ಇದೀಗ ಆತನನ್ನೂ ಪತ್ತೆಹಚ್ಚಿ ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರ್ಗಿ ಹಾಗೂ ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆದಿದೆ. ಅಥಣಿ ವೃತ್ತದ ಸಿಪಿಐ ಸಂತೋಷ ಡಿ. ಹಳ್ಳೂರ ಹಾಗೂ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




