Belagavi NewsBelgaum NewsKannada NewsKarnataka NewsPolitics

*ಎಸ್ಐಆರ್ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿರುವುದು ಬಿಜೆಪಿ: ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯಲ್ಲಿ ಎಸ್ಐಆರ್‌ (SIR) ವಿಚಾರವಾಗಿ ಸದ್ಯ ಯಾವುದೇ ಗೊಂದಲ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಖಾನಾಪುರ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಾಗಿದೆ. ಉದ್ದೇಶಪೂರ್ವಕವಾಗಿ ತಪ್ಪು ಅರ್ಜಿ ಸಲ್ಲಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಅರ್ಜಿ ಸಲ್ಲಿಸಿದ ಬಳಿಕ ಏಳು ದಿನಗಳೊಳಗೆ ನೋಟಿಸ್ ನೀಡಲಾಗುತ್ತದೆ. ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಪ್ರಕರಣ ದಾಖಲಿಸಲಾಗುತ್ತದೆ ಎಂದರು.

ಕಾನೂನು ಪ್ರಕಾರ ಅರ್ಜಿ ಸಲ್ಲಿಸುವ ವಿಚಾರದಲ್ಲೂ ಸ್ಪಷ್ಟ ನಿಯಮಗಳಿವೆ. ಬಿಎಲ್‌ಎ-2 ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸರಿಯಾಗಿದ್ದರೆ ಮಾತ್ರ ಅದನ್ನು ಪರಿಗಣಿಸಲಾಗುತ್ತದೆ. ಅರ್ಹ ಮತದಾರರ ಮತದಾನ ಹಕ್ಕಿಗೆ ಧಕ್ಕೆಯಾದರೆ ಆ ಕುರಿತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಒಂದೇ ಒಂದು ಅರ್ಹ ಮತದಾರರ ಮತವೂ ಡಿಲೀಟ್ ಆಗಿಲ್ಲ. ಯಾರದ್ದಾದರೂ ಹೆಸರು ಬಿಟ್ಟುಹೋಗಿದ್ದರೆ ಮಾಹಿತಿ ನೀಡಿದರೆ ಮತ್ತೆ ಸೇರಿಸಲಾಗುತ್ತದೆ. ಬಿಜೆಪಿ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದೆ. ತಾವು ಸಲ್ಲಿಸಿದ್ದ ಅರ್ಜಿಗಳನ್ನು ಇದೀಗ ವಾಪಸ್ ಪಡೆಯುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಕಬ್ಬಿಗೆ ₹6 ಸಾವಿರ ಬೆಲೆ ವಿಚಾರ
ಕಬ್ಬಿಗೆ ಟನ್‌ಗೆ ₹6 ಸಾವಿರ ಬೆಲೆ ನಿಗದಿ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಕಾರ್ಖಾನೆಗಳು ಮತ್ತು ರೈತರ ನಡುವೆ ಒಪ್ಪಂದವಾದ ಬಳಿಕವೇ ಪ್ರಕ್ರಿಯೆ ಆರಂಭವಾಗಲಿದೆ. ಇನ್ನೂ ಸಮಯವಿದೆ ಎಂದರು.

ಕಬ್ಬಿನ ಬೆಲೆ ₹6 ಸಾವಿರಕ್ಕೆ ನಿಗದಿಪಡಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಎಂಎಸ್‌ಪಿ ದರವನ್ನು ಹೆಚ್ಚಿಸಬೇಕು. ₹6 ಸಾವಿರ ಬೆಲೆಯನ್ನು ಕೇಂದ್ರ ಸರ್ಕಾರವೇ ನಿಗದಿಪಡಿಸಬೇಕು. ರಾಜ್ಯ ಸರ್ಕಾರಕ್ಕೆ ಅದನ್ನು ನಿಗದಿಪಡಿಸುವ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದರು.

ಎಂಎಸ್‌ಪಿ ಹೆಚ್ಚಳಕ್ಕೆ ನಿಯೋಗದ ಮೂಲಕ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಪ್ರತಿವರ್ಷ ಎಂಎಸ್‌ಪಿ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗುತ್ತಿದ್ದು, ಈವರೆಗೆ ಹೆಚ್ಚಳವಾಗಿಲ್ಲ. ಈ ವರ್ಷ ಎಂಎಸ್‌ಪಿ ಹೆಚ್ಚಾಗುವ ಸಾಧ್ಯತೆ ಇದೆ ಎಂದರು.

ರೈತರ ಸಭೆ ನಡೆದ ಬಳಿಕ ನಮ್ಮನ್ನು ಕೇಂದ್ರ ಸರ್ಕಾರ ಕರೆದರೆ ಸಭೆಗೆ ತೆರಳುತ್ತೇವೆ. ಸದ್ಯ ಕೇಂದ್ರ ಸರ್ಕಾರದಿಂದ ಯಾವುದೇ ಆಹ್ವಾನ ಬಂದಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಖಾಲಿ ಸಚಿವ ಸ್ಥಾನಗಳ ಭರ್ತಿ
ರಾಜ್ಯದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳನ್ನು ಯಾವಾಗ ಭರ್ತಿ ಮಾಡಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಸತೀಶ್ ಜಾರಕಿಹೊಳಿ, “ಆದಷ್ಟು ಬೇಗ ಸಚಿವ ಸ್ಥಾನಗಳನ್ನು ಭರ್ತಿ ಮಾಡುತ್ತೇವೆ” ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button