CrimeKannada NewsKarnataka NewsLatestNational

*ಅಧಿಕಾರಿ ಎಂದು ನಂಬಿಸಿ ಆಪ್‌ ನಾಯಕನನ್ನೇ ಮದುವೆಯಾದ ಮಹಿಳೆ*: *ಕೆಲವೇ ತಿಂಗಳಲ್ಲಿ ಚಿನ್ನದೊಂದಿಗೆ ಪರಾರಿ!*

ಪ್ರಗತಿವಾಹಿನಿ ಸುದ್ದಿ: ತಾನು ಸರ್ಕಾರಿ ಅಧಿಕಾರಿಯೆಂದು ಪರಿಚಯಿಸಿಕೊಂಡ ಮಹಿಳೆಯೊಬ್ಬರು ಪಂಜಾಬ್‌ನ ಎಎಪಿ ನಾಯಕರೊಬ್ಬರನ್ನು ಮದುವೆಯಾದ ಬಳಿಕ ಕೆಲವೇ ತಿಂಗಳಲ್ಲಿ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ. ಮಹಿಳೆ ತನ್ನ ವೈವಾಹಿಕ ಸ್ಥಿತಿ, ವಯಸ್ಸು ಸೇರಿದಂತೆ ಹಲವು ಮಾಹಿತಿಗಳನ್ನು ಮುಚ್ಚಿಟ್ಟು ವಂಚಿಸಿದ್ದಾರೆ ಎಂದು ಎಎಪಿ ಜಂಟಿ ಕಾರ್ಯದರ್ಶಿ ಅಮರಿಂದರ್ ಸಿಂಗ್ ಮಂಡೋಫಾಲ್‌ ದೂರು ನೀಡಿದ್ದಾರೆ.

ಅಮರಿಂದರ್ ಸಿಂಗ್ ಅವರು ಫೆಬ್ರವರಿ 2026ರಲ್ಲಿ ಮನ್ವಿಂದರ್ ಕೌರ್ ಅವರನ್ನು ವಿವಾಹವಾಗಿದ್ದರು. ಮದುವೆಗೂ ಮುನ್ನ ಕೌರ್ ಅವರನ್ನು ಪಿಸಿಎಸ್ ಅಧಿಕಾರಿ ಹಾಗೂ ಅವಿವಾಹಿತೆ ಎಂದು ಕುಟುಂಬದವರು ಪರಿಚಯಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮದುವೆಯಾದ ಕೆಲವೇ ತಿಂಗಳ ಬಳಿಕ ಕೌರ್ ಚಿನ್ನ ಮತ್ತು ಬೆಳ್ಳಿ ಆಭರಣಗಳು ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಅಮರಿಂದರ್ ಆರೋಪಿಸಿದ್ದಾರೆ. ಬಳಿಕ ಮಾಹಿತಿ ಕಲೆಹಾಕಿದಾಗ ಕೌರ್‌ಗೆ ಈ ಹಿಂದೆಯೇ ಮದುವೆಯಾಗಿದ್ದು, ವಿಚ್ಛೇದನವೂ ಆಗಿದೆ ಎಂಬುದು ತಿಳಿದುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೌರ್‌ಗೆ 18 ವರ್ಷದ ಮಗನಿದ್ದಾನೆ ಎಂಬ ಮಾಹಿತಿಯೂ ತನಿಖೆಯ ವೇಳೆ ತಿಳಿದುಬಂದಿದೆ ಎಂದು ಅಮರಿಂದರ್ ಹೇಳಿದ್ದಾರೆ. ತನ್ನಿಂದ ವೈವಾಹಿಕ ಮಾಹಿತಿಯನ್ನು ಮುಚ್ಚಿಟ್ಟು ಮದುವೆ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ಕೌರ್ ಸೇರಿದಂತೆ ಆರು ಮಂದಿಯ ವಿರುದ್ಧ ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿಸಿದ ಆರೋಪಗಳಡಿ ಪ್ರಕರಣ ದಾಖಲಿಸಿದ್ದಾರೆ. ಕೌರ್ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರನ್ನು ಸಹ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಗಿದೆ.

ಎಫ್‌ಐಆರ್‌ನಲ್ಲಿ ತಾರ್ಲೋಚನ್ ಸಿಂಗ್, ವರಿಂದರ್‌ಜಿತ್ ಕೌರ್, ನರಿಂದರ್ ಸಿಂಗ್ ಗೋಲ್ಡಿ, ರುಪಿಂದರ್ ಕೌರ್ ಹಾಗೂ ಮಾಜಿ ಗ್ರಾಮ ಸರಪಂಚ್ ಸುರಿಂದರ್ ಸಿಂಗ್ ರಾಣಾ ಅವರ ಹೆಸರುಗಳೂ ಸೇರಿವೆ. ಆರೋಪಿಗಳು ತರ್ನ್ ತರನ್ ಜಿಲ್ಲೆಯ ಭಿಖಿವಿಂದ್ ಪೊಲೀಸ್ ಠಾಣಾ ವ್ಯಾಪ್ತಿಯ ಸುರ್ ಸಿಂಗ್ ಗ್ರಾಮದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಅಮರಿಂದರ್ ಸಿಂಗ್ ಅವರ ಮದುವೆಗೆ ಪಂಜಾಬ್ ವಿಧಾನಸಭೆ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಹಾಗೂ ಸಚಿವ ತರುಣ್‌ಪ್ರೀತ್ ಸಿಂಗ್ ಸೌಂಡ್ ಸೇರಿದಂತೆ ಎಎಪಿಯ ಹಲವು ನಾಯಕರು ಮತ್ತು ಜನಪ್ರತಿನಿಧಿಗಳು ಭಾಗವಹಿಸಿದ್ದರು. ಮದುವೆಯ ಸಂಭ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದ್ದು, ಪೊಲೀಸರು ಮಹಿಳೆ ಸೇರಿದಂತೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button