*ಅರ್ಧ ದಾರಿಯಲ್ಲಿ ಕೆಟ್ಟು ನಿಂತ ಸ್ಲೀಪರ್ ಬಸ್: ವಿದ್ಯಾರ್ಥಿನಿಗೆ 33,700 ರೂ. ಪರಿಹಾರ ನೀಡುವಂತೆ ಆದೇಶ ನೀಡಿದ DCDRC*

ಪ್ರಗತಿವಾಹಿನಿ ಸುದ್ದಿ: ಕೆ.ಕೆ.ಆರ್.ಟಿ.ಸಿ ಸ್ಲೀಪರ್ ಬಸ್ ವೊಂದು ಮಾರ್ಗಮಧ್ಯೆ ಕೆಟ್ಟು ನಿಂತ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಉಂಟಾದ ಸೇವಾ ಕೊರತೆ, ವಿದ್ಯಾರ್ಥಿನಿಗಾದ ತೊಂದರೆಗೆ ಪರಿಹಾರವಾಗಿ 33,700 ರೂ. ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (District Consumer Disputes Redressal Commission) ಕೆ.ಕೆ.ಆರ್.ಟಿ.ಸಿಗೆ ಆದೇಶ ನೀಡಿದೆ.
ಬಸ್ ಕೆಟ್ಟು ನಿಂತರೂ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಉಂಟಾದ ತೊಂದರೆ ಬಗ್ಗೆ ಉಲ್ಲೇಖಿಸಿ ವಿದ್ಯಾರ್ಥಿನಿಯೋರ್ವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಡಿ ಆರ್ ಸಿ ಈ ನಿರ್ದೇಶನ ನೀಡಿದೆ.
2025ರ ನವೆಂಬರ್ 16ರಂದು ಬೀದರ್ನ ವಿದ್ಯಾರ್ಥಿನಿ ತೇಜಸ್ವಿನಿ ಬಸವರಾಜ ಅವರು ಬೀದರ್ನಿಂದ ದಾವಣಗೆರೆಗೆ ಪ್ರಯಾಣಿಸಲು ಕೆ.ಕೆ.ಆರ್.ಟಿ.ಸಿಯ ಸ್ಲೀಪರ್ ಬಸ್ನಲ್ಲಿ ಸೀಟ್ ಕಾಯ್ದಿರಿಸಿದ್ದರು. ಈ ಬಸ್ ಸಂಜೆ 6 ಗಂಟೆಗೆ ಬೀದರ್ನಿಂದ ಹೊರಟು ಮರುದಿನ ಬೆಳಗ್ಗೆ 6 ಗಂಟೆಗೆ ದಾವಣಗೆರೆ ತಲುಪಬೇಕಿತ್ತು. ನಿಗದಿತ ಸಮಯಕ್ಕೆ ಬಸ್ ಬೀದರ್ನಿಂದ ಹೊರಟರೂ, ಹುಮನಾಬಾದ್ ಸಮೀಪದಲ್ಲಿ ಬಸ್ ಕೆಟ್ಟು ನಿಂತಿತ್ತು. ಬಳಿಕ ಬಸ್ ಅನ್ನು ಕಲಬುರಗಿ ಡಿಪೋಗೆ ಕೊಂಡೊಯ್ಯಲಾಯಿತು. ಆದರೆ, ದುರಸ್ತಿ ಮಾಡುವ ಪ್ರಯತ್ನಗಳು ವಿಫಲವಾದವು.
ಮರುದಿನ ಬೆಳಗ್ಗೆ ಪರೀಕ್ಷೆ ಇರುವುದಾಗಿ ತಿಳಿಸಿದ ತೇಜಸ್ವಿನಿ, ಪರ್ಯಾಯ ಪ್ರಯಾಣದ ವ್ಯವಸ್ಥೆ ಮಾಡುವಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಕೋರಿದ್ದರು. ಆದರೆ, ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡದೇ ನಿರ್ಲಕ್ಷ್ಯ ಮಾಡಿದ್ದರು. ಇದರಿಂದ ನೊಂದ ವಿದ್ಯಾರ್ಥಿನಿ ತೇಜಸ್ವಿನಿ ಕಲಬುರಗಿಯಿಂದ ದಾವಣಗೆರೆಗೆ ತೆರಳಲು 18,700 ರೂ. ಪಾವತಿಸಿ ಕಾರನ್ನು ಬಾಡಿಗೆಗೆ ಪಡೆದು ಪ್ರಯಾಣ ಮಾಡಿದ್ದರು.
ಹೀಗಾಗಿ ತೇಜಸ್ವಿನಿ ಅವರು ಗ್ರಾಹಕರ ಆಯೋಗವನ್ನು ಸಂಪರ್ಕಿಸಿ, ಕ್ಯಾಬ್ಗಾಗಿ ಖರ್ಚು ಮಾಡಿದ ಹಣ ಹಾಗೂ ಬಸ್ ಟಿಕೆಟ್ ದರವನ್ನು ಮರುಪಾವತಿಸುವಂತೆ ಮತ್ತು ತಮಗಾದ ಮಾನಸಿಕ ವೇದನೆಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದರು.
ಆಯೋಗದ ಅಧ್ಯಕ್ಷೆ ಮಾಲತಿ ಗುರಣ್ಣ ಮತ್ತು ಸದಸ್ಯ ಎಂ. ಲೋಕೇಶ್ ಅವರನ್ನೊಳಗೊಂಡ ಪೀಠವು, 18,700 ಮೊತ್ತವನ್ನು 2026ರ ಜನವರಿ 3ರಿಂದ ಪಾವತಿ ಮಾಡುವ ದಿನಾಂಕದವರೆಗೆ ಶೇ.6ರ ಬಡ್ಡಿಯೊಂದಿಗೆ ತೇಜಸ್ವಿನಿಗೆ ಮರುಪಾವತಿಸುವಂತೆ ಕೆ.ಕೆ.ಆರ್.ಟಿ.ಸಿಗೆ ಆದೇಶಿಸಿದೆ. ಇದರ ಜೊತೆಗೆ, ಮಾನಸಿಕ ವೇದನೆ ಹಾಗೂ ಸೇವಾ ಕೊರತೆಯ ಪರಿಹಾರವಾಗಿ 10,000 ರೂ. ಮತ್ತು ವ್ಯಾಜ್ಯ ವೆಚ್ಚವಾಗಿ 5,000 ರೂ. ಪಾವತಿಸುವಂತೆ ಕೆ.ಕೆ.ಆರ್.ಟಿ.ಸಿಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಬೆಂಗಳೂರು ಸಾರಿಗೆ ಸಂಸ್ಥೆಯ ಸೇವಾ ವ್ಯವಸ್ಥಾಪಕರಿಗೆ ಆಯೋಗ ನಿರ್ದೇಶಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




